Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಮರವಂತೆಯಲ್ಲಿ ಹಾನಿಗೊಂಡ ರಸ್ತೆ ನಿರ್ಮಾಣಕ್ಕೆ 3 ಕೋ. ಬಿಡುಗಡೆಗೆ ಸೂಚನೆ

ಮರವಂತೆಯಲ್ಲಿ ಹಾನಿಗೊಂಡ ರಸ್ತೆ ನಿರ್ಮಾಣಕ್ಕೆ 3 ಕೋ. ಬಿಡುಗಡೆಗೆ ಸೂಚನೆ

ಉಡುಪಿ: ಜಿಲ್ಲೆಯಲ್ಲಿ ತೌಖ್ತೆ ಚಂಡಮಾರುತದಿಂದಾಗಿ ಸಂಭವಿಸಿದ ಸಮುದ್ರ ಕೊರೆತದಿಂದ ಹಾನಿಗೊಳಗಾದ ಬೈಂದೂರು ತಾಲೂಕಿನ ಮರವಂತೆಯ 1.5 ಕಿ.ಮೀ. ರಸ್ತೆಯ ಮರುನಿರ್ಮಾಣಕ್ಕೆ ತಕ್ಷಣ 3 ಕೋ. ರೂ. ಬಿಡುಗಡೆಗೊಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚನೆ ನೀಡಿದರು.

ಶನಿವಾರ ತಮ್ಮ ಗೃಹ ಕಚೇರಿ ಕೃಷ್ಣಾದಿಂದ ರಾಜ್ಯದ ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಸಂದರ್ಭ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಂಬಂಧಿಸಿದ ಜಿಲ್ಲೆಗಳ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದರು.

ಕಾಂಕ್ರೀಟ್ ರಸ್ತೆ ನಿರ್ಮಿಸಿ
ಮರವಂತೆಯಲ್ಲಿ ರಸ್ತೆ ಹಾನಿಯಾದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾಧಿಕಾರಿ ಜಿ. ಜಗದೀಶ್ ಮುಖ್ಯಮಂತ್ರಿ ಗಮನಕ್ಕೆ ತಂದರು. ಪ್ರಸ್ತುತ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿದ್ದು, ರಸ್ತೆ ಪುನರ್ ನಿರ್ಮಿಸಲು 3 ಕೋ. ರೂ. ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್ ರಸ್ತೆಯನ್ನಾಗಿ ಸುಸಜ್ಜಿತವಾಗಿ ನಿರ್ಮಿಸುವಂತೆ ಸೂಚಿಸಿದರು. ಅಲ್ಲದೆ, ಜಿಲ್ಲೆಯಲ್ಲಿ ಸಂಭವಿಸಿರುವ ಇತರ ಹಾನಿಗೆ ಅಗತ್ಯವಿರುವ ಪರಿಹಾರವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸುವುದಾಗಿ ಮುಖ್ಯಮಂತ್ರಿ ಹೇಳಿದರು.

ಹಾನಿ ತಂದಿತ್ತ ಅಧಿಕ ಮಳೆ
ಜಿಲ್ಲೆಯಲ್ಲಿ ಇದುವರೆಗಿನ ವಾಡಿಕೆ ಮಳೆ 770 ಮಿ.ಮೀ. ಇದ್ದು, ಈಗಾಗಲೇ 1,243 ಮಿ.ಮೀ. ಮಳೆ ಆಗಿದ್ದು, 61 ಶೇ. ಅಧಿಕ ಮಳೆ ಬಿದ್ದಿದೆ. ತೌಖ್ತೆ ಚಂಡಮಾರುತ ಮತ್ತು ಮಳೆಯಿಂದಾಗಿ 476 ಮನೆ ಹಾನಿ ಮತ್ತು 15 ಕೊಟ್ಟಿಗೆಗಳಿಗೆ ಹಾನಿಯಾಗಿದ್ದು, 1 ಜೀವ ಹಾನಿ ಸಂಭವಿಸಿದೆ. ಜೀವ ಹಾನಿಗೆ 5 ಲಕ್ಷ ರೂ. ಪರಿಹಾರ ಮೆಸ್ಕಾಂ ನೀಡಿದೆ. ಜಿಲ್ಲೆಯ ವಿಪತ್ತು ಪರಿಹಾರ ನಿಧಿಯಲ್ಲಿ 7.80 ಕೋ. ರೂ. ಇದ್ದು, ಹಣದ ಕೊರತೆ ಇಲ್ಲ.

ಮಳೆಗಾಲದಲ್ಲಿ ತುರ್ತು ನೆರವಿಗಾಗಿ ಕಾಳಜಿ ಕೇಂದ್ರ, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ತುರ್ತು ಕರೆಗಳಿಗೆ ಶೀಘ್ರವಾಗಿ ಸ್ಪಂದಿಸಲಾಗುತ್ತಿದೆ. ವಿಪತ್ತು ನಿರ್ವಹಣೆಗಾಗಿ ಎಲ್ಲಾ ತಾಲೂಕುಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ರೂಪಿಸಿ, ಟಾಸ್ಕ್ ಫೋರ್ಸ್ ತಂಡ ರಚಿಸಲಾಗಿದೆ. ಮಂಗಳೂರಿನಲ್ಲಿರುವ ಎನ್.ಡಿ.ಆರ್.ಎಫ್ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಳೆಯಿಂದ ಸಂಭವಿಸುವ ವಿಪತ್ತುಗಳನ್ನು ಯಾವುದೇ ಸಮಯದಲ್ಲಿ ಸಮರ್ಥವಾಗಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.

ಸೂಕ್ತ ಮುಂಜಾಗ್ರತೆಗೆ ಸೂಚನೆ
ರಾಜ್ಯದಲ್ಲಿ ಮಳೆಯಿಂದ ಮಾನವ ಜೀವ ಹಾನಿ ಮತ್ತು ಜಾನುವಾರುಗಳ ಜೀವ ಹಾನಿ ತಡೆಯಲು ಎಲ್ಲಾ ಜಿಲ್ಲೆಗಳಲ್ಲಿ ಸೂಕ್ತ ಮುಂಜಾಗ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕು. ರಾಜ್ಯದ 1,710 ಗ್ರಾಮ ಪಂಚಾಯತ್ ಗಳಲ್ಲಿ ಈಗಾಗಲೇ ರಚಿಸಲಾಗಿರುವ ಗ್ರಾಮೀಣ ಕಾರ್ಯಪಡೆಗಳನ್ನು ನೆರವಿಗೆ ಬಳಸಿಕೊಳ್ಳಬೇಕು. 4 ಎನ್.ಡಿ.ಆರ್.ಎಫ್ ತಂಡ ರಾಜ್ಯದ ವಿವಿಧ ಭಾಗಗಳಲ್ಲಿದ್ದು, ತುರ್ತು ನೆರವಿನ ಅಗತ್ಯವಿದ್ದಲ್ಲಿ ಬಳಸಿಕೊಳ್ಳಬೇಕು.

ಈ ಹಿಂದೆ ಹಾನಿಗೊಳಗಾದ ಪ್ರದೇಶಗಳನ್ನು ಗುರುತಿಸಿಕೊಂಡು ಆ ಪ್ರದೇಶದಲ್ಲಿ ಸಂತ್ರಸ್ತರ ರಕ್ಷಣೆಗೆ ಅಗತ್ಯ ವೈದ್ಯಕೀಯ ಸೇವೆ ಒಳಗೊಂಡ ಕಾಳಜಿ ಕೇಂದ್ರ ಸಿದ್ಧವಾಗಿಟ್ಟುಕೊಂಡು ತಕ್ಷಣ ನಾಗರಿಕರನ್ನು ಸ್ಥಳಾಂತರಿಸಬೇಕು. ನೆರವು ಕಾರ್ಯಾಚರಣೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಸಿದ್ಧಪಡಿಸಿಟ್ಟುಕೊಂಡಿರಬೇಕು. ಕಾರ್ಯಾಚರಣೆ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಸ್ವಯಂಸೇವಾ ಸಂಸ್ಥೆಗಳ ನೆರವು ಪಡೆಯಬೇಕು. ಮಳೆಯಿಂದ ಸಂಪೂರ್ಣ ಮನೆ ನಾಶವಾದಲ್ಲಿ 5 ಲಕ್ಷ ಮತ್ತು ಭಾಗಶಃ ಹಾನಿಯಾದಲ್ಲಿ 2 ಲಕ್ಷ ರೂ. ಪರಿಹಾರ ವಿತರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ವೀಡಿಯೊ ಸಂವಾದದಲ್ಲಿ ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಎಸ್.ಪಿ ವಿಷ್ಣುವರ್ಧನ್, ನಕ್ಸಲ್ ನಿಗ್ರಹ ಪಡೆ ಎಸ್.ಪಿ ನಿಖಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!