Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಚಿಂತಕ ಹೋರಾಟಗಾರ ಜಿ.ರಾಜಶೇಖರ್ ಇನ್ನಿಲ್ಲ

ಚಿಂತಕ ಹೋರಾಟಗಾರ ಜಿ.ರಾಜಶೇಖರ್ ಇನ್ನಿಲ್ಲ

ಸುದ್ದಿಕಿರಣ ವರದಿ
ಬುಧವಾರ, ಜುಲೈ 20

ಚಿಂತಕ ಹೋರಾಟಗಾರ ಜಿ. ರಾಜಶೇಖರ್ ಇನ್ನಿಲ್ಲ
ಉಡುಪಿ: ಲೇಖಕ, ಚಿಂತಕ, ಹೋರಾಟಗಾರ, ನಿವೃತ್ತ ಜೀವವಿಮಾ (ಎಲ್.ಐ.ಸಿ.) ನೌಕರ ಜಿ. ರಾಜಶೇಖರ್ ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

2019ರಿಂದ ಪ್ರೊಗ್ರೆಸಿವ್ ಸುಪ್ರ ನ್ಯೂಕ್ಲಿಯರ್ ಪಾಲ್ಸಿ (ಪಾರ್ಕಿಂಸನ್ ಪ್ಲಸ್) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಶ್ವಾಸಕೋಸದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಕೃತಕ ಉಸಿರಾಟದ ವ್ಯವಸ್ಥೆ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಆ ಮೂಲಕ ಕರಾವಳಿ ಕರ್ನಾಟಕದ ಎಡಪಂಥೀಯ ಗಟ್ಟಿ ಧ್ವನಿಯೊಂದು ಅಡಗಿದಂತಾಗಿದೆ.

ಮೃತರು ಪತ್ನಿ , ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ

ಜಿ. ರಾಜಶೇಖರ್ ಸಾಹಿತಿಯಾಗಿ, ವಿಮರ್ಶಕರಾಗಿ, ಚಿಂತಕರಾಗಿ ಗುರುತಿಸಿಕೊಂಡಿದ್ದು, ವಾರ ಪತ್ರಿಕೆ ಹಾಗೂ ದಿನ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. ಅವರ ಬಹುವಚನ ಭಾರತ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದನ್ನು ತಿರಸ್ಕರಿಸುವುದಾಗಿ ಹೇಳಿ ಸುದ್ದಿಯಾಗಿದ್ದರು.

1946ರ ಏಪ್ರಿಲ್ 4ರಂದು ವಿಷ್ಣುಮೂರ್ತಿ ಅಯ್ಯ ಹಾಗೂ ಸಾವಿತ್ರಿಯಮ್ಮನವರ ಎರಡನೇ ಮಗನಾಗಿ, ಬೈಕಾಡಿಯಲ್ಲಿ ಜನಿಸಿದ ರಾಜಶೇಖರ್, ಆರಂಭಿಕ ಶಿಕ್ಣಣವನ್ನು ಬೈಕಾಡಿ, ಮಣಿಪಾಲಗಳಲ್ಲಿ ಪೂರೈಸಿ, ಉಡುಪಿ ಎಂ.ಜಿ.ಎಮ್. ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು.

ಭಾರತೀಯ ಜೀವ ವಿಮಾ ನಿಗಮ (ಎಲ್.ಐ.ಸಿ.)ಗೆ ಸೇರ್ಪಡೆಗೊಂಡರು. ಜೊತೆಗೆ ಬರವಣಿಗೆ ಮತ್ತು ಚಳುವಳಿಗಳಲ್ಲಿ ತೊಡಗಿಕೊಂಡಿದ್ದರು.

ಜಿ.ರಾಜಶೇಖರ್ ಜೀವ ವಿಮಾ ನೌಕರರ ಸಂಘದ ಸದಸ್ಯರಾಗಿ, ರೈತ ಕಾರ್ಮಿಕ ಚಳುವಳಿಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರು.

70ರ ದಶಕದಿಂದಲೂ ಉಡುಪಿಯಲ್ಲಿ ನಡೆಯುವ ಬೀದಿ ಹೋರಾಟಗಳಲ್ಲಿ ರಾಜಶೇಖರ್ ಭಾಗವಹಿಸುತ್ತಿದ್ದರು.

ಜಿಲ್ಲೆಯ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರನ್ನು ಒಗ್ಗೂಡಿಸಿ ಸೌಹಾರ್ದ ವೇದಿಕೆ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಾಹಿತ್ಯಿಕ, ವೈಚಾರಿಕ ಹಾಗೂ ಸಾಮಾಜಿಕ ಮಹತ್ವದ ಎಂಟು ಕೃತಿಗಳನ್ನೂ ಅನೇಕ ಲೇಖನಗಳನ್ನೂ ಬರೆದಿರುವ ಜಿ.ರಾಜಶೇಖರ್ ಸಾಹಿತ್ಯ ವಿಮರ್ಶಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಪಾರ್ಥೀವ ಶರೀರವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು ಬೆಳಿಗ್ಗೆ 8 ಗಂಟೆಗೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಸಮೀಪದಲ್ಲಿರುವ ರಾಜಶೇಖರ್ ಸಂಬಂಧಿಕರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಬಳಿಕ 10 ಗಂಟೆಗೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!