Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಕಾರ್ಯಕರ್ತರ ಕಷ್ಟಕ್ಕೆ ಸ್ಪಂದಿಸದ ಬಿಜೆಪಿ: ಮುತಾಲಿಕ್ ಖೇದ

ಕಾರ್ಯಕರ್ತರ ಕಷ್ಟಕ್ಕೆ ಸ್ಪಂದಿಸದ ಬಿಜೆಪಿ: ಮುತಾಲಿಕ್ ಖೇದ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ಕಾರ್ಯಕರ್ತರ ಕಷ್ಟಕ್ಕೆ ಸ್ಪಂದಿಸದ ಬಿಜೆಪಿ: ಮುತಾಲಿಕ್ ಖೇದ
ಉಡುಪಿ: ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿಯುತ್ತಿರುವ ಕಾರ್ಯಕರ್ತರ ಕಷ್ಟಕ್ಕೆ ಬಿಜೆಪಿ ಸ್ಪಂದಿಸುತ್ತಿಲ್ಲ ಎಂದು ಹಿಂದೂ ಮುಂದಾಳು, ಶ್ರೀರಾಮ ಸೇನೆ ಪ್ರಮುಖ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಯದಲ್ಲಿ ನಡೆದ ಪ್ರವೀಣ್ ಹತ್ಯೆ ಅತ್ಯಂತ ದುರದೃಷ್ಟಕರ. ಗುರುವಾರ ಸಿಎಂ ಜೊತೆ ಬಿಜೆಪಿ ಮುಖಂಡರು ಪ್ರವೀಣ್ ಮನೆಗೆ ಭೇಟಿ ನೀಡಿದ್ದಾರೆ. ಸಿಎಂ 25 ಲಕ್ಷ ರೂ. ನೀಡಿರುವುದನ್ನು ಒಪ್ಪಲಾಗದು. ಬಿಜೆಪಿಯವರು ತಮ್ಮ ಕಾರ್ಯಕರ್ತರ ಕಷ್ಟ ಸುಖದಲ್ಲಿ ಸ್ಪಂದಿಸಿದ್ದಲ್ಲಿ ಪ್ರವೀಣ್ ಹತ್ಯೆ ಆಗುತ್ತಿರಲಿಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಅಕ್ರಮ ಆಸ್ತಿ ಸಂಪಾದನೆ
ಪ್ರವೀಣ್ ನೆಟ್ಟಾರು ತಾನು ದುಡಿದು ಪೋಷಕರ ಪೋಷಣೆಯ ಜೊತೆಗೆ ಬಿಜೆಪಿಗಾಗಿ ನಿಷ್ಠೆಯಿಂದ ದುಡಿಯುತ್ತಿದ್ದಾತ. ಆತನಿಗೆ ಸ್ವಂತ ಮನೆಯೂ ಇಲ್ಲ. ಪಕ್ಷ ನಾಯಕರು ಕಾರ್ಯಕರ್ತರ ಕಷ್ಟ ಅರಿತಿದ್ದರೆ ಪ್ರವೀಣ್ ಗೆ ಆಶ್ರಯ ಸಿಗುತ್ತಿತ್ತು ಎಂದು ಮುತಾಲಿಕ್ ವಿಷಾದ ವ್ಯಕ್ತಪಡಿಸಿದರು.

ಬಿಜೆಪಿಯ ಎಲ್ಲರೂ 3- 4 ಪೀಳಿಗೆ ತಿಂದುಣ್ಣುವಷ್ಟು ಮಾಡಿಟ್ಟಿದ್ದಾರೆ. ಅದಕ್ಕಾಗಿ ನಾನು ಬಿಜೆಪಿಗೆ ಧಿಕ್ಕಾರ ಎನ್ನುತ್ತಿದ್ದೇನೆ ಎಂದ ಪ್ರಮೋದ್ ಮುತಾಲಿಕ್, ಈ ಆಕ್ರೋಶ ಶವಯಾತ್ರೆ ದಿನ ಸ್ಫೋಟಗೊಂಡಿದೆ.

ಘಟನೆ ಹಿನ್ನೆಲೆಯಲ್ಲಿ ರಾಜೀನಾಮೆ ಕೊಟ್ಟ ಎಲ್ಲರಿಗೂ ನಾನು ಅಭಿನಂದಿಸುತ್ತೇನೆ. ರಾಜೀನಾಮೆ ಕೊಟ್ಟವರು ನಿಜವಾದ ಹಿಂದುತ್ವ ವಾದಿಗಳು ಎಂದ ಮುತಾಲಿಕ್, ಪ್ರವೀಣ್ ಕೊಲೆಯಂಥ ಘಟನೆಗಳು ಮೇಲಿಂದ ಮೇಲೆ ನಡೆಯಬಾರದು ಎಂದರು.

ಸುರತ್ಕಲ್ ವಿಚಾರ
ಸುರತ್ಕಲ್ ಮುಹಮ್ಮದ್ ಫಾಝಿಲ್ ಕೊಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್, ಸುರತ್ಕಲ್ ನಲ್ಲಿ ಯಾವುದಕ್ಕಾಗಿ ಕೊಲೆಯಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ.

ಆದರೆ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತಾಗಬಾರದು. ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಒಟ್ಟಿಗೆ ಸೇರಿ ಇದನ್ನು ಬಗೆಹರಿಸಬೇಕು ಎಂದು ಮುತಾಲಿಕ್ ಸಲಹೆ ನೀಡಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!