Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ರಾಜ್ಯ ಸರಕಾರಿ ನೌಕರರಿಗೆ ಜುಲೈನಲ್ಲಿ 7ನೇ ವೇತನ ಆಯೋಗ ಜಾರಿ

ರಾಜ್ಯ ಸರಕಾರಿ ನೌಕರರಿಗೆ ಜುಲೈನಲ್ಲಿ 7ನೇ ವೇತನ ಆಯೋಗ ಜಾರಿ

ರಾಜ್ಯ ಸರಕಾರಿ ನೌಕರರಿಗೆ ಜುಲೈನಲ್ಲಿ 7ನೇ ವೇತನ ಆಯೋಗ ಜಾರಿ

ಉಡುಪಿ, ಡಿ. 26 (ಸುದ್ದಿಕಿರಣ ವರದಿ): ಕೇಂದ್ರ ಮತ್ತು ರಾಜ್ಯ ಸರಕಾರಿ ವೇತನದಲ್ಲಿರುವ ವ್ಯತ್ಯಾಸ ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಿ ನೌಕರರ ಬಹು ಬೇಡಿಕೆಯ 7ನೇ ವೇತನ ಆಯೋಗ ಮುಂದಿನ ಜುಲೈ ತಿಂಗಳಿಂದ ಜಾರಿಯಾಗಲಿದ್ದು, ಈ ಕುರಿತು ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಸಕಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಹೇಳಿದರು.

ಭಾನುವಾರ ನಡೆದ ಜಿಲ್ಲಾ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆ ಶೀಘ್ರದಲ್ಲಿ ಜಾರಿಗೊಳ್ಳಲಿದ್ದು, 7ನೇ ವೇತನ ಆಯೋಗ ರಚನೆ ಕುರಿತಂತೆ ಜನವರಿಯಿಂದ ವಿವಿಧ ರೀತಿಯ ಪ್ರಯತ್ನಗಳನ್ನು ಸಂಘ ಮಾಡಲಿದ್ದು, ಈ ಸಂದರ್ಭದಲ್ಲಿ ಎಲ್ಲಾ ನೌಕರರು ಸಂಘ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಕೇಂದ್ರ ಸರಕಾರಿ ನೌಕರರಿಗೆ ಸಮಾನವಾದ ವೇತನವನ್ನು ರಾಜ್ಯ ಸರಕಾರಿ ನೌಕರರು ಪಡೆಯಲು ಸಂಘಟಿತರಾಗಿ ಹೋರಾಡಬೇಕಿದೆ. 7ನೇ ವೇತನ ಆಯೋಗ ಜಾರಿ ನಂತರ ಎನ್.ಪಿ.ಎಸ್ ರದ್ದುಗೊಳಿಸುವ ಕುರಿತಂತೆ ಸಂಘ ಕಾರ್ಯೋನ್ಮುಖವಾಗಲಿದ್ದು, ಸರಕಾರಿ ನೌಕರರ ಯಾವುದೇ ಸಮಸ್ಯೆ ಬಗೆಹರಿಸಲು ಸಂಘ ಸದಾ ಬದ್ಧ ಎಂದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲಾ ಸರಕಾರಿ ನೌಕರರ ಮಕ್ಕಳನ್ನು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಕಾರಾಗೃಹದ ಅಧೀಕ್ಷಕ ಶ್ರೀನಿವಾಸ್, ಹೋಟೆಲ್ ಮಣಿಪಾಲ ಇನ್ ವ್ಯವಸ್ಥಾಪಕ ನಿರ್ದೇಶಕ ಇಬ್ರಾಹಿಂ ಗಂಗೊಳ್ಳಿ, ಜಿಲ್ಲಾ ಸರಕಾರಿ ನೌಕರರ ಸಂಘದ ಖಜಾಂಚಿ ಶರೀಫ್ ಮ. ರೋಣ, ಉಪಾಧ್ಯಕ್ಷ ದೇವರಾಜ ಪಾಣ, ಸುಭಾಶ್ಚಂದ್ರ ಹೆಗ್ಡೆ, ಪ್ರಶಾಂತ್ ಶೆಟ್ಟಿ, ಕುಂದಾಪುರ ತಾ.ಸ.ನೌ.ಸಂ. ಅಧ್ಯಕ್ಷ ದಿನಕರ ಶೆಟ್ಟಿ, ಕಾರ್ಕಳ ತಾ.ಸ.ನೌ.ಸಂ. ಅಧ್ಯಕ್ಷ ಜೋಕಿಂ ಪಿಂಟೊ, ಹೆಬ್ರಿ ತಾ.ಸ.ನೌ.ಸಂ. ಅಧ್ಯಕ್ಷ ಹರೀಶ್ ಪೂಜಾರಿ, ಕಾಪು ತಾ.ಸ.ನೌ.ಸಂ. ಅಧ್ಯಕ್ಷ ನಾಗೇಶ್ ಬಿಲ್ಲವ ಮೊದಲಾದವರಿದ್ದರು.

ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ ವಂದಿಸಿದರು. ದಯಾನಂದ ಮತ್ತು ಮಂಜುಳಾ ಜಯಕರ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!