Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಅದಮಾರು ಶ್ರೀ ವಿಶ್ವಪ್ರಿಯತೀರ್ಥರಿಗೆ ಗುರುವಂದನೆ

ಅದಮಾರು ಶ್ರೀ ವಿಶ್ವಪ್ರಿಯತೀರ್ಥರಿಗೆ ಗುರುವಂದನೆ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 11

ಅದಮಾರು ಶ್ರೀ ವಿಶ್ವಪ್ರಿಯತೀರ್ಥರಿಗೆ ಗುರುವಂದನೆ
ಉಡುಪಿ: ಅದಮಾರು ಮಠದ 32ನೇ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಸನ್ಯಾಸ ದೀಕ್ಷಾ ಸುವರ್ಣ ಮಹೋತ್ಸವ ಪ್ರಯುಕ್ತ ಶ್ರೀಕೃಷ್ಣ ಸೇವಾ ಬಳಗ ಹಾಗೂ ಅದಮಾರು ಮಠ ವತಿಯಿಂದ ಸೋಮವಾರ ಇಲ್ಲಿನ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಗುರುವಂದನೆ ಸಮಾರಂಭ ನಡೆಯಿತು.

ಗುರು ಕೃಪೆ ಬೇಕು
ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರನ್ನು ಗೌರವಿಸಿದ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಜ್ಞಾನದ ಮಹತ್ವ ಅರಿತವರು ಸಾಧಕರಾಗುತ್ತಾರೆ. ಜ್ಞಾನ ಸಂಪಾದನೆಗೆ ಶರೀರ ಮೀಸಲಿಡಬೇಕು, ಜ್ಞಾನ ಪಡೆಯಲು ಗುರುಗಳ ಕೃಪೆ ಬೇಕು ಎಂದರು.

ಶ್ರೇಷ್ಠವಾದ ವಿಚಾರವನ್ನು ಕಲಿಯಲು ದೇಹ ಹಾಗೂ ಮನಸ್ಸು ಬಾಗಬೇಕು. ಕಲಿಯುವ ಗುಣ ಬೆಳೆಸಿಕೊಳ್ಳಬೇಕು. ಗುರುಗಳಲ್ಲಿ ಪ್ರಶ್ನೆ ಮಾಡುತ್ತಾ ಜ್ಞಾನ ವೃದ್ಧಿಸಬೇಕು. ಕಲಿತ ಜ್ಞಾನವನ್ನು ಸಮಾಜಕ್ಕೆ ವಿನಿಯೋಗಿಸಬೇಕು ಎಂದವರು ಸಲಹೆ ನೀಡಿದರು.

ಮಧ್ವ ಸ್ವರೂಪಿ
ನಮ್ಮ ಗುರುಗಳು ನಮಗೆ ಮಧ್ವ ಸ್ವರೂಪಿಗಳು ಎಂದು ಬಣ್ಣಿಸಿದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ದೇವ ಪ್ರೇಮದೊಂದಿಗೆ ದೇಶಪ್ರೇಮ ರೂಢಿಸಿಕೊಳ್ಳಬೇಕು. ಅದಕ್ಕಾಗಿ ಪರ್ಯಾಯ ಕಾಲದಲ್ಲಿ ಆರಂಭಿಸಿದ ವಿಶ್ವಾರ್ಪಣಮ್ ಕಾರ್ಯಕ್ರಮ ಮುಂದುವರಿಸುವುದಾಗಿ ತಿಳಿಸಿದರು.

ಗುರುಗಳ ಸಾಧನೆ ಸ್ಮರಿಸುವ ನಿಟ್ಟಿನಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅಧಿಕಾರ ನೀಡಿ ಮಾರ್ಗದರ್ಶನ
ಆಚಾರ್ಯರನ್ನು ಸ್ವಲ್ಪವಾದರೂ ಅರಿಯಬೇಕು ಎಂಬ ಉತ್ಕಟ ಇಚ್ಛೆಯನ್ನು ಹಿರಿಯ ಗುರುಗಳಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಈಡೇರಿಸಿದ್ದಾರೆ. ತಮಗೆ ಇನ್ನೂ ವಯಸ್ಸಿದ್ದರೂ ಎಲ್ಲ ಅಧಿಕಾರವನ್ನು ಬಿಟ್ಟುಕೊಟ್ಟು ಶಿಷ್ಯನಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಪರ್ಯಾಯದ ಅವಧಿಯಲ್ಲಿಯೂ ಶ್ರೀಕೃಷ್ಣ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಶಿಷ್ಯನ ಕಾಳಜಿ, ಚಿಂತನೆಗಳನ್ನು ಒಪ್ಪಿಕೊಂಡಿದ್ದಾರೆ. ಹಿರಿಯ ಯತಿಗಳಿಂದ ಎಷ್ಟು ಕಲಿತರೂ ಅದು ಕಡಿಮೆಯೇ ಎಂದು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಬಣ್ಣಿಸಿದರು.

ಗೀತೆಯಿಂದ ಪರಿಹಾರ
ಸನ್ಮಾನ ಸ್ವೀಕರಿಸಿದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಎಲ್ಲ ಸಮಸ್ಯೆಗಳಿಗೂ ಗೀತೆಯಿಂದ ಪರಿಹಾರ ಲಭ್ಯ. ಅದನ್ನು ಪಠ್ಯದಲ್ಲಿ ಸೇರಿಸಿಕೊಳ್ಳಬೇಕು. ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸಿದಲ್ಲಿ ಕೇಸರೀಕರಣವಾಗಲಿದೆ ಎಂದು ಕೆಲವರು ಆಕ್ಷೇಪಿಸುತ್ತಾರೆ. ಕೇಸರಿ ತ್ಯಾಗದ ಸಂಕೇತ. ಜನರು ತ್ಯಾಗಕ್ಕೆ ಸಿದ್ಧರಿಲ್ಲ ಭೋಗಕ್ಕೆ ಮಾತ್ರ ತಯಾರಾಗಿದ್ದಾರೆ ಎಂದರು.

ಭಗವದ್ಗೀತೆಯನ್ನು ಮಕ್ಕಳಿಗೆ ಕಲಿಸಿದಲ್ಲಿ ಮಕ್ಕಳಿಗೆ ಸಹಜವಾಗಿ ತಪ್ಪು ಒಪ್ಪುಗಳ ವಿಚಾರದ ಅರಿವಾಗುತ್ತದೆ. ಯಾರನ್ನು ಆರಿಸಬೇಕು, ಯಾರನ್ನು ಅಳಿಸಬೇಕು ಎಂಬ ಜ್ಞಾನ ಸಿಗುತ್ತದೆ. ಪ್ರತೀ ಮನೆಯಲ್ಲಿ ಪ್ರತಿದಿನ ಕನಿಷ್ಠ ಐದರಿಂದ ಹತ್ತು ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಬೇಕು ಎಂದು ಶ್ರೀಪಾದರು ಸಲಹೆ ನೀಡಿದರು.

ಕೆಂಪು ಕಮ್ಮಿ ನಿಷ್ಠೆಯ ಸಂಕೇತ!
ಭಾರತದ ಧ್ವಜದ ಮೊದಲ ಬಣ್ಣ ಕೇಸರಿ. ಅದು ತ್ಯಾಗದ ಸಂಕೇತ. ಕೆಂಪು ಅಪಾಯದ ಸಂಕೇತ. ದೇವರು ಹಾಗೂ ದೇಶದ ಮೇಲೆ `ಕಮ್ಮಿ ನಿಷ್ಠೆ’ ಇದ್ದವರ ಬಣ್ಣ ಕೆಂಪು. ಅದು ಅಪಾಯಕಾರಿ ಎಂದು ಶ್ರೀಪಾದರು ಪರೋಕ್ಷ ವಾಗ್ದಾಳಿ ನಡೆಸಿದರು.

ಯೋಗ್ಯ ಉತ್ತರಾಧಿಕಾರಿ
ಅದಮಾರು ಮಠಕ್ಕೆ ಯೋಗ್ಯ ಉತ್ತರಾಧಿಕಾರಿಯನ್ನು ನೀಡುವಂತೆ ಶ್ರೀ ಅನಂತೇಶ್ವರನನ್ನು ಪ್ರಾರ್ಥಿಸಿದ ಫಲವಾಗಿ ಉತ್ತಮ, ಯೋಗ್ಯ ಹಾಗೂ ದಕ್ಷ ಶಿಷ್ಯ ಲಭಿಸಿದ್ದಾರೆ.

ಶಿಷ್ಯರ ಸಮಾಜಮುಖಿ ಕಾರ್ಯಗಳಿಗೆ ಸಮಾಜ ಕೈಜೋಡಿಸಬೇಕು. ಗುರುಗಳು ಹುಟ್ಟುಹಾಕಿರುವ ಸಂಸ್ಥೆಗಳು ಎತ್ತರಕ್ಕೆ ಬೆಳೆಯಲು ಎಲ್ಲರ ಸಹಕಾರ ಬೇಕು ಎಂದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕಳಕಳಿಯ ಮನವಿ ಮಾಡಿದರು.

ವಾಕ್ಪಟುತ್ವ, ವಾಕ್ ಕಠುತ್ವ ಅಡಕ
ಶ್ರೀಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಮಾತನಾಡಿ, ವಿಬುಧಪ್ರಿಯತೀರ್ಥ ಶ್ರೀಪಾದರು ಹಾಗೂ ವಿಬುಧೇಶತೀರ್ಥ ಶ್ರೀಪಾದ ಸಮದೃಷ್ಟಿತ್ವ ಗುಣವನ್ನು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಲ್ಲಿ ಕಾಣಬಹುದು. ವಿಬುಧಪ್ರಿಯರಲ್ಲಿದ್ದ ಪ್ರಿಯತ್ವ, ವಾಕ್ಪಟುತ್ವ ಹಾಗೂ ವಿಬುಧೇಶತೀರ್ಥರಲ್ಲಿದ್ದ ದೇಶಪ್ರೇಮ ಹಾಗೂ ವಾಕ್ ಕಠುತ್ವ ವಿಶ್ವಪ್ರಿಯತೀರ್ಥರಲ್ಲಿ ಅಡಕವಾಗಿದೆ.

ವಿಬುಧೇಶತೀರ್ಥರು ತಮ್ಮ ಶಿಷ್ಯ ವಿಶ್ವಪ್ರಿಯತೀರ್ಥರಲ್ಲಿ ಪರಿಪೂರ್ಣತೆಯನ್ನು ಕಂಡವರು. ಗುರುಗಳ ಮಾರ್ಗದಲ್ಲಿಯೇ ನಡೆಯುತ್ತಿರುವ ವಿಶ್ವಪ್ರಿಯತೀರ್ಥರು ಶಿಷ್ಯರಾದ ಈಶಪ್ರಿಯತೀರ್ಥರಿಂದ ಪರ್ಯಾಯ ಮಾಡಿಸಿ ಸಂತೋಷ ಅನುಭವಿಸಿದರು ಎಂದು ಸ್ಮರಿಸಿದರು.

ಶ್ರೀ ವಿಬುಧೇಶತೀರ್ಥ ಶ್ರೀಪಾದರ 50ನೇ ಜನ್ಮವರ್ಧಂತಿ ಕಾರ್ಯಕ್ರಮ ಇದೇ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆದಿತ್ತು. ಇದೀಗ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಸನ್ಯಾಸ ದೀಕ್ಷಾ ಸುವರ್ಣ ಮಹೋತ್ಸವವೂ ಇಲ್ಲೇ ನಡೆಯುತ್ತಿರುವುದು ಸಂತಸದಾಯಕ ಮತ್ತು ಯೋಗಾಯೋಗ ಎಂದರು.

ವಿದ್ವಾಂಸ, ಶ್ರೀಗಳ ಆಪ್ತಶಿಷ್ಯ ಕರ್ನೂಲು ವಿದ್ವಾನ್ ಶ್ರೀನಿವಾಸ ಆಚಾರ್ಯ ಅಭಿನಂದನಾ ಭಾಷಣ ಮಾಡಿದರು.

ಪುಸ್ತಕ ಅನಾವರಣ
ಇದೇ ಸಂದರ್ಭದಲ್ಲಿ ಓಂಪ್ರಕಾಶ್ ಭಟ್ ಮತ್ತು ದೇವಿದಾಸ್ ಸಂಪಾದಕತ್ವದಲ್ಲಿ ಕೃಷ್ಣಪ್ರಿಯ- ವಿಶ್ವಪ್ರಿಯ ಪುಸ್ತಕ ಮತ್ತು ವಿಶ್ವೇಶದಾಸ ಮತ್ತು ಓಂ ಪ್ರಕಾಶ ಭಟ್ ಸಂಪಾಕತ್ವದಲ್ಲಿ 2020- 22ರ ಅದಮಾರು ಪರ್ಯಾಯದ ಸ್ಮರಣ ಸಂಚಿಕೆ ವಿಶ್ವಪ್ರಿಯ- ಈಶಪ್ರಿಯ ಪುಸ್ತಕಗಳ ಅನಾವರಣ ನಡೆಯಿತು.
ಎಂಜಿಎಂ ಕಾಲೇಜು ಪತ್ರಿಕೋದ್ಯಮ ವಿಭಾಗದ ಮಂಜುನಾಥ ನಿರ್ದೇಶನದಲ್ಲಿ ಸಿದ್ಧಗೊಂಡ ಅದಮಾರು ಶ್ರೀಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.

ಪ್ರವಚನಕಾರ ಡಿ. ಎ. ಜೋಸೆಫ್ ಇದ್ದರು.

ನರಹರಿತೀರ್ಥ ಪ್ರಶಸ್ತಿ
ಅದಮಾರು ಮಠ ವತಿಯಿಂದ ನೀಡಲಾಗುವ, 50 ಸಾವಿರ ರೂ. ನಗದು ಸಹಿತ ತೃತೀಯ ವರ್ಷದ ಶ್ರೀ ನರಹರಿತೀರ್ಥ ಪ್ರಶಸ್ತಿಯನ್ನು ಪೆರುವೋಡಿ ನಾರಾಯಣ ಭಟ್ಟ ಪುತ್ತೂರು ಅವರಿಗೆ ಪ್ರದಾನ ಮಾಡಲಾಯಿತು.

ಅರ್ಥಧಾರಿ, ಯಕ್ಷಗಾನ ಕಲಾವಿದ ವಾಸುದೇವ ರಂಗ ಭಟ್ಟ ಪ್ರಶಸ್ತಿ ಕುರಿತು ಮಾತನಾಡಿದರು.

ಶ್ರೀಕೃಷ್ಣ ಸೇವಾ ಬಳಗದ ಗೋವಿಂದರಾಜ್ ಸ್ವಾಗತಿಸಿದರು. ಬಳಗದ ಸಂಚಾಲಕ ಡಾ| ಜಗದೀಶ್ ಶೆಟ್ಟಿ, ವೈ. ಎನ್. ರಾಮಚಂದ್ರ ರಾವ್ ಮೊದಲಾದವರಿದ್ದರು. ಪ್ರಾಧ್ಯಾಪಕ ಡಾ| ರಮೇಶ್ ಭಟ್ ನಿರೂಪಿಸಿದರು.

ಶಾಸಕ ರಘುಪತಿ ಭಟ್, ಕಟೀಲು ದುರ್ಗಾಪರಮೇಶ್ವರಿ ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಪ್ರದೀಪ ಕುಮಾರ್ ಕಲ್ಕೂರ, ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಪ್ರೊ. ಎಂ. ಬಿ. ಪುರಾಣಿಕ್, ಉದ್ಯಮಿ ಪುರುಷೋತ್ತಮ ಶೆಟ್ಟಿ ಮಣಿಪಾಲ, ಯಶಪಾಲ ಸುವರ್ಣ, ಉಡುಪಿ ಸಂಸ್ಕೃತ ವಿ.ವಿ. ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ, ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ, ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ರಾವ್ ಮೊದಲಾದವರು ಸೇರಿದಂತೆ ಅನೇಕ ಮಂದಿ ಶ್ರೀಗಳ ಅಭಿಮಾನಿಗಳು ಶ್ರೀಪಾದರನ್ನು ಗೌರವಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಬ್ರಹ್ಮಕಪಾಲ ಯಕ್ಷಗಾನ ಪ್ರದರ್ಶನಗೊಂಡಿತು

 

 

 

 

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!