ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29
ದ.ಕ. ಜಿಲ್ಲೆಯಲ್ಲಿ ಸಂಜೆ 6ರೊಳಗೆ ಅಂಗಡಿ ಮುಚ್ಚಲು ಆದೇಶ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರದಿಂದ ಆಗಸ್ಟ್ 1ರ ವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಜೆ 6 ಗಂಟೆಗೇ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ. ವಿ. ಆದೇಶ ನೀಡಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಫಾಝಿಲ್ ಹತ್ಯೆ ನಡೆದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೇವೆಗಳು, ಆಸ್ಪತ್ರೆ ಹಾಗೂ ಮೆಡಿಕಲ್ ಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳಿಗೆ ಈ ಆದೇಶ ಅನ್ವಯಿಸಲಿದ್ದು, ಸ್ಥಳೀಯಾಡಳಿತ ಸಂಸ್ಥೆಗಳು ಅಂಗಡಿಗಳ ಮೇಲೆ ನಿಗಾ ಇರಿಸಬೇಕು ಹಾಗೂ ಜನತೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮದ್ಯದಂಗಡಿ ಬಂದ್
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ, ಪುತ್ತೂರು, ಕಡಬ, ಬೆಳ್ತಂಗಡಿ ಮತ್ತು ಸುಳ್ಯ ತಾಲೂಕುಗಳಲ್ಲಿ ಯಾವುದೇ ರೀತಿಯ ಮದ್ಯ ಮಾರಾಟ, ದಾಸ್ತಾನು, ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದೆ. ಹಾಗೂ ಎಲ್ಲಾ ರೀತಿಯ ಮದ್ಯದ ಅಂಗಡಿಗಳನ್ನು ಇಂದಿನಿಂದ ಆಗಸ್ಟ್ 1ರ ಬೆಳಿಗ್ಗೆ 8 ಗಂಟೆ ವರೆಗೆ ಮುಚ್ಚಲು ಆದೇಶಿಸಲಾಗಿದೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರಿಗೆ ನಿರ್ದೇಶನ ನೀಡಲಾಗಿದ್ದು, ನಿಷೇಧಾಜ್ಞೆ ಇರುವ ಸಮಯದಲ್ಲಿ ಬಾರ್ ಮತ್ತು ವೈನ್ ಶಾಪ್ ಗಳ ಬಾಗಿಲುಗಳಿಗೆ ಅಬಕಾರಿ ಇಲಾಖೆಯ ಮೊಹರು (ಸೀಲು)ಗಳನ್ನು ಕಡ್ಡಾಯವಾಗಿ ಹಾಕುವಂತೆ ವ್ಯವಸ್ಥೆಗೊಳಿಸಲು ತಿಳಿಸಲಾಗಿದೆ.