Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಬಿಜೆಪಿ ಅಂಬಲಪಾಡಿ ಕಾರ್ಯಕರ್ತರ ಸಮಾವೇಶ, ಉಚಿತ ಆರೋಗ್ಯ ಮತ್ತು ಕಣ್ಣು ತಪಾಸಣೆ ಶಿಬಿರ

ಬಿಜೆಪಿ ಅಂಬಲಪಾಡಿ ಕಾರ್ಯಕರ್ತರ ಸಮಾವೇಶ, ಉಚಿತ ಆರೋಗ್ಯ ಮತ್ತು ಕಣ್ಣು ತಪಾಸಣೆ ಶಿಬಿರ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 11

ಬಿಜೆಪಿ ಅಂಬಲಪಾಡಿ ಕಾರ್ಯಕರ್ತರ ಸಮಾವೇಶ, ಉಚಿತ ಆರೋಗ್ಯ ಮತ್ತು ಕಣ್ಣು ತಪಾಸಣೆ ಶಿಬಿರ
ಉಡುಪಿ: ರಾಷ್ಟ್ರ ಹಿತಕ್ಕಾಗಿ ಮಂತ್ರಿ ಪದವಿ ತೊರೆದು ಭಾರತೀಯ ಜನಸಂಘ ಸ್ಥಾಪಿಸಿದ ಡಾ| ಶ್ಯಾಮಪ್ರಸಾದ್ ಮುಖರ್ಜಿ, ಅಂತ್ಯೋದಯ ಪರಿಕಲ್ಪನೆ ನೀಡಿದ ಪಂಡಿತ್ ದೀನದಯಾಳ್ ಉಪಾಧ್ಯಾಯರಂಥ ಮಹಾನ್ ಚೇತನಗಳು ಪಕ್ಷ ಕಾರ್ಯಕರ್ತರಿಗೆ ಪ್ರೇರಣಾ ಶಕ್ತಿಯಾಗಿದೆ. ರಾಷ್ಟ್ರೀಯತೆ ಸಹಿತ ಪಂಚ ನಿಷ್ಠೆಗಳ ಭದ್ರ ಬುನಾದಿಯಲ್ಲಿ ಸದೃಢವಾಗಿ ಬೆಳೆದು ಇಂದು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎನಿಸಿರುವ ಬಿಜೆಪಿ ಕಾರ್ಯಕರ್ತನಾಗುವುದು ಭಾಗ್ಯವೆನಿಸಿದರೆ, ಪಕ್ಷದ ಪದಾಧಿಕಾರಿಯಾಗುವುದು ಸೌಭಾಗ್ಯ ಎಂದು ಬಿಜೆಪಿ ಮಂಗಳೂರು ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಹೇಳಿದರು.

ಬಿಜೆಪಿ ಉಡುಪಿ ನಗರ, ಬಿಜೆಪಿ ಮಹಾ ಶಕ್ತಿಕೇಂದ್ರ ಅಂಬಲಪಾಡಿ- ಕಡೆಕಾರು ಮತ್ತು ಬಿಜೆಪಿ ಅಂಬಲಪಾಡಿ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 8 ವರ್ಷಗಳ ಆಡಳಿತದ ಸಂಭ್ರಮಾಚರಣೆ ಅಂಗವಾಗಿ ಅಂಬಲಪಾಡಿ ವಸಂತ ಮಂಟಪದಲ್ಲಿ ಉಡುಪಿ ಜಿಲ್ಲಾಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಸರ್ವೇಕ್ಷಣ ಘಟಕ ಮತ್ತು ಜಿಲ್ಲಾ ಎನ್.ಸಿ.ಡಿ. ಘಟಕ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಉಚಿತ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ವಿತರಣೆ ಹಾಗೂ ಉಚಿತ ಆಯುಷ್ಮಾನ್ ಕಾರ್ಡ್ ಮತ್ತು ಈ- ಶ್ರಮ್ ಕಾರ್ಡ್ ನೋಂದಾವಣೆ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಸಹಯೋಗದೊಂದಿಗೆ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ ಹಾಗೂ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯರ್ತರ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಸೇವೆಯಲ್ಲಿ ತೊಡಗಿ
ಇಂದು ಭಾರತದ ನಿಲುವಿಗೆ ವಿಶ್ವಮಾನ್ಯತೆ ದೊರೆಯುತ್ತಿದೆ. ಜಗತ್ತಿನ ರಾಷ್ಟ್ರಗಳು ದೇಶವನ್ನು ತಾತ್ಸಾರ ಭಾವದಿಂದ ಕಾಣುತ್ತಿದ್ದ ಈ ಹಿಂದಿನ ದೃಷ್ಟಿಕೋನ ಬದಲಾಗಿವೆ. ಅದಕ್ಕೆ ಕಾರಣ ವಿಶ್ವವಂದ್ಯ ಪ್ರಧಾನಿ ನರೇಂದ್ರ ಮೋದಿ ನಡೆ, ನುಡಿ ಹಾಗೂ ಆಡಳಿತ ವೈಖರಿ.

ಇಂದು ಸಂಖ್ಯಾತ್ಮಕವಾಗಿ ಪಕ್ಷ ಸಾಕಷ್ಟು ಬೆಳೆದಿದೆ. ಆಡಳಿತ ಪಕ್ಷವಾಗಿ ಬಿಜೆಪಿ ತನ್ನದೇ ಆದ ವರ್ಚಸ್ಸು ಹಾಗೂ ಜವಾಬ್ದಾರಿ ಹೊಂದಿದೆ. ಈ ನಿಟ್ಟಿನಲ್ಲಿ ಪಕ್ಷ ಕಾರ್ಯಕರ್ತರು ಸಚ್ಚಾರಿತ್ರ್ಯ, ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಂಡು ಪಕ್ಷದ ಗುಣಾತ್ಮಕ ಬೆಳವಣಿಗೆಗೆ ಒತ್ತುನೀಡುವ ಜೊತೆಗೆ ಸರಕಾರದ ಜನಪರ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮೂಲಕ ನಿರಂತರ ಜನಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಮೋದಿ ಆದರ್ಶ ಅನುಕರಣೀಯ
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಎ. ಸುವರ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣದ ಉತ್ತಮ ಕೆಲಸ ಕಾರ್ಯಗಳು, ಕೋವಿಡ್ ಸಂದರ್ಭದ ಸಾಧನೆ, ದೇಶದ ಭದ್ರತೆ ಹಾಗೂ ದೇಶವಾಸಿಗಳ ಕಲ್ಯಾಣಕ್ಕೆ ಕೈಗೊಂಡ ಉಪಕ್ರಮಗಳು ಪ್ರಶಂಸನೀಯ.

ಪಕ್ಷ ಕಾರ್ಯಕರ್ತರು ಮೋದಿ ಆದರ್ಶ ಮತ್ತು ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಪ್ರಚುರಪಡಿಸುವುದು ಇಂದಿನ ಅಗತ್ಯತೆ ಎಂದರು.

ಆರೋಗ್ಯ ಸೇವೆ ಜವಾಬ್ದಾರಿ
ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಜೃತ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು, ಮೂಲಭೂತ ಆವಶ್ಯಕತೆಯಾಗಿರುವ ಆರೋಗ್ಯ ಸೇವೆಯನ್ನು ಜನತೆಗೆ ತಲುಪಿಸುವುದು ಎಲ್ಲರ ಜವಾಬ್ದಾರಿ.

ಪ್ರಧಾನಿ ಮೋದಿ ಆಶಯದಂತೆ ತಪಾಸಣಾ ಶಿಬಿರದ ಜೊತೆಗೆ ಗುಣಮಟ್ಟದ ಸೇವೆ ನೀಡುವುದು ನಮ್ಮ ಆದ್ಯತೆಯಾಗಬೇಕು. ಮುಂದಿನ ದಿನಗಳಲ್ಲಿಯೂ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣೆಯಂಥ ಉದಾತ್ತ ಸೇವಾ ಕಾರ್ಯಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.

ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ
ಅಧ್ಯಕ್ಷತೆ ವಹಿಸಿದ ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉತ್ತಮ ಕೆಲಸ ಕಾರ್ಯಗಳ ಪ್ರಚಾರ ಅಗತ್ಯ.

ಬಿಜೆಪಿ ಉಡುಪಿ ನಗರ ವ್ಯಾಪ್ತಿಯ ಇತರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಕಾರ್ಯಕರ್ತರ ಸಮಾವೇಶ ಹಾಗೂ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಬೂತ್ ಸಶಕ್ತೀಕರಣ ಸಹಿತ ಪಕ್ಷದ ಎಲ್ಲ ಚಟುವಟಿಕೆಗಳನ್ನು ಅತ್ಯಂತ ಬದ್ಧತೆಯಿಂದ ಕಾರ್ಯಗತಗೊಳಿಸಲಾಗುತ್ತಿದೆ.

ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ ಮತ್ತು ಬೂತ್ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಸದೃಢ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರಬಾಬು, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ, ಉಡುಪಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ತಾಲೂಕು ಆರೋಗ್ಯ ಇಲಾಖೆಯ ಡಾ. ಅಂಜಲಿ ವಾಗ್ಲೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸಾತ್ವಿಕ್, ಸಮುದಾಯ ವೈದ್ಯಕೀಯ ವಿಭಾಗದ ಡಾ. ಯಶ್, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಅಂಬಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸೋಮನಾಥ್ ಬಿ. ಕೆ., ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು, ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್, ಕಾರ್ಯದರ್ಶಿ ದಯಾಶಿನಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಯೋಗೀಶ್ ಶೆಟ್ಟಿ, ರಾಮರಾಜ್ ಕಿದಿಯೂರು, ಶಕ್ತಿ ಕೇಂದ್ರಗಳ ಅಧ್ಯಕ್ಷರಾದ ನಾಗರಾಜ್ ಕರ್ಕೇರ ಮತ್ತು ವಿಜಯ ಶೆಟ್ಟಿ ಮೊದಲಾದವರಿದ್ದರು.

ಬಿಜೆಪಿ ಮಹಾ ಶಕ್ತಿಕೇಂದ್ರ ಕಡೆಕಾರು- ಅಂಬಲಪಾಡಿ ಸಂಚಾಲಕ ರಾಜೇಂದ್ರ ಪಂದುಬೆಟ್ಟು ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ನಿರೂಪಿಸಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!