Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ ಅಸ್ತಮಿಸಿದ ಜ್ಞಾನಸೂರ್ಯ: ವಿದ್ಯಾವಾಚಸ್ಪತಿ ಪದ್ಮಶ್ರೀ ಡಾ| ಬನ್ನಂಜೆ ಗೋವಿಂದಾಚಾರ್ಯ ವಿಧಿವಶ

ಅಸ್ತಮಿಸಿದ ಜ್ಞಾನಸೂರ್ಯ: ವಿದ್ಯಾವಾಚಸ್ಪತಿ ಪದ್ಮಶ್ರೀ ಡಾ| ಬನ್ನಂಜೆ ಗೋವಿಂದಾಚಾರ್ಯ ವಿಧಿವಶ

ಅಸ್ತಮಿಸಿದ ಜ್ಞಾನಸೂರ್ಯ
ವಿದ್ಯಾವಾಚಸ್ಪತಿ ಪದ್ಮಶ್ರೀ ಡಾ| ಬನ್ನಂಜೆ ಗೋವಿಂದಾಚಾರ್ಯ ವಿಧಿವಶ
ಉಡುಪಿ: ಅಗ್ರಮಾನ್ಯ ಪ್ರವಚನಕಾರ, ಮಾಧ್ವ ಪರಂಪರೆಯ ಬಹುಶ್ರುತ ವಿದ್ವಾಂಸ, ಬಹುಭಾಷಾ ವಿಶಾರದ, ಅನುವಾದಕ, ಪ್ರಕಾಶಕ, ಸಾಹಿತ್ಯ ಸಂಶೋಧಕ, ಪತ್ರಕರ್ತ ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಡಾ| ಬನ್ನಂಜೆ ಗೋವಿಂದಾಚಾರ್ಯ ಭಾನುವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಬನ್ನಂಜೆಯಲ್ಲಿರುವ ಸ್ವಗೃಹ `ಈಶಾವಾಸ್ಯಮ್’ನಲ್ಲಿ ಕೊನೆಯುಸಿರೆಳೆದರು.

ಮೃತರಿಗೆ ಈರ್ವರು ಪುತ್ರರು ಹಾಗೂ ನಾಲ್ವರು ಪುತ್ರಿಯರಿದ್ದು, ಆ ಪೈಕಿ ಕಿರಿಯ ಪುತ್ರ ಕಳೆದ 13 ದಿನಗಳ ಹಿಂದೆ ಅಸುನೀಗಿದ್ದು, ಇಂದು ಅವರ ಉತ್ತರಕ್ರಿಯೆ ಮನೆಯಲ್ಲಿ ನಡೆದಿದ್ದು, ಬನ್ನಂಜೆಯವರ ಕಣ್ಮರೆ ಮತ್ತೊಂದು ಆಘಾತವನ್ನು ಅವರ ಕುಟುಂಬಕ್ಕೆ ತಂದಿತ್ತಿದೆ.

ಸ್ವಾಧ್ಯಾಯಿ ವಿದ್ವಾಂಸ
1936 ಆಗಸ್ಟ್ 3ರಂದು ಉಡುಪಿಯಲ್ಲಿ ಜನಿಸಿದ ಗೋವಿಂದಾಚಾರ್ಯರು ವೇದಾಧ್ಯಯನದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ತಂದೆ ತರ್ಕಕೇಸರಿ ಎಸ್. ನಾರಾಯಣಾಚಾರ್ಯ, ತಾಯಿ ಸತ್ಯಭಾಮಾ. ತಂದೆಯವರ ಪ್ರಭಾವಕ್ಕೊಳಗಾಗಿದ್ದ ಅವರು, ಎಳೆವರೆಯದಲ್ಲಿಯೇ ಸಂಸ್ಕೃತ ಭಾಷೆಯ ಮೇಲೆ ಪ್ರಭುದ್ಧತೆ ಸಾಧಿಸಿದ್ದರು. ಶಾಲೆಯಲ್ಲಿ ಕಲಿತದ್ದು ಕೇವಲ ಎರಡನೇ ತರಗತಿ. ಆದರೆ, ಲೋಕ ಶಿಕ್ಷಣ ಮೂಲಕ ಸ್ವಾಧ್ಯಾಯಿಯಾಗಿ ಮೇರುವಿದ್ವಾಂಸರಾಗಿ ಬೆಳೆದ ಅವರು ಭಾರತೀಯ ಸಂಸ್ಕೃತಿಯ ರಾಯಭಾರಿಯಾದರು. ಬಾಲ್ಯದಲ್ಲಿಯೇ ರಾಮಾಯಣ, ಮಹಾಭಾರತ ಪುರಾಣ, ಉಪನಿಷತ್ತುಗಳಲ್ಲಿ ಹಿಡಿತ ಸಾಧಿಸಿ ಅವುಗಳನ್ನು ನಿರರ್ಗಳವಾಗಿ ಬೋಧಿಸಲು ಆರಂಭಿಸಿದರು.

ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯತೀರ್ಥರು ಮತ್ತು ಕಾಣಿಯೂರು ಮಠದ ವಿದ್ಯಾಸಮುದ್ರತೀರ್ಥ ಶ್ರೀಪಾದರು ಗೋವಿಂದಾಚಾರ್ಯರ ವೇದಾಧ್ಯಯನದ ಬಗೆಗಿನ ಆಸಕ್ತಿಯನ್ನು ಗಮನಿಸಿ ಅವರ ಜ್ಞಾನಾರ್ಜನೆಗೆ ಮತ್ತಷ್ಟು ಪ್ರೋತ್ಸಾಹಿಸಿದರು. ಮೊದಲ ಹಂತದಲ್ಲಿ ಗೋವಿಂದಾಚಾರ್ಯರಿಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ವೇದ ಪುರಾಣಗಳ ಬಗ್ಗೆ ಬೋಧಿಸಿದ್ದರು.

ಅವರು ಕನ್ನಡ, ತುಳು, ಸಂಸ್ಕೃತ, ಆಂಗ್ಲಭಾಷೆಗಳಲ್ಲಿ ಸುಲಲಿತವಾಗಿ ವ್ಯವಹರಿಸಬಲ್ಲವರಾಗಿದ್ದರು.

ಅದ್ಭುತ ಗ್ರಂಥಕಾರ
70ರ ದಶಕದಲ್ಲಿ `ಉದಯವಾಣಿ’ ದಿನಪತ್ರಿಕೆಯಲ್ಲಿ ಪತ್ರಕರ್ತನಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಬಳಿಕ ಅದರ ಸಾಪ್ತಾಹಿಕ ವಿಭಾಗದ ಸಂಪಾದಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು.

ಆಚಾರ್ಯ ಮಧ್ವರ ಬೋಧನೆಗಳನ್ನು ಗ್ರಂಥರೂಪಕ್ಕೆ ತರುವಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಪಾತ್ರ ಗಮನೀಯ. ಕಠಿಣತಮವಾದ ಮೂಲ ಗ್ರಂಥಗಳನ್ನೂ ಓದುಗರಿಗೆ ಸರಳೀಕೃತಗೊಳಿಸಿ ಮನಮುಟ್ಟುವಂತೆ ಭಾಷಾಂತರ ಮತ್ತು ಯಥಾರೂಪದಲ್ಲಿ ಮತ್ತೊಮ್ಮೆ ಪರಿಚಯಿಸಿದ ಕೀರ್ತಿ ಬನ್ನಂಜೆ ಅವರಿಗೆ ಸಲ್ಲುತ್ತದೆ. ಮಧ್ವಾಚಾರ್ಯರ ತಿಥಿ ನಿರ್ಣಯ ಮತ್ತು ನ್ಯಾಸ ಪದ್ಧತಿಯನ್ನು ಮೊತ್ತಮೊದಲ ಬಾರಿಗೆ ಹಲವಾರು ಶತಮಾನಗಳ ಬಳಿಕ ಪರಿಚಯಿಸಿದ್ದು ಗೋವಿಂದಾಚಾರ್ಯರು. ಸಂಸ್ಕೃತದಲ್ಲಿ ರಚಿತವಾದ ಪ್ರಮುಖ ಗ್ರಂಥಗಳ ಬಗ್ಗೆ ಗೋವಿಂದಾಚಾರ್ಯರು ತನ್ನದೇ ಆದ ಶೈಲಿಯಲ್ಲಿ ಅರ್ಥಗರ್ಭಿತವಾಗಿ ವಿಮರ್ಶಿಸುವ ಮೂಲಕ ಅವುಗಳ ಮೌಲ್ಯ ವೃದ್ಧಿಸಿದ್ದಾರೆ.

ಕನ್ನಡದಿಂದ ಸಂಸ್ಕೃತಕ್ಕೆ ಹಾಗೂ ಸಂಸ್ಕೃತದಿಂದ ಕನ್ನಡಕ್ಕೆ ಅನುವಾದವೂ ಸೇರಿದಂತೆ ಸುಮಾರು 120ಕ್ಕೂ ಅಧಿಕ ಪುಸ್ತಕ ರಚನೆ ಮತ್ತು ಪ್ರಕಾಶನ ಮಾಡಿದ್ದಾರೆ. ಬಾಣಭಟ್ಟನ `ಕಾದಂಬರಿ‘, ಕಾಳಿದಾಸನ `ಶಾಕುಂತಲಾ‘, ಶೂದ್ರಕನಮೃಚ್ಛಕಟಿಕ‘ ಇತ್ಯಾದಿ ಚಾರಿತ್ರಿಕ ಕೃತಿಗಳು ಅವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದವುಗಳು. ಮೃಚ್ಛಕಟಿಕದ ಕನ್ನಡ ಭಾಷಾಂತರ `ಆವೆ ಮಣ್ಣಿನ ಆಟದ ಬಂಡಿ‘ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಶ್ರೀ ತ್ರಿವಿಕ್ರಮಾಚಾರ್ಯದಾಸರ ‘ಆನಂದಮಾಲಾ’, ತ್ರಿವಿಕ್ರಮ ಪಂಡಿತರ ‘ವಾಯುಸ್ತುತಿ’, `ವಿಷ್ಣುಸ್ತುತಿ’ ಇತ್ಯಾದಿ ಕೃತಿಗಳಿಗೆ ಟಿಪ್ಪಣಿ ಬರೆದಿದ್ದಾರೆ. ಬ್ರಹ್ಮಸೂತ್ರ, ಆರು ಉಪನಿಷತ್ತುಗಳಿಗೆ ಟೀಕೆ ಬರೆದಿರುವ ಬನ್ನಂಜೆ, ಮಧ್ವಾಚಾರ್ಯರ ಮಹಾಭಾರತ ತಾತ್ಪರ್ಯದ ಟೀಕಾ ಕೃತಿ ‘ಯಮಕ ಭಾರತ’ಕ್ಕೆ ಟಿಪ್ಪಣಿ ಬರೆದಿದ್ದಾರೆ. `ಭಾಗವತ ತಾತ್ಪರ್ಯ’ ಕೃತಿಗೂ ಟಿಪ್ಪಣಿ ರಚಿಸಿದ್ದಾರೆ.

ಪುರುಷಸೂಕ್ತ, ಶ್ರೀಮದ್ಭಗವದ್ಗೀತೆ, ಶ್ರೀಸೂಕ್ತ, ಶಿವಸೂಕ್ತ, ನರಸಿಂಹ ಸ್ತುತಿ, ತಂತ್ರಸಾರ ಸಂಗ್ರಹ ಇತ್ಯಾದಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಧ್ವಾಚಾರ್ಯರ ಕುರಿತು ‘ಮಾಧ್ವರಾಮಾಯಣ’, ರಾಜರಾಜೇಶ್ವರ ಯತಿಗಳ ಮಂಗಲಾಷ್ಟಕ ಇತ್ಯಾದಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.

ಜೊತೆಗೆ ಸುಮಾರು 800ಕ್ಕೂ ಹೆಚ್ಚಿನ ಅಂಕಣಗಳನ್ನು ಹಲವಾರು ಪ್ರಮುಖ ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಬರೆದಿರುವ ಗೋವಿಂದಾಚಾರ್ಯರು, ಆಚಾರ್ಯ ಮಧ್ವರ ಜೀವನ ಚರಿತ್ರೆ `ಆಚಾರ್ಯ ಮಧ್ವ: ಬದುಕು ಬರಹ’ ವಿಶೇಷ ಗ್ರಂಥ ರಚಿಸಿದ್ದಾರೆ. `ಉದಯವಾಣಿ’ಯಲ್ಲಿ ಪ್ರಕಟವಾಗುತ್ತಿದ್ದ `ಕಿಷ್ಕಿಂದಾ ಕಾಂಡ’ ವಿಡಂಬನಾತ್ಮಕ ಜನಪ್ರಿಯ ಅಂಕಣವಾಗಿತ್ತು.

ಅನ್ಯಾದೃಶ ವಾಕ್ಪಟು
ಡಿ.ವಿ.ಜಿ.ಯವರಂತೆ ಉತ್ತಮ ಪದರಚನಾ ಸಾಮರ್ಥ್ಯ ಹೊಂದಿದ್ದ ಅವರು, ಘನ ಗಾಂಭೀರ್ಯರಾರರೂ ರಸಿಕತೆಯ ಲೇಪನದೊಂದಿಗೆ ಮಾತನಾಡುವ ಕಲೆ ಬನ್ನಂಜೆಯವರಿಗೆ ಕರಗತವಾಗಿತ್ತು. ಅವರ ಪ್ರವಚನಗಳು ಹೊಸ ಚಿಂತನೆ ಹುಟ್ಟಿಸುವಂಥವುಗಳಾಗಿತ್ತು. ಭಾರತದ ಪ್ರಾಚೀನ ಜ್ಞಾನಶಾಖೆಗಳಾದ ವೇದ, ಉಪನಿಷತ್ತು, ಪುರಾಣ, ರಾಮಾಯಣ, ಮಹಾಭಾರತ ಇತ್ಯಾದಿಗಳ ಕುರಿತು ದೇಶ ವಿದೇಶಗಳಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಗಂಟೆಗಳಷ್ಟು ಕಾಲ ಉಪನ್ಯಾಸ ನೀಡಿದ್ದಾರೆ. ಬನ್ನಂಜೆಯವರ ಪ್ರವಚನಗಳಿಗೆ ಜನರು ಯಾವತ್ತೂ ಕಿಕ್ಕಿರಿದು ಸೇರುತ್ತಿದ್ದರು. ಜ್ಞಾನದ ಗಣಿಯಾಗಿರುವ ಅವರು ದೇಶ ವಿದೇಶದಲ್ಲಿ ಆಧ್ಯಾತ್ಮಿಕ ಪ್ರವಚನಗಳನ್ನು ನೀಡಿ ಹಲವಾರು ಶಿಷ್ಯರು, ಅಭಿಮಾನಿಗಳನ್ನು ಹೊಂದಿದ್ದಾರೆ.

ಅವರ ಚಿಂತನಗಳು, ವಾಚನ- ವ್ಯಾಖ್ಯಾನಗಳು ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತವೆ ಉಪನ್ಯಾಸಗಳ ಧ್ವನಿಸುರುಳಿ (ಕ್ಯಾಸೆಟ್)ಗಳು, ಧ್ವನಿಮುದ್ರಿಕೆ (ಸಿಡಿ) ದೃಶ್ಯತಟ್ಟೆ (ವೀಡಿಯೊ)ಗಳೂ ಬಂದಿವೆ. ಯೂಟ್ಯೂಬ್ ನಲ್ಲೂ ಅವರ ಪ್ರವಚನ ಮಾಲಿಕೆಗಳು ಜನಪ್ರಿಯತೆ ಹೊಂದಿವೆ. ಕಿನ್ನಿಗೋಳಿ ಯುಗಪುರುಷ, ಮೂಡುಬಿದಿರೆ ಅಲಂಗಾರು ದೇವಸ್ಥಾನ, ಕಾರ್ಕಳ ತಾಲೂಕಿನ ತಿಂಗಳೆ ಮೊದಲಾದೆಡೆಗಳಲ್ಲಿ ಅನೇಕ ವರ್ಷಗಳ ಕಾಲ ಪ್ರತಿವರ್ಷ ಉಪನ್ಯಾಸ ನೀಡುತ್ತಿದ್ದರು. ಸಂಸ್ಕೃತದ ವಿಶ್ವಕೋಶವಿದ್ದಂತಿದ್ದ ಅವರ ಅನೇಕ ಪ್ರವಚನಗಳನ್ನು ಕೇಳಿ ಹೊಸತನ ಕಂಡುಕೊಂಡ ಅನುಭವ ಅನೇಕರಿಗಾಗಿದೆ.

ನಿಜಾರ್ಥದ ಆಚಾರ್ಯ
ಈಚಿನ ದಿನಗಳ ವರೆಗೂ ಬನ್ನಂಜೆ ಬಳಿ ಶಿಕ್ಷಣಾರ್ಥಿಗಳಾಗಿ ದೇಶದ ವಿವಿಧೆಡೆಗಳಿಂದ ಮಾತ್ರವಲ್ಲದೆ, ಅಮೆರಿಕಾ, ಆಸ್ಟ್ರೇಲಿಯಾ, ಯುರೋಪ್, ಇಂಡೋನೇಷ್ಯಾ, ರಷ್ಯಾ, ನೆದರ್ಲ್ಯಾಂಡ್, ಸ್ವಿಡ್ಜರ್ ಲ್ಯಾಂಡ್, ಗ್ರೀಸ್ ಮೊದಲಾದ ದೇಶಗಳಿಂದ ವಿದ್ವಾಂಸರು, ವಿದ್ಯಾರ್ಥಿಗಳು, ಸಂಶೋಧನಾಸಕ್ತರು ಆಗಮಿಸಿ ಅಧ್ಯಯನಗೈದು ಸಂತೋಷದಿಂದ ತೆರಳುತ್ತಿದ್ದರು. ಅಂಥವರಲ್ಲಿ ಅನೇಕರು ತಮ್ಮ ಹೆಸರುಗಳನ್ನೂ ಬದಲಾಯಿಸಿಕೊಂಡು ಆಚಾರ್ಯರು ಸೂಚಿಸುವ ಭಾರತೀಯ ಹೆಸರನ್ನಿಟ್ಟುಕೊಂಡು ತೆರಳುತ್ತಿರುವುದು ಬನ್ನಂಜೆಯವರ ವಿದ್ವತ್ತಿನಲ್ಲಿ ಅವರಿಗಿರುವ ಶ್ರದ್ಧೆಯನ್ನು ತೋರಿಸುತ್ತದೆ. ಇದು ಆಚಾರ್ಯರ ಮೇರು ಸದೃಶ ವಾಙ್ಮಯ ಸಾಧನೆ, ನಿಷ್ಠೆ, ತಪಸ್ಸು ಮತ್ತು ಶ್ರದ್ಧೆಗಳಿಗೆ ಸಾಕ್ಷಿಯಾಗಿವೆ.

ಸಿನೆಮಾ ಕ್ಷೇತ್ರದಲ್ಲಿ
ಸಿನೆಮಾ ಕ್ಷೇತ್ರದಲ್ಲಿಯೂ ಬನ್ನಂಜೆ ಗೋವಿಂದಾಚಾರ್ಯ ಕೈಯಾಡಿಸಿದ್ದಾರೆ. ಮೊತ್ತ ಮೊದಲ ಬಾರಿಗೆ ಸಂಸ್ಕೃತದಲ್ಲಿ ಸಿನೆಮಾ ಹೊರತಂದ ಹೆಸರಾಂತ ನಟ ನಿರ್ದೇಶಕ ಗಣಪತಿ ವೆಂಕಟರಮಣ ಐಯ್ಯರ್ (ಜಿ.ವಿ. ಐಯ್ಯರ್) ಸಂಸ್ಕೃತ ಚಲನಚಿತ್ರಗಳಾದ `ಶ್ರೀ ಶಂಕರಾಚಾರ್ಯ’, `ಶ್ರೀ ಮಧ್ವಾಚಾರ್ಯ’ ಮತ್ತು `ಶ್ರೀ ರಾಮಾನುಜಾಚಾರ್ಯ’ ಚಲನಚಿತ್ರಗಳಿಗೆ ಸಂಪನ್ಮೂಲವ್ಯಕ್ತಿಯಾಗಿ ಕೆಲಸ ನಿರ್ವಹಿಸಿದ್ದಲ್ಲದೆ, ಸಂಭಾಷಣೆಯನ್ನೂ ರಚಿಸಿದ್ದರು. ಕನ್ನಡ ಚಲನಚಿತ್ರಗಳಿಗೂ ಸಂಭಾಷಣೆ ಬರದಿದ್ದರು. ಕನ್ನಡದ ಖ್ಯಾತ ನಟ ವಿಷ್ಣುವರ್ಧನ ಅವರಿಗೆ ಆಧ್ಯಾತ್ಮಿಕ ಗುರುವಾಗಿದ್ದರು.

ಗೌರವಾದರಗಳು
ಉಡುಪಿಯೂ ಸೇರಿದಂತೆ ನಾಡಿನ ಮಾಧ್ವ ಮಠಗಳ ಗೌರವಾದರಗಳಿಗೆ ಪಾತ್ರರಾದ ಬನ್ನಂಜೆ ಗೋವಿಂದಾಚಾರ್ಯ ಅವರಿಗೆ ಉಡುಪಿಯ ಅಷ್ಟಮಠಗಳೂ ಸೇರಿದಂತೆ ಅನೇಕ ಪ್ರಸಿದ್ಧ ಮಠ, ಸಂಸ್ಥಾನಗಳಿಂದ ವಿದ್ಯಾವಾಚಸ್ಪತಿ, ವಿದ್ಯಾರತ್ನಾಕರ, ಪಂಡಿತರತ್ನ, ಸಂಶೋಧನಾ ವಿಚಕ್ಷಣ, ಪಂಡಿತಾಚಾರ್ಯ, ಪ್ರತಿಬಾಂಬುಧಿ, ಶಾಸ್ತ್ರ ಸವ್ಯಸಾಚಿ, ಶ್ರೀಕೃಷ್ಣಾನುಗ್ರಹ ಪ್ರಶಸ್ತಿ, ಸಾಹಿತ್ಯ ಸಾರ್ವಭೌಮ, ಸಂಶೋಧನ ವಿಚಕ್ಷಣ, ಪಂಡಿತರತ್ನ, ಪಂಡಿತ ಶಿರೋಮಣಿ, ವಿದ್ಯಾರತ್ನಾಕರ, ವೇದವ್ಯಾಸ ಸಂಮಾನ್ ಇತ್ಯಾದಿ ಪ್ರಶಸ್ತಿಗಳು ಅರಸಿಬಂದಿವೆ. ಶ್ರೀಕೃಷ್ಣಮಠೀಯ ವಿದ್ವಾಂಸ ಪದವಿಗೂ ಪಾತ್ರರಾಗಿದ್ದರು.

ಬನ್ನಂಜೆಯವರ ಬಹುಮುಖ ಸೇವೆಗಾಗಿ 1974ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್, 2009ರಲ್ಲಿ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.

ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ಒದಗಿಬಂದಿತ್ತು. 2008ರಲ್ಲಿ ಅಮೆರಿಕಾದ ಪ್ರಿನ್ಸ್ಟನ್ ನಲ್ಲಿ ನಡೆದ ವಿಶ್ವಶಾಂತಿ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿದ್ದ ಬನ್ನಂಜೆ ಗೋವಿಂದಾಚಾರ್ಯ, ಆ ಮೂಲಕ ಅಂತಾರಾಷ್ಟ್ರೀಯ ಗೌರವಕ್ಕೂ ಪಾತ್ರರಾಗಿದ್ದರು.

ಕಾಂತಾವರ ಕನ್ನಡ ಸಂಘ ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ಬನ್ನಂಜೆ ಕುರಿತು ಪುಸ್ತಕ ಪ್ರಕಟಿಸಿತ್ತು.

ಸಮಾಜದ ನೊಂದವರ ಕಣ್ಣೀರೊರೆಸುವ ಕಾಯಕದಲ್ಲಿ ತೊಡಗಿದ್ದ ಬನ್ನಂಜೆ ಗೋವಿಂದಾಚಾರ್ಯ, ನೆರೆ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗಾಗಿ ಮಾನವೀಯತೆಯ ನೆಲೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಲಕ್ಷಕ್ಕೂ ಅಧಿಕ ಮೊತ್ತದ ದೇಣಿಗೆಯನ್ನು ನೀಡಿದ್ದರು. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂತ್ರಸ್ತ ಬಡವರಿಗೆ ಆಹಾರ ಸಾಮಗ್ರಿ ವಿತರಣೆಯನ್ನು ಪ್ರಚಾರ ಬಯಸದೇ ನೀಡಿದ್ದರು.

ಮಠಾಧೀಶರ ಸಂತಾಪ
ವಿದ್ಯಾವಾಚಸ್ಪತಿ ಪದ್ಮಶ್ರೀ ಡಾ| ಬನ್ನಂಜೆ ಗೋವಿಂದಾಚಾರ್ಯ ನಿಧನಕ್ಕೆ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.
ವಿದ್ವತ್ ಪ್ರಪಂಚದ ಅಪೂರ್ವ ಕೊಂಡಿ ಕಳಚಿದೆ ಎಂದವರು ಕಂಬನಿ ಮಿಡಿದಿದ್ದಾರೆ.
ಮಧ್ವಪೀಠದಲ್ಲಿ ಮಂಡಿಸಿ 25 ಮಂದಿ ಪಂಡಿತರೊಂದಿಗೆ ವಿಷ್ಣು ಸಹಸ್ರನಾಮ ಪಠಿಸಿ ಅಗಲಿದ ಬನ್ನಂಜೆ ಗೋವಿಂದಾಚಾರ್ಯರ ದಿವ್ಯಚೇತನಕ್ಕೆ ಚಿರಶಾಂತಿಯನ್ನು ನೀಡಲೆಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ದುಃಖ ತಂದಿದೆ- ವಿಶ್ವಪ್ರಿಯತೀರ್ಥರು
ಬನ್ನಂಜೆ ಗೋವಿಂದಾಚಾರ್ಯರು ನಮ್ಮ ಗುರುಗಳಾದ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಸಹಪಾಠಿಗಳಾಗಿದ್ದರು. ಅಂತೆಯೇ ಬನ್ನಂಜೆಯವರ ತಂದೆ ಪಡಮನ್ನೂರು ನಾರಾಯಣ ಆಚಾರ್ಯರು ನಮ್ಮ ಗುರುಗಳ ಗುರುಗಳು. ಬನ್ನಂಜೆಯವರು ಅನೇಕ ವರ್ಷಗಳ ಪರ್ಯಂತ ಸಕುಟುಂಬಿಕರಾಗಿ ಶ್ರೀಮಠದ ಆವರಣದಲ್ಲಿದ್ದುಕೊಂಡು ಗುರುಗಳಾದ ಶ್ರೀ ವಿಬುಧೇಶತೀರ್ಥ ಶ್ರೀಪಾದರೊಂದಿಗೆ ಚಿಂತನ- ಮಂಥನ ನಡೆಸುತ್ತಿದ್ದರು. ಬನ್ನಂಜೆಯವರಿಗೆ ವಿದ್ಯಾವಾಚಸ್ಪತಿ ಎಂಬ ಬಿರುದನ್ನು ಕೊಟ್ಟವರು ನಮ್ಮ ಗುರುಗಳಾದ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಎಂದು ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸ್ಮರಿಸಿದ್ದಾರೆ.
ಪದ್ಮಶ್ರೀ ಮುಂತಾದ ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಬನ್ನಂಜೆಯವರು ಸಂಸ್ಕೃತ ಲೋಕದಲ್ಲಿ ಮೇರು ಸಾಧನೆಗೈದಿದ್ದಾರೆ. ಅವರ ಅಗಲಿಕೆ ನಮಗೆ ತುಂಬಾ ನೋವು ಮತ್ತು ನಷ್ಟವನ್ನುಂಟುಮಾಡಿದೆ. ಅಗಲಿದ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ಅಪೂರ್ವ ವ್ಯಕ್ತಿತ್ವ: ಪುತ್ತಿಗೆಶ್ರೀ
ಬನ್ನಂಜೆಯವರು ವಿದ್ವಾಂಸರು ಮಾತ್ರವಲ್ಲದೆ, ಅವರದು ಅಪೂರ್ವ ವ್ಯಕ್ತಿತ್ವ ಎಂದು ಬಣ್ಣಿಸಿರುವ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಅವರ ಕಣ್ಮರೆ ಸಮಾಜ ಮತ್ತು ಸಾರಸ್ವತ ಪ್ರಪಂಚಕ್ಕೆ ದೊಡ್ಡ ನಷ್ಟ. ಸಂದೇಶದೊಂದಿಗೆ ಸಾಧಕರಾಗಿದ್ದ ಅವರ ಪ್ರವಚನ, ಗ್ರಂಥ ಅನೇಕರಿಗೆ ಪ್ರಭಾವ ಬೀರಿದೆ ಎಂದು ಬಣ್ಣಿಸಿದ್ದಾರೆ.

ಭೀಷ್ಮಸದೃಶ ಜ್ಞಾನಸೂರ್ಯ: ಪಲಿಮಾರುಶ್ರೀ
ಭೀಷ್ಮಸದೃಶ, ಶ್ರೇಷ್ಠ ವಿದ್ವಾಂಸ, ಜ್ಞಾನಸೂರ್ಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ವಿದ್ಯಾರತ್ನಾಕರ ಡಾ| ಬನ್ನಂಜೆ ಗೋವಿಂದಾಚಾರ್ಯರು ಬ್ರಹ್ಮಸೂತ್ರದಿಗಳಿಗೆ ಹೊಸ ಚಿಂತನೆ, ಮಹಾಭಾರತವನ್ನು ಮನಮುಟ್ಟುವಂತೆ ಮಾಡುವ, ಪುರಾಣಗಳಿಗೆ ವೈಜ್ಞಾನಿಕ ನಿರೂಪಣೆ ನೀಡಿ ನವ ಪೀಳಿಗೆಯನ್ನು ಆಕರ್ಷಿಸುವ, ಉಪನಿಷತನ್ನು ಸಭೆಗಳಲ್ಲಿ ಸಾಮಾನ್ಯರಿಗೂ ತಿಳಿಯುವ ರೀತಿಯಲ್ಲಿ ಉಪನ್ಯಾಸ ಮಾಡುವ ನಾಡಿನ ಶ್ರೇಷ್ಠ ವಿದ್ವಾಂಸರು. ಸತ್ಯ ಹಾಗೂ ನೇರ ನುಡಿಯ ಸ್ವಭಾವದವರಾದ ಅವರು ನಾಟಕ, ಸಿನೆಮಾ, ಸಾಹಿತ್ಯ, ಬರಹ, ಉಪನ್ಯಾಸ ಮೊದಲಾದ ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡ ಮಹಾಜ್ಞಾನಿಗಳು. ಅವರು ನಿಧನರಾಗಿರುವುದು ಆಸ್ತಿಕ ಪ್ರಪಂಚಕ್ಕೆ ತುಂಬಲಾರದ ನಷ್ಟ. ತಮ್ಮ ಬಾಲ್ಯದಿಂದಲೂ ಶ್ರೀಮಠದ ಒಡನಾಟವನ್ನಿಟ್ಟುಕೊಂಡಿದ್ದು, ಆಸ್ಥಾನ ವಿದ್ವಾಂಸರಾಗಿ ಮಠಕ್ಕೆ ತುಂಬಾ ಕೊಡುಗೆ ನೀಡಿದ ಅವರನ್ನು ಕಳೆದುಕೊಂಡಿರುವುದು ಅತೀವ ದುಃಖ ತಂದಿದೆ. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ಕೊಟ್ಟು, ಮೃತರ ಆತ್ಮಕ್ಕೆ ಸದ್ಗತಿಯಾಗಲಿ ಎಂದು ಉಪಾಸ್ಯಮೂರ್ತಿ ಸೀತಾಪತಿ ಶ್ರೀರಾಮಚಂದ್ರ ಮತ್ತು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಮೃತರಿಗೆ ಪ್ರಾಪ್ತವಾಗಲಿ ಎಂದು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಅವಿನಾಭಾವ ಸಂಬಂಧ: ಪೇಜಾವರಶ್ರೀ
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶೋಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸಂತಾಪ ಸೂಚಕ ಸಭೆ ನಡೆಸಿ ನುಡಿನಮನ ಸಲ್ಲಿಸಿದರು.
ಪೇಜಾವರ ಮಠ ಸಹಿತ ಅಷ್ಟಮಠಗಳೊಂದಿಗೆ ಬನ್ನಂಜೆ ಹೊಂದಿದ್ದ ಅವಿನಾಭಾವ ಸಂಬಂಧವನ್ನು ಸ್ಮರಿಸಿದ ಶ್ರೀಪಾದರು, ಅವರ ನಿಧನದಿಂದ ವಿದ್ವತ್ ಪರಂಪರೆಯ ಕೊಂಡಿಯೊಂದು ಕಳಚಿದಂತಾಗಿದೆ ಎಂದರು.
ವಿದ್ಯಾಪೀಠದ ವಿದ್ವಾಂಸರು ಮತ್ತು ಬನ್ನಂಜೆಯವರ ಅಭಿಮಾನಿಗಳು ಇದ್ದರು.
ಬನ್ನಂಜೆ ನಿಧನಕ್ಕೆ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.

ಮಂತ್ರಾಲಯಶ್ರೀ
ನಾಡಿನ ಹಿರಿಯ ವಿದ್ವಾಂಸ, ಉತ್ತಮ ಅನುವಾದಕ, ಗ್ರಂಥಪ್ರಕಾಶಕರಾದ ಬನ್ನಂಜೆ ಗೋವಿಂದಾಚಾರ್ಯರ ನಿಧನದಿಂದ ಸಾರಸ್ವತ ಪ್ರಪಂಚಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ನಮ್ಮ ಶ್ರೀಮಠದ ಪ್ರತಿಷ್ಠಿತ ಸನ್ಮಾನವಾದ ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿಗೆ ಪಾತ್ರರಾಗಿದ್ದರು ಎಂದು ಮಂತ್ರಾಲಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.
ಡಾ| ಬನ್ನಂಜೆ ಗೋವಿಂದಾಚಾರ್ಯ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.

ಗಣ್ಯರ ಕಂಬನಿ
ಪ್ರಧಾನಿ ಕಂಬನಿ
ಡಾ| ಬನ್ನಂಜೆ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಸಂಸ್ಕೃತ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಅವರ ಪ್ರಭಾವ ಮುಂದಿನ ತಲೆಮಾರಿಗೆ ಮಾರ್ಗದರ್ಶಿಯಾಗಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಶೋಕ
ಬನ್ನಂಜೆ ಗೋವಿಂದಾಚಾರ್ಯರ ನಿಧನಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ನಾಡಿನ ಹಿರಿಯ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ಸಾಹಿತಿ, ಕವಿ, ಪ್ರವಚನಕಾರ ಉಡುಪಿಯ ಡಾ| ಬನ್ನಂಜೆ ಗೋವಿಂದಾಚಾರ್ಯರು ವಿಧಿವಶರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ವೇದ, ಪುರಾಣಗಳ ಕುರಿತ ಅವರ ಕೃತಿಗಳು, ಪ್ರವಚನಗಳು ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತಿದ್ದವು. ಅನೇಕ ಸಂಸ್ಕೃತ, ಕನ್ನಡ ಗ್ರಂಥಗಳನ್ನು ರಚಿಸಿದ್ದರು. ಸಂಸ್ಕೃತ, ಕನ್ನಡ, ತುಳು ಭಾಷೆಗಳಲ್ಲಿ ಪಾರಂಗತರಾಗಿದ್ದ ಬನ್ನಂಜೆಯವರ ನಿಧನದಿಂದ ನಾಡು ಶ್ರೇಷ್ಠ ಜ್ಞಾನಿಗಳನ್ನು, ಸಾರಸ್ವತ ಲೋಕದ ಅಗಾಧ

ಸಚಿವ ಸುರೇಶಕುಮಾರ್ ಸಂತಾಪ
ವಿದ್ಯಾವಾಚಸ್ಪತಿ ಡಾ| ಬನ್ನಂಜೆ ಗೋವಿಂದಾಚಾರ್ಯ ನಿಧನಕ್ಕೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಸನಾತನ ಧರ್ಮದ ಕುರಿತಂತೆ ಅವರ ಅಪ್ರತಿಮ ಜ್ಞಾನ, ಸಂಶೋಧನಾತ್ಮಕವಾದ ಅವರ ನಿಲುವುಗಳು ಸಮಾಜದ ಧಾರ್ಮಿಕ ಪ್ರಜ್ಞೆಯನ್ನು ಉದ್ದೀಪನಗೊಳಿಸುವಂತಿದ್ದವು. ಅವರ ಸಮಾಜಸೇವೆಯ ತುಡಿತವೂ ಅನುಕರಣೀಯವಾಗಿತ್ತು.
ತಮ್ಮ ಸಂಶೋಧನಾ ಗ್ರಂಥಗಳು, ಪ್ರವಚನಗಳ ಮೂಲಕ ವ್ಯಾಸ, ಮಧ್ವರಂಥ ಭಕ್ತಿ ಚೇತನಗಳನ್ನು ಜನಮಾನಸದಲ್ಲಿ ಪ್ರತಿಷ್ಠಾಪಿಸಿದ ಡಾ| ಬನ್ನಂಜೆ ಗೋವಿಂದಾಚಾರ್ಯರ ನಿಧನದಿಂದ ಸಾರಸ್ವತ ಲೋಕ ಅಗಾಧ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮತ್ತು ವಿನಯಕುಮಾರ್ ಸೊರಕೆ, ಶಾಸಕ ರಘುಪತಿ ಭಟ್, ಸಂಸದೆ ಶೋಭಾ ಕರಂದ್ಲಾಜೆ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಿನ್ನಿಗೋಳಿ ಯುಗಪುರುಷ ಭುವನಾಭಿರಾಮ ಉಡುಪ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ ಆಳ್ವ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

 

 

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!