ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
******************************
(ಸುದ್ದಿಕಿರಣ ವರದಿ)
ಬೆಂಗಳೂರು, ಜು. 9: ಸ್ವಾತಂತ್ರ್ಯೋತ್ಸವ ದಿನದಂದು ರಾಜ್ಯದಲ್ಲಿ 5 ಸಾವಿರ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ವಸತಿ ಇಲಾಖೆ ಪ್ರಗತಿ ಪರಿಶೀಲನ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ಮುಂದಿನ ಎರಡು ವರ್ಷದಲ್ಲಿ ವಿವಿಧ ವಸತಿ ಯೋಜನೆಗಳಡಿ 9 ಲಕ್ಷ ಮನೆ ನಿರ್ಮಿಸಲು ನಿರ್ಧರಿಸಲಾಗಿದ್ದು, ಆ ಪೈಕಿ ರಾಜ್ಯದ ವಸತಿ ಯೋಜನೆಗಳಡಿ ನಿರ್ಮಿಸುವ 5 ಲಕ್ಷ ಮನೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಡಿ 4 ಲಕ್ಷ ಮನೆ ಸೇರಿವೆ.
ಮನೆ ನಿರ್ಮಾಣಕ್ಕೆ ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ 1.75 ಲಕ್ಷ ಮತ್ತು ಇತರರಿಗೆ 1.20 ಲಕ್ಷ ರೂ. ಸಹಾಯಧನ ದೊರೆಯಲಿದೆ.
ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ 100 ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.