Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಕದ್ರಿ ಯೋಧ ಸ್ಮಾರಕ ಅಭಿವೃದ್ಧಿಗೆ 25 ಲಕ್ಷ

ಕದ್ರಿ ಯೋಧ ಸ್ಮಾರಕ ಅಭಿವೃದ್ಧಿಗೆ 25 ಲಕ್ಷ

ಮಂಗಳೂರು: ಕಾರ್ಗಿಲ್ ಯುದ್ಧ ಗೆಲುವಿಗೆ 22 ವರ್ಷ ಸಂದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಕದ್ರಿ ಯೋಧ ಸ್ಮಾರಕಕ್ಕೆ ತೆರಳಿ ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ಅನೇಕ ಯೋಧರು ಬಲಿದಾನ ಮಾಡಿದ್ದಾರೆ. ಅವರೆಲ್ಲರನ್ನೂ ರಾಜಕೀಯ ರಹಿತವಾಗಿ ಗೌರವಿಸುವ ಕೆಲಸವಾಗಬೇಕು. ಮಾತೃಭೂಮಿಯ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಯೋಧರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಭಾರತ ಎಂದೆಂದಿಗೂ ಶಾಂತಿ ಬಯಸುವ ರಾಷ್ಟ್ರ. ಆದರೆ, ಅದನ್ನು ಅಸಹಾಯತೆ ಎಂದು ಭಾವಿಸಿದರೆ ಕಾರ್ಗಿಲ್ ಕದನ, ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಮೇಲಿನ ದಾಳಿ ಮೂಲಕ ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಡುವಲ್ಲಿ ಭಾರತೀಯ ಸೇನೆ ಸಮರ್ಥವಾಗಿದೆ ಎಂದರು.

ಕದ್ರಿಯ ಯೋಧ ಸ್ಮಾರಕ ಅಭಿವೃದ್ಧಿಗೆ 25 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗುವುದು. ಮೇಲ್ಛಾವಣಿ, ಬೆಳಕಿನ ವ್ಯವಸ್ಥೆ, ಸೌಂಡ್ ಸಿಸ್ಟಮ್, ಕಾರಂಜಿಗಳ ಅಭಿವೃದ್ಧಿ ಸೇರಿದಂತೆ ಯೋಧ ಸ್ಮಾರಕದ ಸಮಗ್ರ ಅಭಿವೃದ್ಧಿಗೆ ಅನುದಾನ ವಿನಿಯೋಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರಪಾಲಿಕೆ ಸದಸ್ಯೆ ಶಕಿಲಾ ಕಾವ, ಬಿಜೆಪಿ ಮುಖಂಡರಾದ ರೂಪಾ ಡಿ. ಬಂಗೇರ, ಪೂಜಾ ಪೈ ಮತ್ತು ಪ್ರಶಾಂತ್ ಪೈ, ಸೈನಿಕರ ಸಂಘದ ಉಪಾಧ್ಯಕ್ಷ ಶ್ರೀಕಾಂತ ಶೆಟ್ಟಿ ಬಾಳ, ಕಾರ್ಯದರ್ಶಿ ಕ್ಯಾ| ದೀಪಕ್ ಅಡ್ಯಂತಾಯ, ಸಂಘದ ನಿಕಟಪೂರ್ವ ಅಧ್ಯಕ್ಷ ವಿಕ್ರಮ್ ದತ್ತ, ಹಿರಿಯ ಅಧಿಕಾರಿಗಳಾದ ಬ್ರಿಗೇಡಿಯರ್ ಐ. ಎನ್. ರೈ, ಕ| ಎನ್. ಶರತ್ ಭಂಡಾರಿ, ಕ| ಜಯಚಂದ್ರನ್, ಜೆ. ಪಿ ರೈ, ಲಯನ್ಸ್ ನ ವಿಜಯ ವಿಷ್ಣು ಮಯ್ಯ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!