Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಬನ್ನಂಜೆಯವರದು ಬೆರಗುಗೊಳಿಸುವ ಪ್ರತಿಭೆ

ಬನ್ನಂಜೆಯವರದು ಬೆರಗುಗೊಳಿಸುವ ಪ್ರತಿಭೆ

ಉಡುಪಿ: ಸಂಶೋಧನೆ, ಪಾಂಡಿತ್ಯ ಮತ್ತು ಸೃಜನಶೀಲತೆಗಳ ಅಪೂರ್ವ ಸಂಗಮದಂತಿದ್ದ ಬನ್ನಂಜೆ ಗೋವಿಂದಾಚಾರ್ಯ ಅವರದು ಬೆರಗುಗೊಳಿಸುವ ಪ್ರತಿಭೆ ಎಂದು ಹಿರಿಯ ಸಾಹಿತಿ, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಬಣ್ಣಿಸಿದರು.

ಈಚೆಗೆ ನಿಧನರಾದ ವಿದ್ಯಾವಾಚಸ್ಪತಿ ಪದ್ಮಶ್ರೀ ಡಾ| ಬನ್ನಂಜೆ ಗೋವಿಂದಾಚಾರ್ಯ ಅವರಿಗೆ ಶುಕ್ರವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಬನ್ನಂಜೆಯವರು ಶಾಸ್ತ್ರಗಳೇ ಅವರನ್ನು ಅನುಸರಿಸುತ್ತಿವೆಯೋ ಎಂಬಂತೆ ಬದುಕಿದ್ದರು. ಸಂಸ್ಕೃತ ಶ್ಲೋಕಗಳಿಗೆ ಸಮಾನಾರ್ಥವಾಗಿ ಅಚ್ಚಗನ್ನಡದ ಪದಗಳನ್ನು ಬಳಸುತ್ತಿದ್ದ ಅವರ ಪ್ರತಿಭೆ ವಿಶಿಷ್ಟವಾದುದು. ಅವರೊಬ್ಬ ಉತ್ತಮ ಚಿತ್ರಕಾರರಾಗಿದ್ದರೂ ಪ್ರವಚನ, ಸಾಹಿತ್ಯ, ಗ್ರಂಥ ರಚನೆ ಮಧ್ಯೆ ಆ ಕಲೆ ಮರೆಯಾಗಿ ಹೋಯಿತು ಎಂದು ವಿಷಾದಿಸಿದರು.

ಸತ್ಯಾನ್ವೇಷಕ: ಪುತ್ತಿಗೆಶ್ರೀ
ಯಾವುದೇ ಪ್ರಭಾವಕ್ಕೆ ಒಳಗಾಗದೆ ತತ್ವ ಮತ್ತು ತಥ್ಯವನ್ನು ತಿಳಿಯಲು ಬನ್ನಂಜೆಯವರು ಒಳಗಣ್ಣು ತೆರೆದು ಸಾಗಿದ್ದರಿಂದ ಅಗಾಧ ವ್ಯಕ್ತಿತ್ವ ಬೆಳೆಯಲು ಸಾಧ್ಯವಾಯಿತು. ಅವರು ಪಂಡಿತ, ಕವಿ ಮಾತ್ರವಲ್ಲದೆ ಸತ್ಯಾನ್ವೇಷಕ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಮಾತು, ಕೃತಿ ಮತ್ತು ಆಚರಣೆಯಲ್ಲಿ ಏಕರೂಪರಾಗಿದ್ದ ಬನ್ನಂಜೆ, ಯಾರನ್ನೂ ಮೆಚ್ಚಿಸಲು ಸತ್ಯವನ್ನು ತಿರುಚಿ ಹೇಳುತ್ತಿರಲಿಲ್ಲ. ಸತ್ಯವನ್ನು ನಿಷ್ಠುರವಾಗಿ ಹೇಳುವ ಧೈರ್ಯ ಅವರಿಗೆ ಒಲಿದಿತ್ತು. ಆ ಕಾರಣದಿಂದ ತ್ರಿಕರಣಪೂರ್ವಕ ತತ್ವಬದ್ಧ ಜೀವನ ಸಾಗಿಸಲು ಸಾಧ್ಯವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬನ್ನಂಜೆ ಪ್ರತಿಷ್ಠಾನ ರಚನೆಯಾಗಲಿ
ಬನ್ನಂಜೆ ವಿಚಾರಧಾರೆ ಪಾಶ್ಚಿಮಾತ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ವಿಶ್ವಾದ್ಯಂತ ಅವರು ಮಧ್ವ ತತ್ವಶಾಸ್ತ್ರದ ಜಾಗೃತಿ ಮೂಡಿಸಿದ್ದಾರೆ. ಅವರಿಲ್ಲದಿದ್ದರೂ ಪ್ರವಚನ, ಕೃತಿಗಳ ಮೂಲಕ ಜೀವಂತವಾಗಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯ ನಡೆಯಬೇಕು. ಅದಕ್ಕಾಗಿ ಸರಕಾರ ಬನ್ನಂಜೆ ಪ್ರತಿಷ್ಠಾನ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ದಾಖಲೀಕರಣಕ್ಕೆ ಮನವಿ
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಮಕಾಲೀನ ಸಮಾಜದಲ್ಲಿ ಬನ್ನಂಜೆಯವರಿಗೆ ಸಮಾನರು ಯಾರೂ ಇರಲಿಲ್ಲ. ಅವರ ವ್ಯಕಿತ್ವ ಮತ್ತು ಕೃತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ದಾಖಲೀಕರಣ ಮಾಡಲು ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಉಡುಪಿಗೆ ಕೀರ್ತಿ
ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಂತೆ ಬನ್ನಂಜೆ ಗೋವಿಂದಾಚಾರ್ಯ ಅವರು ಉಡುಪಿಗೆ ಕೀರ್ತಿ ತಂದವರು ಎಂದು ಶಾಸಕ ರಘುಪತಿ ಭಟ್ ವಿಶ್ಲೇಷಿಸಿದರು. ಹಿಂದೂ ಧರ್ಮ, ಸಂಸ್ಕೃತಿಯೊಳಗಿನ ವಿವಿಧ ಆಯಾಮಗಳ ಸಂಶಯ, ಜಿಜ್ಞಾಸೆ, ಟೀಕೆಗಳಿಗೆ ಶಾಸ್ತ್ರದ ಉದಾಹರಣೆಗಳ ಮೂಲಕ ಸೂಕ್ತ ಉತ್ತರ ನೀಡಿದವರು ಬನ್ನಂಜೆ ಗೋವಿಂದಾಚಾರ್ಯ ಎಂದರು.

ವಿದ್ವಾಂಸರಾದ ರಾಮನಾಥ ಆಚಾರ್ಯ ಮತ್ತು ಹೆರ್ಗ ರವೀಂದ್ರ ಭಟ್ ನುಡಿನಮನ ಸಲ್ಲಿಸಿದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಇದ್ದರು. ವಾಸುದೇವ ಭಟ್ ಪೆರಂಪಳ್ಳಿ ಪ್ರಸ್ತಾವನೆಗೈದರು. ನಿವೃತ್ತ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ನಿರೂಪಿಸಿದರು.

ಈ ಸಂದರ್ಭದಲ್ಲಿ ಬನ್ನಂಜೆಯವರ ಉಡುಪಿಯ ಕಂಡೀರಾ… ಹಾಗೂ ಐದು ಕಾಲಿನ ಮಂಚ ಗೀತೆಗಳನ್ನು ಧ್ವನಿಮುದ್ರಿಕೆ ಮೂಲಕ ಕೇಳಿಸಲಾಯಿತು. ಬನ್ನಂಜೆ ಪ್ರಭಾವದಿಂದ ಅವರ ಅಧ್ಯಾತ್ಮ ಶಿಷ್ಯತ್ವ ಪಡೆದಿದ್ದ ರಷ್ಯಾದ ನರಸಿಂಹನ್ (ಮೂಲ ಹೆಸರು: ನಿಕೋಲಸ್) ಕಳಿಸಿರುವ ಸಂತಾಪ ಸಂದೇಶ ವಾಚಿಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!