ಉಡುಪಿ: ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಗೂ ಕೃಷ್ಣನ ನಾಡು ಉಡುಪಿಗೂ ಅವಿನಾಭಾವ ಸಂಬಂಧವಿದೆ. ವಾದಿರಾಜರು 5 ಶತಮಾನಗಳ ಹಿಂದೆ ಅಯೋಧ್ಯೆಯಿಂದ ಆಂಜನೇಯನ ವಿಗ್ರಹ ತಂದು ಇಲ್ಲಿನ ಕೃಷ್ಣ ಮಠದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅದು ಉಡುಪಿ ಮತ್ತು ಅಯೋಧ್ಯೆಯ ನಂಟನ್ನು ಗಟ್ಟಿಗೊಳಿಸಿದೆ ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾರು ಹೇಳಿದರು.
ಪೇಜಾವರ ಮಠದಲ್ಲಿ ರಾಮಮಂದಿರ ನಿಧಿ ಸಮರ್ಪಣೆ ಅಂಗವಾಗಿ ಶನಿವಾರ ನಡೆದ ಸಂತರ ಸಭೆಯಲ್ಲಿ ಮಾತನಾಡಿದರು.
ಶ್ರೀರಾಮ, ಮೌಲ್ಯಗಳ ಸಂಕೇತ. ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವವರು ದೇಹದಿಂದ ಭಾರತೀಯರು ಹಾಗೂ ಮನಸ್ಸಿನಿಂದ ವಿದೇಶಿಗರು ಎಂದವರು ಕ್ರೋಧ ವ್ಯಕ್ತಪಡಿಸಿದರು.
ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಶ್ರೀ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಸಮಕಾಲೀನರಾಗಿರುವುದು ಜೀವನದ ದೊಡ್ಡ ಸೌಭಾಗ್ಯ. ಮಂದಿರ, ಭಾರತೀಯ ವಿವಿಧ ಪರಂಪರೆಯ ಸಂಗಮವಾಗಬೇಕು. ಉತ್ತರ ಭಾರತದ ನಾಗರ ಶೈಲಿಯಲ್ಲಿ ಮಂದಿರ ನಿರ್ಮಾಣವಾಗಲಿದೆ. ದಕ್ಷಿಣ ಭಾರತ ಶೈಲಿಯಲ್ಲಿ ಉತ್ಸವಾದಿಗಳು ನಡೆಯಬೇಕು ಎಂದು ಆಶಿಸಿದರು.
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಇದ್ದರು.
ಕಾಣಿಯೂರು, ಸೋದೆ ಪಲಿಮಾರು ಮತ್ತು ಪರ್ಯಾಯ ಅದಮಾರು ಮಠ ವತಿಯಿಂದ ಮೊದಲ ದೇಣಿಗೆಯಾಗಿ ತಲಾ 1 ಲಕ್ಷ ರೂ. ನಿಧಿ ಸಲ್ಲಿಸಲಾಯಿತು.
ವಿಹಿಂಪ ಕುಟುಂಬ ಪ್ರಬೋಧಿನಿ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವನೆಗೈದರು. ವಿಹಿಂಪ ಪ್ರಾಂತ ಕಾರ್ಯದರ್ಶಿ ಕೃಷ್ಣಮೂರ್ತಿ ನಿರೂಪಿಸಿದರು.
ಅಯೋಧ್ಯೆಗೂ ಉಡುಪಿಗೂ ಅವಿನಾಭಾವ ಸಂಬಂಧ
ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...