Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಹೆದ್ದಾರಿ ಸಮಸ್ಯೆ ಬಗೆಹರಿಸಲು 10 ದಿನಗಳ ಗಡುವು

ಹೆದ್ದಾರಿ ಸಮಸ್ಯೆ ಬಗೆಹರಿಸಲು 10 ದಿನಗಳ ಗಡುವು

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 8

ಹೆದ್ದಾರಿ ಸಮಸ್ಯೆ ಬಗೆಹರಿಸಲು 10 ದಿನಗಳ ಗಡುವು
ಉಡುಪಿ: ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ಹಾಗೂ 169 ಮತ್ತು 169ಎನಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿರುವ ಎಲ್ಲಾ ರಸ್ತೆಗಳ ಮೂಲಭೂತ ಸಮಸ್ಯೆಗಳನ್ನು 10 ದಿನಗಳೊಳಗೆ ಸಂಪೂರ್ಣವಾಗಿ ಬಗೆಹರಿಸಿ, ಆ ಕುರಿತು ಪೂರ್ಣ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಾಕೀತು ಮಾಡಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಗೆ ಗೈರು: ಡಿಸಿ ಗರಂ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜಿಲ್ಲಾಡಳಿತ ಸೂಚಿಸುವ ಸಭೆ ಮಾತ್ರವಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ಸಭೆಗಳಿಗೂ ಗೈರಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮತ್ತು ಇತರ ಕಾರ್ಯಗಳನ್ನು ಸುಗಮವಾಗಿ ಮಾಡಲು ಜಿಲ್ಲಾಡಳಿತದ ನೆರವು ಬೇಕಿದ್ದಲ್ಲಿ ಜಿಲ್ಲಾಡಳಿತ ನೀಡುವ ಎಲ್ಲಾ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡುಬರುತ್ತಿರುವ ಎಲ್ಲಾ ಸಮಸ್ಯೆಗಳನ್ನು ನಿಗದಿತ ಅವಧಿಯಲ್ಲಿ ಸಂಪೂರ್ಣವಾಗಿ ಬಗೆಹರಿಸಿ, ಸಮಸ್ಯೆ ಸರಿಪಡಿಸಿದ ದಿನಾಂಕ ಮತ್ತು ಸಮಯವನ್ನೊಳಗೊಂಡ ಛಾಯಾಚಿತ್ರ ಹಾಗೂ ವರದಿ ಸಲ್ಲಿಸಿ, ಮುಂದಿನ ಸಭೆ ಹಾಗೂ ಜಿಲ್ಲಾಡಳಿತ ಸೂಚಿಸುವ ಎಲ್ಲಾ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಎಚ್ಚರಿಕೆ ನೀಡಿದರು.

ದೂರು ದಾಖಲಿಸಿ
ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ತೊಂದರೆ ಇರುವ ಅಡೆತಡೆಗಳನ್ನು ತಕ್ಷಣ ಸರಿಪಡಿಸಬೇಕು. ತುರ್ತು ಅಗತ್ಯವಿರುವೆಡೆ ತಕ್ಷಣ ಬೀದಿ ದೀಪ ಅಳವಡಿಸಬೇಕು. ಹೆದ್ದಾರಿ ಪಕ್ಕದಲ್ಲಿ ನೀರು ಹರಿಯಲು ಮತ್ತು ಸಂಚಾರಕ್ಕೆ ತಡೆಯುಂಟುಮಾಡುವ ಗಿಡಗಳನ್ನು ಕೂಡಲೇ ತೆರವುಗೊಳಿಸಬೇಕು. ಪ್ಲೈ ಓವರ್ ಗಳ ಮೇಲೆ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು.

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತಗಳು ಸಂಭವಿಸಿ, ಸಾವು ಸಂಭವಿಸಿದ್ದಲ್ಲಿ ಸಂಬಂಧಪಟ್ಟ ಹೆದ್ದಾರಿ ಅಧಿಕಾರಿಗಳ ಮೇಲೆ ಕೇಸು ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಹೆದ್ದಾರಿ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ ಮತ್ತು ಸಾರ್ವಜನಿಕರು ಸಲ್ಲಿಸುವ ದೂರು ದಾಖಲಿಸಿ ಅವುಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸಬೇಕು. ಅದಕ್ಕಾಗಿ ದೂರು ನಿರ್ವಹಣಾ ವ್ಯವಸ್ಥೆ ಅಳವಡಿಸಿಕೊಂಡು, ಅದರಲ್ಲಿ ದೂರುಗಳಿಗೆ ಸಂಬಂಧಪಟ್ಟ ಎಲ್ಲಾ ವಿವರಗಳನ್ನು ದಾಖಲಿಸಬೇಕು.

ನಿಗದಿತ ಅವಧಿಯೊಳಗೆ ಸಮಸ್ಯೆ ಬಗೆಹರಿಸದ ಸಿಬ್ಬಂದಿಗಳ ವೇತನ ಮತ್ತು ಭತ್ಯೆ ತಡೆಹಿಡಿಯುವಂತೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ತಿಳಿಸಿದರು.

ಶೀಘ್ರ ಕಾಮಗಾರಿ ಪೂರೈಸಿ
ಹೆದ್ದಾರಿಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಸಿಬ್ಬಂದಿ ಮತ್ತು ಯಂತ್ರೋಪಕರಣ ಅಳವಡಿಸಿಕೊಂಡು ಜಿಲ್ಲಾಡಳಿತ ಸೂಚಿಸುವ ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸಬೇಕು.

ಕುಂದಾಪುರದ ಸಂಗಂ ಜಂಕ್ಷನ್ ನಲ್ಲಿ  ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ನೀರು ಹರಿದುಹೋಗಲು ವ್ಯವಸ್ಥೆ ಹಾಗೂ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಬೀದಿ ದೀಪದ ವ್ಯವಸ್ಥೆ ಮಾಡಬೇಕು.

ಸಾಲಿಗ್ರಾಮ ಬಳಿಯ ಸರ್ವಿಸ್ ರಸ್ತೆ ಕಾಮಗಾರಿ ಸೇರಿದಂತೆ ಬಾಕಿ ಇರುವ ಎಲ್ಲಾ ಅಪೂರ್ಣ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು. ಮಳೆ ನಿಂತ ಕೂಡಲೇ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಎಲ್ಲಾ ರಸ್ತೆಗಳ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ ಕೈಗೊಂಡಿರುವ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗಳಿಗೆ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗಳಿಂದ ಅಗತ್ಯ ಸಹಕಾರ ನೀಡುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಎಎಸ್.ಪಿ ಸಿದ್ದಲಿಂಗಪ್ಪ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಲಿಂಗೇಗೌಡ, ನವಯುಗ ಮತ್ತು ಐಆರ್.ಬಿಯ ಇಂಜಿನಿಯರ್ ಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!