ಸುದ್ದಿಕಿರಣ ವರದಿ
ಗುರುವಾರ, ಜನವರಿ 6, 2022
ಮತ್ತೆ ಲಾಕ್ ಡೌನ್ ನಿಂದ ಹೋಟೆಲ್ ಉದ್ಯಮ ಬೀದಿಗೆ
ಉಡುಪಿ: ಕೋವಿಡ್ ತಡೆ ಹಿನ್ನೆಲೆಯಲ್ಲಿ ಸರಕಾರ ಜಾರಿಗೆ ತರುವ ಕಠಿಣ ನಿಯಮಗಳಿಗೆ ಹೋಟೆಲ್ ಉದ್ಯಮ ಮೊದಲ ಗುರಿಯಾಗಿದ್ದು, ಇದು ಹೀಗೇ ಮುಂದುವರಿದಲ್ಲಿ ಹೋಟೆಲ್ ಉದ್ಯಮ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ಬಾರಿಯ ಲಾಕ್ ಡೌನ್ ಪರಿಸ್ಥಿತಿಯಿಂದಾಗಿ ಈಗಾಗಲೇ ಉದ್ಯಮ ತತ್ತರಿಸಿಹೋಗಿದೆ. ಎಷ್ಟೋ ಹೊಟೇಲ್ ಗಳನ್ನು ನಡೆಸಲಾಗದೆ ಬಾಗಿಲು ಮುಚ್ಚಿವೆ. ನೂರಾರು ಮಂದಿ ಕಾರ್ಮಿಕರು ಕೆಲಸ ಕಳೆದುಕೊಂಡು ಸಂಕಷ್ಟ ಪರಿಸ್ಥಿತಿಗೆ ಸಿಲುಕಿದ್ದಾರೆ. ಈಗಾಗಲೇ ಆರ್ಥಿಕ ನಷ್ಟ ಅನುಭವಿಸಿದವರು, ಸಾಲಬಾಧೆ ತಾಳಲಾರದೆ ಆತ್ಮಹತ್ಯೆಯ ದಾರಿ ತುಳಿದಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಣ್ಣ, ಅತೀ ಸಣ್ಣ ಹೋಟೆಲ್ ಗಳು ಕ್ಯಾಂಟೀನ್ ಸಹಿತ ಎಲ್ಲ ಮಾದರಿಯ ರೆಸ್ಟೋರೆಂಟ್ ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೇನು ವ್ಯಾಪಾರ ಸುಧಾರಿಸುವ ಕಾಲಘಟ್ಟದಲ್ಲಿ ಇವೆ ಎನ್ನುವ ಸಂದರ್ಭದಲ್ಲಿ ಮತ್ತೆ ಸರಕಾರದ ಕರ್ಫ್ಯೂ ನಿಯಮಗಳು ಹೋಟೆಲ್ ಉದ್ಯಮಕ್ಕೆ ಬರೆ ಎಳೆಯುತ್ತಿದೆ.
ಇದೀಗ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂದಿಂದಾಗಿ ಹೋಟೆಲ್ ಉದ್ಯಮ ಸಂಕಷ್ಟ ಅನುಭವಿಸಲಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಸಾಮಾಜಿಕ ಜವಾಬ್ದಾರಿಯೊಂದಿಗೆ ಸರಕಾರದ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದೆ. ಆದ್ದರಿಂದ ಸರಕಾರ ಕರ್ಫ್ಯೂ ನಿಯಮಾವಳಿ ಸಡಿಲಿಸಿ ಹೋಟೆಲ್ ಗಳ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು ಎಂದು ತಲ್ಲೂರು ಶಿವರಾಮ ಶೆಟ್ಟಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ