Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಸರ್ಕಾರಿ ಆಸ್ಪತ್ರೆಯಲ್ಲಿ 10 ಸಾವಿರನೇ ಮಗು ಜನನ

ಸರ್ಕಾರಿ ಆಸ್ಪತ್ರೆಯಲ್ಲಿ 10 ಸಾವಿರನೇ ಮಗು ಜನನ

ಉಡುಪಿ: ಕಳೆದ ಎರಡು ವರ್ಷದಿಂದ ಕಾರ್ಯಾಚರಿಸುತ್ತಿರುವ ಇಲ್ಲಿನ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಫೆ. 24ರಂದು 10 ಸಾವಿರನೇ ಮಗು ಜನಿಸಿದ್ದು, ಆ ಸಂಭ್ರಮಾಚರಣೆಯನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.

10,000ನೇ ಮಗು ಮುಹಮ್ಮದ್ ಸಾಜಿಲ್ ಮತ್ತು ಮಗುವಿನ ಹೆತ್ತವರಾದ ಸುರತ್ಕಲ್ ಕೃಷ್ಣಾಪುರ ನಿವಾಸಿ ಉಮಾ ಬಾನು- ಉಸ್ಮಾನ್ ಆಲಿ ದಂಪತಿಯನ್ನು ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ. ಆರ್. ಶೆಟ್ಟಿ, ಶಾಸಕ ರಘುಪತಿ ಭಟ್ ಹಾಗೂ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಮಗುವಿಗೆ ಉಡುಗೊರೆ ನೀಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ 2018ರ ಜು. 2ರಂದು ಜನಿಸಿದ ಮೊದಲ ಮಗು ತಶ್ವಿ ಮತ್ತು ಆಕೆಯ ತಾಯಿ ಬೆಳ್ಮಣ್ ಸಮೀಪದ ನಂದಳಿಕೆ ನಿವಾಸಿ ರೂಪಾ ಪ್ರವೀಣ ಅವರನ್ನೂ ಗೌರವಿಸಲಾಯಿತು.

ದುಃಸ್ಥಿತಿ ಕಂಡು ಒಪ್ಪಂದ
ಈ ಸಂದರ್ಭದಲ್ಲಿ ಮಾತನಾಡಿದ ಡಾ| ಬಿ. ಆರ್. ಶೆಟ್ಟಿ. ಬಡವರಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗಬೇಕು ಎಂಬ ಆಶಯದೊಂದಿಗೆ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 2018ರಲ್ಲಿ ಈ ಆಸ್ಪತ್ರೆ ನಿರ್ಮಾಣ ಮಾಡಲಾಯಿತು. ಆಸ್ಪತ್ರೆಯಲ್ಲಿ 10,000 ಹೆರಿಗೆ ನಡೆದಿರುವುದು ಖುಷಿ ತಂದಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ದುಃಸ್ಥಿತಿ ಕಂಡು ಅಂದಿನ ಕಾಂಗ್ರೆಸ್ ಸರ್ಕಾರದೊಂದಿಗೆ ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆ ನಿರ್ಮಾಣ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದಂತೆ ಆಸ್ಪತ್ರೆ ಕಾರ್ಯಾರಂಭಿಸಿದ್ದು, ಉಡುಪಿ ಮಾತ್ರವಲ್ಲದೆ ರಾಜ್ಯದ 30 ಜಿಲ್ಲೆಗಳು, ಹೊರ ರಾಜ್ಯಗಳ ವಲಸೆ ಕಾರ್ಮಿಕರೂ ಆಸ್ಪತ್ರೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಣಿ ಶುಲ್ಕವಾಗಿ ನಿದರ್ಿಷ್ಟ ದರ ಪಡೆಯಲಾಗುತ್ತದೆ. ಇಲ್ಲಿ ಬಿಲ್ಲಿಂಗ್ ಕೌಂಟರ್ ಎಂಬುದೇ ಇಲ್ಲ. ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಷರತ್ತುಗಳಿಲ್ಲದೆ ಚಿಕಿತ್ಸೆ ನೀಡಲಾಗುತ್ತಿದೆ. ಹಣ ಮಾಡುವ ಉದ್ದೇಶದಿಂದ ಆಸ್ಪತ್ರೆ ನಿರ್ಮಿಸಿಲ್ಲ. ಜನರ ಸಂತಸದ ನಗುವೇ ನನಗೆ ಸಂಪತ್ತು ಎಂದರು.

ಬಿ.ಆರ್.ಎಸ್ ವೆಂಚರ್ಸ್ ಕಂಟ್ರಿ ಹೆಡ್ ಕುಶಲ್ ಶೆಟ್ಟಿ, ನಗರಸಭೆ ಎದುರಿನ ಜಾಗದಲ್ಲಿ ನಿರ್ಮಾಣವಾಗುತ್ತಿರುವ 400 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬರುವ ಲಾಭವನ್ನು ಬಿ. ಆರ್. ಶೆಟ್ಟಿ ಸ್ವಂತಕ್ಕೆ ಬಳಸುವುದಿಲ್ಲ. ಬದಲಾಗಿ ಸರ್ಕಾರದೊಂದಿಗಿನ ಒಪ್ಪಂದದಂತೆ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗಿರುವ 200 ಬೆಡ್ ಗಳ ಆಸ್ಪತ್ರೆ ನಿರ್ವಹಣೆ ಹಾಗೂ 400 ಬೆಡ್ ಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ವಹಣೆಗೆ ಬಳಸಲಾಗುತ್ತದೆ. 30 ವರ್ಷದ ಗುತ್ತಿಗೆ ಅವಧಿ ಮುಗಿದ ಬಳಿಕ ಎರಡೂ ಆಸ್ಪತ್ರೆಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಲಾಗುತ್ತದೆ ಎಂದರು.

ಶಾಸಕ ರಘುಪತಿ ಭಟ್, ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರನ್ನೊಳಗೊಂಡ ತಂಡ ನಿಯೋಜಿಸಬೇಕು. ಜಿಲ್ಲಾ ಸರ್ಜನ್ ಘಟಕದ ಉಸ್ತುವಾರಿಯಾಗಿರಬೇಕು. ಅದರಿಂದ ಆಸ್ಪತ್ರೆಯಲ್ಲಿ ಸರ್ಕಾರದ ಪ್ರಾತಿನಿಧಿತ್ವ ಲಭಿಸಿದಂತಾಗುತ್ತದೆ ಎಂದರು.

400 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ 3 ನೆಲಮಹಡಿಯಲ್ಲಿ ನಿರ್ಮಾಣ ಮಾಡುವ ಪ್ರಸ್ತಾವವನ್ನು ಬಿ.ಆರ್.ಎಸ್ ಸಂಸ್ಥೆ ಮುಂದಿಟ್ಟಿದೆ. ಆದರೆ, ಕರಾವಳಿಯಲ್ಲಿ ಮೂರು ನೆಲಮಹಡಿ ನಿರ್ಮಾಣಕ್ಕೆ ಝೆಡ್.ಆರ್.ಆರ್ ನಿಯಮದಡಿ ಅವಕಾಶವಿಲ್ಲ. ಅನುಮತಿ ಸಿಗಬೇಕಾದಲ್ಲಿ ಝೆಡ್.ಆರ್.ಆರ್. ನಿಯಮಗಳಿಗೆ ತಿದ್ದುಪಡಿಯಾಗಬೇಕು ಎಂದರು.

ಜಿಲ್ಲಾಧಿಕಾರಿ ಜಿ. ಜಗದೀಶ್, ಆಸ್ಪತ್ರೆಯಲ್ಲಿ 10 ಸಾವಿರ ಹೆರಿಗೆ ನಡೆದಿರುವುದು ಸಂತೋಷದ ಸಂಗತಿ. ಆಸ್ಪತ್ರೆ ಸೇವೆ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು. ಆಸ್ಪತ್ರೆ ನಿರ್ವಹಣೆಯನ್ನು ಆರೋಗ್ಯ ಸುರಕ್ಷಾ ಸಮಿತಿ ಕಣ್ಗಾವಲಿರಿಸಿದೆ ಎಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!