Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಮುನಿಯಾಲು ಆಯುರ್ವೇದ ಸಂಸ್ಥೆಗೆ ಅಮೆರಿಕಾದ ಪೇಟೆಂಟ್

ಮುನಿಯಾಲು ಆಯುರ್ವೇದ ಸಂಸ್ಥೆಗೆ ಅಮೆರಿಕಾದ ಪೇಟೆಂಟ್

ಮುನಿಯಾಲು ಆಯುರ್ವೇದ ಸಂಸ್ಥೆಗೆ ಅಮೆರಿಕಾದ ಪೇಟೆಂಟ್

ಉಡುಪಿ: ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲು ಆಯುರ್ವೇದ ಸಂಸ್ಥೆ ಅಧ್ಯಕ್ಷ ಡಾ. ಎಂ. ವಿಜಯಭಾನು ಶೆಟ್ಟಿ ಅಭಿವೃದ್ಧಿಪಡಿಸಿರುವ 5 ಸಂಶೋಧಿತ ಆಯುರ್ವೇದ ಔಷಧಿ ಹಾಗೂ ಒಂದು ಚಿಕಿತ್ಸಾ ಕ್ರಮಕ್ಕೆ ಅಮೆರಿಕಾದ ಡೈರೆಕ್ಟರ್ ಆಫ್ ಪೇಟೆಂಟ್ ಆ್ಯಂಡ್ ಟ್ರೇಡ್ ಮಾಕರ್್ ಮುಂದಿನ 20 ವರ್ಷ ಅವಧಿಗೆ ಪೇಟೆಂಟ್ ನೀಡಿದೆ.

 

ಹೃದಯಾಘಾತವನ್ನು ಜೀವಕಣದ ಜೀನ್ ಮಟ್ಟದಲ್ಲಿ ನಿಯಂತ್ರಿಸಬಲ್ಲ ಹಾರ್ಟೋಜನ್ ಮಾತ್ರೆ, ದೇಹದಲ್ಲಿ ಇನ್ಸುಲಿನ್ ಪುನರುತ್ಪತ್ತಿಗೊಳಿಸಿ ಆ ಮೂಲಕ ಸಿಹಿಮೂತ್ರ ರೋಗ ನಿಯಂತ್ರಣ ಹಾಗೂ ದೇಹದ ಪ್ರಮುಖ ಅಂಗಗಳಿಗೆ ರಕ್ಷಣೆ ಕೊಡುವ ಇನ್ಸೋಲ್- ಎನ್ ಮಾತ್ರೆ, ಲಿಪಿಡ್, ಕೊಲೆಸ್ಟ್ರಾಲ್ ಮತ್ತು ಬೊಜ್ಜು ನಿಯಂತ್ರಣದ ಹರ್ಬೋಟ್ರಿಮ್ ಮಾತ್ರೆ, ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕು ಬಾರದಂತೆ ತಡೆಯುವ ಮುನಿ ಬಯೋಟಿಕ್ ಪ್ಲಸ್ ಮಾತ್ರೆ, ಸುಮಾರು 80ಕ್ಕೂ ಅಧಿಕ ವಿಧದ ಕ್ಯಾನ್ಸರ್ ಗಳಲ್ಲಿ ಯಶಸ್ವಿಯಾಗಿ ಉಪಯೋಗಿಸಲ್ಪಟ್ಟ, ಅದರಲ್ಲೂ ಶ್ವಾಸಕೋಶ ಕ್ಯಾನ್ಸರ್ ನಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುವ ಮುನೆಕ್ಸ್ ಮಾತ್ರೆ ಹಾಗೂ ಕ್ಯಾನ್ಸರ್ ಚಿಕಿತ್ಸಾ ಕ್ರಮವಾದ ಮಹೋಷಧಕಲ್ಪಕ್ಕೆ ಅಮೆರಿಕಾದ ಪೇಟೆಂಟ್ ದೊರೆತಿದೆ.

ಮುನೆಕ್ಸ್, ಇನ್ಸೋಲ್- ಎನ್ ಹಾಗೂ ಹಾರ್ಟೋಜನ್ ಔಷಧಿಗಳಿಗೆ ಜಪಾನ್ ಹಾಗೂ ಯುರೋಪ್ ಗಳ ಪೇಟೆಂಟ್ ಪರಿಗಣನೆಯಲ್ಲಿದೆ.

ಹಲವಾರು ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಮಾಸಪತ್ರಿಕೆಗಳಲ್ಲಿ ಮೇಲಿನ ಎಲ್ಲಾ ಔಷಧಿಗಳ ಬಗ್ಗೆ ಲೇಖನ ಪ್ರಕಟವಾಗಿದ್ದು, ಆಯುರ್ವೇದಕ್ಕೆ ವೈಜ್ಞಾನಿಕ ಹಿನ್ನೆಲೆ ಇಲ್ಲ ಎಂಬ ಅಪವಾದ ನೀಗಿಸಲು ಈ ಪ್ರಯತ್ನ ಎಂದು ಡಾ. ಎಂ. ವಿಜಯಭಾನು ಶೆಟ್ಟಿ ತಿಳಿಸಿದ್ದಾರೆ

ಆಯುರ್ವೇದ ಕ್ಷೇತ್ರದಲ್ಲಿ ಕಳೆದ ಮೂರು ತಲೆಮಾರಿನಿಂದ ಕಾರ್ಯನಿರ್ವಹಿಸುತ್ತಿರುವ ಮುನಿಯಾಲು ಆಯುರ್ವೇದ ಸಂಸ್ಥೆ ಮಣಿಪಾಲದಲ್ಲಿ ಆಯುರ್ವೇದ ಪದವಿ, ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ ಕೋರ್ಸ್, ಈ ವರ್ಷದಿಂದ ಯೋಗ ಮತ್ತು ನ್ಯಾಚುರೋಪತಿ ಡಿಗ್ರಿ ಕೋರ್ಸ್, ಸಂಶೋಧನ ಕೇಂದ್ರ, ಔಷಧ ತಯಾರಿಕೆ ಘಟಕ, ಆಸ್ಪತ್ರೆ, ಚಿಕಿತ್ಸಾಲಯ ಹಾಗೂ ಮಾಜಿ ರಾಷ್ಟ್ರಪತಿ ಡಾ| ಅಬ್ದುಲ್ ಕಲಾಂ ಅವರಿಂದ ಬಿಡುಗಡೆಗೊಂಡ ಸಚಿತ್ರಚರಕ ಸಂಹಿತದಂಥ ಅಮೂಲ್ಯ ಗ್ರಂಥ ರಚನೆ ಮೊದಲಾದವುಗಳಲ್ಲಿ ತೊಡಗಿಸಿಕೊಂಡಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!