ಉಡುಪಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ, ಅತ್ಯಂತ ಉತ್ತಮ ರೀತಿಯಲ್ಲಿ ಜನಸೇವೆ ಮಾಡಿದ್ದಾರೆ. ಸಾಮಾನ್ಯ ನಾಗರಿಕರು ಕೋವಿಡ್ ನಿಂದ ಹೆದರಿರುವ ಸಂದರ್ಭದಲ್ಲಿ ಹಾಗೂ ವಿರೋಧ ಪಕ್ಷಗಳು ಮನೆಯಲ್ಲೇ ಸೆಲ್ಪ್ ಕ್ವಾರೆಂಟೈನ್ ಮಾಡಿರುವ ಸನ್ನಿವೇಶದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಯೊಂದು ಬೂತ್ ನಲ್ಲಿ ಕೋವಿಡ್ ಬಗ್ಗೆ ಜನಜಾಗೃತಿ ಮೂಡಿಸುವ ಜೊತೆಗೆ ಅಗತ್ಯ ಸಹಾಯದೊಂದಿಗೆ ಲಸಿಕೆ ವಿತರಣೆ ಅಭಿಯಾನದಲ್ಲೂ ಸರಕಾರ ಮತ್ತು ಅಧಿಕಾರಿಗಳ ಜೊತೆ ಕೈಜೋಡಿಸಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಅಂಥ ಎಲ್ಲ ಕಾರ್ಯಕರ್ತರ ಸೇವೆ ಪ್ರಶಂಸನೀಯ ಎಂದು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಜಿಲ್ಲಾ ಪದಾಧಿಕಾರಿಗಳೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿ, ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾತನಾಡಿದರು.
ಡಾ| ಶ್ಯಾಮಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯರಂಥ ಹಿರಿಯರ ತ್ಯಾಗ, ಬಲಿದಾನದ ಸಿದ್ಧಾಂತಗಳಡಿ ಪಕ್ಷ ಕಟ್ಟಲಾಗಿದೆ. ಅವರ ದೂರದರ್ಶಿತ್ವದ ಚಿಂತನೆ ಮತ್ತು ತತ್ವಾದರ್ಶ ಮೈಗೂಡಿಸಿಕೊಂಡು ಪಕ್ಷ ಬೆಳೆಸುವ ಗುರುತರ ಜವಾಬ್ದಾರಿ ಎಲ್ಲ ಕಾರ್ಯಕರ್ತರ ಮೇಲಿದೆ. ದಣಿವರಿಯದೆ ಸೇವೆಯಲ್ಲಿ ತೊಡಗಿಸಿಕೊಂಡು ಜನತೆಯ ಆಶೋತ್ತರ ಈಡೇರಿಸಿದಾಗ ನಿಗದಿತ ಗುರಿ ತಲುಪಲು ಸಾಧ್ಯ ಎಂದರು.
ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಂವಾದ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ನಿಯಮಿತವಾಗಿ ಭಾಗವಹಿಸುವುದಾಗಿ ತಿಳಿಸಿದ ಸಚಿವ ಬೊಮ್ಮಾಯಿ, ಉಡುಪಿ ಜಿಲ್ಲೆಯಾದ್ಯಂತ ಕಿಂಡಿ ಅಣೆಕಟ್ಟು ನಿರ್ಮಾಣ ಪ್ರಗತಿಯಲ್ಲಿದ್ದು, ರಸ್ತೆ ಅಭಿವೃದ್ಧಿ, ಆಸ್ಪತ್ರೆ ಮೇಲ್ದರ್ಜೆಗೇರಿಸುವುದು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮೂಲಕ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತುನೀಡಿ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳುವ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ರಘುಪತಿ ಭಟ್, ಸುನಿಲ್ ಕುಮಾರ್ ಮತ್ತು ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಎ. ಸುವರ್ಣ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರಬಾಬು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ ಮತ್ತು ಸದಾನಂದ ಉಪ್ಪಿನಕುದ್ರು ಮೊದಲಾದವರಿದ್ದರು