Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಸ್ಥಳೀಯ ದೂರು ಸಮಿತಿಯಿಂದ ವಜಾ: ಡಿಸಿ ವಿರುದ್ಧ ಸಿಡಿದೆದ್ದ ವಕೀಲೆ

ಸ್ಥಳೀಯ ದೂರು ಸಮಿತಿಯಿಂದ ವಜಾ: ಡಿಸಿ ವಿರುದ್ಧ ಸಿಡಿದೆದ್ದ ವಕೀಲೆ

ಉಡುಪಿ: ಜಿಲ್ಲಾ ಮಟ್ಟದ ದೂರು ಸಮಿತಿಗೆ ಆಯ್ಕೆ ಮಾಡಿ, ಕಾರಣ ನೀಡದೇ ಏಕಾಏಕಿ ವಜಾಗೊಳಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್ ವಿರುದ್ಧ ವಕೀಲೆ ಮತ್ತು ಬೆಳ್ಮಣ್ಣು ಗ್ರಾ. ಪಂ. ಉಪಾಧ್ಯಕ್ಷೆ ಸಹನಾ ಕುಂದರ್ ಗರಂ ಆಗಿದ್ದು, ಆದೇಶ ವಾಪಾಸು ಪಡೆದ ಕಾರಣ ನೀಡುವಂತೆ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಜು. 5ರಂದು ತನಗೆ ಸಂಬಂಧಪಟ್ಟ ಇಲಾಖೆಯಿಂದ ದೂರವಾಣಿ ಕರೆ ಬಂದಿದ್ದು, ಉಡುಪಿ ಜಿಲ್ಲಾ ಮಟ್ಟದ ಸ್ಥಳೀಯ ದೂರು ಸಮಿತಿಗೆ ತನ್ನ ಹೆಸರು ಸೂಚಿಸಿರುವ ವಿಷಯ ತಿಳಿಸಲಾಗಿತ್ತು. ಈ ಸಮಿತಿ ಮಹಿಳೆಯರು ಕಾರ್ಯನಿರ್ವಹಿಸುವ ಕಚೇರಿಗಳಲ್ಲಿ ನಡೆಯುವ ಲೈಂಗಿಕ ಕಿರುಕುಳ, ಶೋಷಣೆ ಇತ್ಯಾದಿಗಳ ಬಗ್ಗೆ ಮುಕ್ತವಾಗಿ ದೂರು ಸಲ್ಲಿಸಿ, ಪರಿಹಾರ ಪಡೆಯುವ ವೇದಿಕೆಯಾಗಿದ್ದು, ಇದೊಂದು `ಗೌರವ’ದ ಹುದ್ದೆ ಎಂದು ತಿಳಿಸಲಾಗಿತ್ತು.

ನೊಂದ, ಶೋಷಿತ ಮಹಿಳೆಯರಿಗೆ ನೆರವಾಗುವ ಕಾರಣದಿಂದಾಗಿ ತಾನು ಒಪ್ಪಿಸಿಗೆ ಸೂಚಿಸಿದ್ದೆ ಎಂದು ಸಹನಾ ಹೇಳಿದರು.

ಜು. 8ರಂದು ಜಿಲ್ಲಾಧಿಕಾರಿ ಸಹಿಯುಳ್ಳ ಆದೇಶಪತ್ರ ತನ್ನ ಕೈಸೇರಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೆ. ಆದರೆ, ಅಂದೇ ರಾತ್ರಿ 9.45ರ ಸುಮಾರಿಗೆ ದೂರವಾಣಿ ಕರೆ ಮಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, ನಿಮ್ಮ ನೇಮಕಾತಿ ಆದೇಶ ಸ್ಥಗಿತಗೊಳಿಸಿರುವುದಾಗಿ ತಿಳಿಸಿದರು.

ಅದರಿಂದ ಅಚ್ಚರಿ ಮತ್ತು ಬೇಸರಗೊಂಡ ತಾನು ಖುದ್ದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದು, ಸಹಿಗಾಗಿ ಕಾದಿದ್ದ ಅನೇಕ ಫೈಲ್ ಗಳ ನಡುವೆ ಸೇರಿಕೊಂಡಿದ್ದ ಈ ನೋಟಿಸ್ ನ್ನು ಸರಿಯಾಗಿ ಗಮನಿಸದೇ ಸಹಿ ಮಾಡಿದೆ ಎಂದು ಬೇಜವಾಬ್ದಾರಿ ಮತ್ತು ಹಾರಿಕೆಯ ಉತ್ತರ ನೀಡಿದರು ಎಂದು ಸಹನಾ ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಒತ್ತಡ ಕಾರಣ?
ತಾನು ಸ್ಥಳೀಯ ದೂರು ಸಮಿತಿ ಸದಸ್ಯತ್ವಕ್ಕಾಗಿ ಯಾರನ್ನೂ ದುಂಬಾಲು ಬಿದ್ದಿಲ್ಲ. ಏಕಾಏಕಿ ಜಿಲ್ಲಾಧಿಕಾರಿ ಆದೇಶ ಹಿಂಪಡೆಯಲು ಕಾರಣವೇನು ಎಂಬುದೇ ಗೊತ್ತಾಗುತ್ತಿಲ್ಲ. ತನ್ನ ಈ ಘಟನೆಗೆ ರಾಜಕೀಯ ಒತ್ತಡ ಕಾರಣ ಇದ್ದೀತು ಎಂದು ಸಂದೇಹ ವ್ಯಕ್ತಪಡಿಸಿದ ಸಹನಾ ಕುಂದರ್, ಜಿಲ್ಲಾಧಿಕಾರಿಯವರ ಈ ನಿರ್ಧಾರದ ಹಿಂದೆ ರಾಜಕೀಯ ಕೈವಾಡ ಇದೆ. ಈ ಘಟನೆಯಿಂದ ತನ್ನ ವೈಯಕ್ತಿಕ ಘನತೆ, ವರ್ಚಸ್ಸಿಗೆ ಕುಂದು ಬಂದಿದೆ.

ತನ್ನ ಆದೇಶ ಹಿಂಪಡೆದ ಕಾರಣವನ್ನು ಜಿಲ್ಲಾಧಿಕಾರಿ ತಿಳಿಸಬೇಕು ಎಂದು ಸಹನಾ ಕುಂದರ್ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.

ಸಹನಾ ಕುಂದರ್ ಈಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮುನಿಸುಗೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!