Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಅವಿಭಜಿತ ದ.ಕ ಜಿಲ್ಲೆಯಲ್ಲಿ 1,400 ಕಿಂಡಿ ಅಣೆಕಟ್ಟು ನಿರ್ಮಾಣ

ಅವಿಭಜಿತ ದ.ಕ ಜಿಲ್ಲೆಯಲ್ಲಿ 1,400 ಕಿಂಡಿ ಅಣೆಕಟ್ಟು ನಿರ್ಮಾಣ

ಸುದ್ದಿಕಿರಣ ವರದಿ
ಭಾನುವಾರ, ಜನವರಿ 30

ಅವಿಭಜಿತ ದ.ಕ ಜಿಲ್ಲೆಯಲ್ಲಿ 1,400 ಕಿಂಡಿ ಅಣೆಕಟ್ಟು ನಿರ್ಮಾಣ
ಹೆಬ್ರಿ: ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ 1,400 ಕಿಂಡಿ ಅಣೆಕಟ್ಟು ನಿರ್ಮಿಸಲು ಸ್ಥಳ ಗುರುತಿಸಲಾಗಿದ್ದು, ಈ ವರ್ಷ ಅದಕ್ಕಾಗಿ 500 ಕೋಟಿ ರೂ. ಬಿಡುಗಡೆ ಮಾಡಿ ಕಾರ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ. ಸಿ. ಮಾಧುಸ್ವಾಮಿ ಹೇಳಿದರು.

ಭಾನುವಾರ ಇಲ್ಲಿಗೆ ಸಮೀಪದ ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 560 ಲಕ್ಷ ರೂ. ವೆಚ್ಚದಲ್ಲಿ 4 ಕಿಂಡಿ ಅಣೆಕಟ್ಟು ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಮಳೆ ನೀರು ಹರಿದು ಸಮುದ್ರ ಸೇರುವುದನ್ನು ತಡೆದು ಕೃಷಿ, ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲು ಅನುಕೂಲವಾಗುವಂತೆ ಪಶ್ಚಿಮ ವಾಹಿನಿ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ಅದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯ ಜೊತೆಗೆ ಮಣ್ಣಿನ ಫಲವತ್ತತೆಯ ಹೆಚ್ಚಳವೂ ಆಗಲಿದೆ. ರಾಜ್ಯದಲ್ಲಿ ನೀರು ಹರಿಯುವ ಹಳ್ಳಗಳಲ್ಲಿ ಶೇಖರಣೆಯಾಗುವ ಹೂಳು ತೆಗೆಯಲೂ ಯೋಜನೆ ರೂಪಿಸಲಾಗುವುದು ಹೇಳಿದರು.

ಡೀಮ್ಡ್ ಅರಣ್ಯ ಸಮಸ್ಯೆ ಪರಿಹಾರಕ್ಕೆ ಯತ್ನ
ಈ ಭಾಗದ ಡೀಮ್ಡ್ ಅರಣ್ಯ ಸಮಸ್ಯೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯದಲ್ಲಿ 7.70 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ವ್ಯಾಪ್ತಿಯಿಂದ ಕೈಬಿಡುವಂತೆ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಲಾಗಿದೆ. ಈ ಭೂಮಿಯನ್ನು ಅರ್ಹ ಭೂ ರಹಿತರಿಗೆ ನೀಡಲಾಗುವುದು ಎಂದ ಸಚಿವರು, ಈಗಾಗಲೇ ಅರಣ್ಯ ವ್ಯಾಪ್ತಿಯ ಸಣ್ಣ ಹಿಡುವಳಿದಾರರು ಮತ್ತು ಮನೆ ಕಟ್ಟಿಕೊಂಡಿರುವವರು ಎದುರಿಸುತ್ತಿರುವ ಡೀಮ್ಡ್ ಅರಣ್ಯ ಸಮಸ್ಯೆ ಶೀಘ್ರದಲ್ಲಿ ಬಗೆಹರಿಯಲಿದೆೆ ಎಂದರು.

100 ಕಿಂಡಿ ಅಣೆಕಟ್ಟು ನಿರ್ಮಾಣ
ಅಧ್ಯಕ್ಷತೆ ವಹಿಸಿದ್ದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಈ ಭಾಗದಲ್ಲಿ ಅಂತರ್ಜಲ ವೃದ್ಧಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, 2018ರಿಂದ 2023ರ ಅವಧಿಯೊಳಗೆ 100 ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆ ಇದೆ ಎಂದರು.

ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಈ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಪ್ರಸ್ತುತ ಸರಕಾರ ಡೀಮ್ಡ್ ಫಾರೆಸ್ಟ್ ನಿಂದ ಭೂಮಿಯನ್ನು ಕೈಬಿಡುವ ಕುರಿತಂತೆ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದು, ಈ ಬಗ್ಗೆ ಶೀಘ್ರದಲ್ಲಿ ಸರ್ಕಾರದ ಸುತ್ತೋಲೆ ಬರಲಿಲಿದೆ. ಜನರ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದರು.

ಶಿವಪುರ ಗ್ರಾಮದ ದೇವಸ್ಥಾನಬೆಟ್ಟುನಲ್ಲಿ 150 ಲಕ್ಷ ರೂ, ಪುತ್ತಿಬೆಟ್ಟುನಲ್ಲಿ 150 ಲಕ್ಷ ರೂ, ಮುಕ್ಕಾಣಿ ಗೋನುಮಾರುನಲ್ಲಿ 155 ಲಕ್ಷ ರೂ, ಕುಂಟೆಬೆಟ್ಟುನಲ್ಲಿ 105 ಲಕ್ಷ ರೂ. ಸೇರಿದಂತೆ ಒಟ್ಟು 560 ಲಕ್ಷ ರೂ. ವೆಚ್ಚದ ಕಿಂಡಿ ಆಣೆಕಟ್ಟು ಕಾಮಗಾರಿಗಳನ್ನು ಸಚಿವ ಮಾಧುಸ್ವಾಮಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶಿವಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ, ವರಂಗ ಗ್ರಾ.ಪಂ. ಅಧ್ಯಕ್ಷೆ ಉಷಾ ಹೆಬ್ಬಾರ್, ಸಣ್ಣ ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ಮೆಸ್ಕಾಂ ನಿರ್ದೇಶಕ ದಿನೇಶ್ ಪೈ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!