Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಬ್ರೇಕ್ ವಾಟರ್ ನಿರ್ಮಾಣದಿಂದ ಕಡಲ್ಕೊರೆತ ತಡೆ

ಬ್ರೇಕ್ ವಾಟರ್ ನಿರ್ಮಾಣದಿಂದ ಕಡಲ್ಕೊರೆತ ತಡೆ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 11

ಬ್ರೇಕ್ ವಾಟರ್ ನಿರ್ಮಾಣದಿಂದ ಕಡಲ್ಕೊರೆತ ತಡೆ
ಉಡುಪಿ: ಸಮುದ್ರ ತಡೆಗೋಡೆ (ಬ್ರೇಕ್ ವಾಟರ್) ಗಳ ನಿರ್ಮಾಣದಿಂದ ಸಮುದ್ರ ಕೊರೆತ ಸಮಸ್ಯೆ ಪರಿಹಾರ ಸಾಧ್ಯ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರ ಕಾಪು ತಾಲೂಕು ಮೂಳೂರು ಪ್ರದೇಶದಲ್ಲಿ ಸಮುದ್ರ ಕೊರೆತದಿಂದ ಉಂಟಾದ ನಷ್ಟ ಕುರಿತು ಪರಿಶೀಲನೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.

ಕರಾವಳಿ ಜಿಲ್ಲೆಗಳಲ್ಲಿ ವಾಡಿಕೆಯಂತೆ ಜೂನ್ ತಿಂಗಳಿನಲ್ಲಿ ಮಳೆ ಬರಬೇಕು. ಆದರೆ, ಈ ಬಾರಿ ಬಹಳ ತಡವಾಗಿ ಮಳೆ ಶುರುವಾಗಿ ಆರಂಭದ ಮೊದಲ ಸುಮಾರು 20 ದಿನಗಳ ಕಾಲ ಮಳೆ ವಿರಳವಾಗಿತ್ತು. ಆದರೆ, ಕಳೆದ ಹತ್ತು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ದಿನದ ವಾಡಿಕೆ ಮಳೆಗಿಂತ 2- 3 ಪಟ್ಟು ಮಳೆ ಹೆಚ್ಚಾಗಿ ಸುರಿಯುತ್ತಿದೆ. ಹಾಗಾಗಿ ಕರಾವಳಿಯಲ್ಲಿ ದೊಡ್ಡ ಪ್ರಮಾಣದ ನಷ್ಟವುಂಟಾಗಿದೆ. ಸುಮಾರು 6- 7 ಮನೆಗಳು ಸಂಪೂರ್ಣ ನಾಶವಾಗಿದ್ದು, 30 ಮನೆಗಳು ಭಾಗಶಃ ಹಾನಿಯಾಗಿವೆ.

ಸಮುದ್ರ ಕೊರೆತ ಹೆಚ್ಚಾಗಿದ್ದು ದೊಡ್ಡ ಪ್ರಮಾಣದಲ್ಲಿ ಜಮೀನು ಸಮುದ್ರ ಪಾಲಾಗಿದೆ. ಪ್ರತಿ ವರ್ಷದಂತೆ ಸಮುದ್ರ ಕೊರೆತಕ್ಕೆ ಕಲ್ಲು ಹಾಕುವ ಮೂಲಕ ತಡೆಗೋಡೆ ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ.

ಆದರೂ ಶಾಶ್ವತ ತಡೆಗೋಡೆಯಿಂದ ಮಾತ್ರ ಸಮುದ್ರ ಕೊರೆತ ಸಮಸ್ಯೆ ಪರಿಹಾರ ಸಾಧ್ಯ ಎಂದರು.

ಹೆಚ್ಚು ಹೆಚ್ಚು ಬ್ರೇಕ್ ವಾಟರ್ ನಿರ್ಮಾಣದಿಂದ ಸಮುದ್ರ ಕೊರೆತ ತಡೆಯಲು ಸಾಧ್ಯವಿದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆ ವಿಚಾರದಲ್ಲಿ ಹೆಚ್ಚಿನ ಗಮನನೀಡಲಾಗುವುದು ಎಂದರು.

ಸರ್ಕಾರಗಳಿಗೆ ಮನವಿ
ಸಿಆರ್.ಝಡ್ ಸಮಸ್ಯೆಯಿಂದಾಗಿ ಈ ಕಾರ್ಯ ಬಾಕಿ ಉಳಿದಿದ್ದು, ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನನು ಒತ್ತಾಯಿಸಲಾಗಿದೆ. ತಡೆಗೋಡೆ ನಿರ್ಮಾಣಕ್ಕೆ ದೊಡ್ಡ ಪ್ರಮಾಣದ ಹಣದ ಆವಶ್ಯಕತೆ ಇದ್ದು, ಎಲ್ಲಿ ಅಗತ್ಯವಿದೆ ಎಂದು ನೋಡಿಕೊಂಡು ನಿರ್ಮಿಸಲಾಗುತ್ತದೆ.

ಯಾವುದೇ ಅಧಿಕಾರಿಗಳು ಈ ವಿಚಾರದಲ್ಲಿ ಕರ್ತವ್ಯ ಲೋಪ ಮಾಡಿದಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಮಳೆ ಹಾನಿಗೆ ಪರಿಹಾರ
ಜಿಲ್ಲೆಯಲ್ಲಿ ಮಳೆಯಿಂದಾಗಿ ಸುಮಾರು 30 ಕೋಟಿ ರೂ. ನಷ್ಟವುಂಟಾಗಿದ್ದು, ಅದಕ್ಕೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ಸಚಿವೆ ಶೋಭಾ, ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂಬ ಭರವಸೆಯನ್ನು ಸಚಿವರು ಮತ್ತು ಮುಖ್ಯಮಂತ್ರಿ ನೀಡಿದ್ದಾರೆ. ಎಂದರು.

ಗದ್ದೆಗಳಲ್ಲಿ ನೀರು ನಿಂತಿರುವ ಪರಿಣಾಮ ಕೃಷಿ ಹಾನಿ ಎಷ್ಟರ ಮಟ್ಟಿಗೆ ನಡೆದಿದೆ ಎಂಬುದನ್ನು ಅಂದಾಜು ಮಾಡಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ. ನೀರು ಇಳಿದ ಬಳಿಕ ಸರ್ವೇ ನಡೆಸಿ ಸೂಕ್ತ ಪರಿಹಾರ ನೀಡುವ ಕೆಲಸವನ್ನು ಸರಕಾರ ಮಾಡಲಿದೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್, ಕುಂದಾಪುರ ಸಹಾಯಕ ಕಮೀಷನರ್ ರಾಜು, ಕೃಷಿ ಇಲಾಖೆ ಉಪನಿರ್ದೇಶಕ ಕೆಂಪೇಗೌಡ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!