Tuesday, May 17, 2022
Home ಸಮಾಚಾರ ರಾಜ್ಯ ವಾರ್ತೆ ಭ್ರಷ್ಟಾಚಾರ ಭಯೋತ್ಪಾದನೆ ಪರಿವಾರ ವ್ಯಾಮೋಹ ಕಾಂಗ್ರೆಸ್ ಕೊಡುಗೆ

ಭ್ರಷ್ಟಾಚಾರ ಭಯೋತ್ಪಾದನೆ ಪರಿವಾರ ವ್ಯಾಮೋಹ ಕಾಂಗ್ರೆಸ್ ಕೊಡುಗೆ

ಸುದ್ದಿಕಿರಣ ವರದಿ
ಮಂಗಳವಾರ, ಮೇ 10

ಭ್ರಷ್ಟಾಚಾರ ಭಯೋತ್ಪಾದನೆ ಪರಿವಾರ ವ್ಯಾಮೋಹ ಕಾಂಗ್ರೆಸ್ ಕೊಡುಗೆ
ಉಡುಪಿ: ದೇಶವನ್ನು ಸುದೀರ್ಘ ಅವಧಿಯಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್, ಈ ದೇಶಕ್ಕೆ ನೀಡಿದ ಕೊಡುಗೆಗಳೆಂದರೆ ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಪರಿವಾರ ಮೋಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.

ಉಡುಪಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಮಂಗಳವಾರ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಶಂಖ ನಾದದ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅರ್ಕಾವತಿ ತನಿಖೆ
ಕಾಂಗ್ರೆಸ್ ಆಡಳಿತದಲ್ಲಿ ಹಗರಣಗಳ ಸರಮಾಲೆಯೇ ನಡೆಯಿತು. ಆದರೆ, ವಾಜಪೇಯಿ ನೇತೃತ್ವದ ಸರ್ಕಾರ ಹಾಗೂ ಪ್ರಸ್ತುತ ಮೋದಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ ಎಂದ ನಳಿನ್ ಕುಮಾರ್, ಅರ್ಕಾವತಿ ಹಗರಣದ ತನಿಖೆ ನಡೆದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಾಶ್ವತವಾಗಿ ಜೈಲು ಸೇರಬೇಕಾಗುತ್ತದೆ.

ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಸಿದರು.

ಗಲಭೆ ಹಿಂದೆ ಕಾಂಗ್ರೆಸ್
ಭಯೋತ್ಪಾದನೆಗೆ ಮೂಲ ಕಾಂಗ್ರೆಸ್ ಎಂದು ಆರೋಪಿಸಿದ ನಳಿನ್, ಈ ಹಿಂದೆ ಎಲ್ಲೆಂದರಲ್ಲಿ ಬಾಂಬ್ ದಾಳಿ ನಡೆಯುತ್ತಿದ್ದು, ಮೋದಿ ಅವಧಿಯಲ್ಲಿ ಇದುವರೆಗೆ ದೇಶದ ಎಲ್ಲೂ ಬಾಂಬ್ ಸಿಡಿದಿಲ್ಲ. ಭಯೋತ್ಪಾದನೆ, ನಕ್ಸಲರನ್ನು ಮಟ್ಟಹಾಕುವ ಕಾರ್ಯ ಬಿಜೆಪಿ ಸರ್ಕಾರ ಮಾಡಿದೆ ಎಂದರು.

ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಸೇರಿಕೊಂಡು ಮುಸ್ಲಿಮರನ್ನು ಎತ್ತಿಕಟ್ಟಿ ಡಿಜೆ ಹಳ್ಳಿಯಲ್ಲಿ ಗಲಭೆ ಸೃಷ್ಟಿಸಿದ್ದಲ್ಲದೇ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚುವ ಕಾರ್ಯ ಮಾಡಲಾಗಿದೆ. ಶಿವಮೊಗ್ಗ, ಹುಬ್ಬಳ್ಳಿಗಳಲ್ಲಿ ನಡೆದ ಗಲಭೆಗಳ ಹಿಂದೆ ಕಾಂಗ್ರೆಸ್ ಇದೆ ಎಂದು ನೇರ ಆರೋಪಿಸಿದರು.

ಕಾಂಗ್ರೆಸ್ ನ ಪರಿವಾರ ವ್ಯಾಮೋಹದಿಂದಾಗಿ ಇಂದು ಪಕ್ಷ ವರಿಷ್ಠೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೆಲೆ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಆಡಳಿತ ನೀಡುವುದೆಂತು?
ಸಂಘಟನಾತ್ಮಕ ಶಕ್ತಿಯಿಂದ ಅಧಿಕಾರ ಪಡೆದ ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸೀಟುಗಳನ್ನು ಬಾಚಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೆಪಿಸಿಸಿಯನ್ನೇ ನಿಭಾಯಿಸಲಾಗದ ಕಾಂಗ್ರೆಸ್ ನಿಂದ ಆಡಳಿತ ನೀಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಚಿಂತನೆಯಿಂದ ವಿಚಲಿತರಾಗಿಲ್ಲ
ಅಭ್ಯಾಗತರಾಗಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ, ಲಭಿಸಿದ ಅವಕಾಶವನ್ನು ವಿಕಾಸ ಮತ್ತು ವಿಚಾರದ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿ ಒಟ್ಟಾಗಿ ಪ್ರಯತ್ನಿಸಬೇಕು.

ಬಿಜೆಪಿ ಸಂಘಟನೆಗೆ ಹೆಸರಾಗಿದ್ದು, ಕೇವಲ ಅಧಿಕಾರಕ್ಕಾಗಿ ಮಾತ್ರವಲ್ಲ, ದೇಶದ ಭವಿಷ್ಯತ್ತಿಗಾಗಿ ಆಡಳಿತ ನಡೆಸುವ ಆಶಯ ಹೊಂದಿರುವ ಪಕ್ಷ. ಪಕ್ಷಕ್ಕೆ ಅಧಿಕಾರ ಲಭಿಸಿದರೂ ಅದರ ಚಿಂತನೆಯಿಂದ ವಿಚಲಿತವಾಗಿಲ್ಲ ಎಂದರು.

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್ ಇದ್ದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ವಂದಿಸಿದರು. ರಾಜ್ಯ ಪದಾಧಿಕಾರಿ ಗಿರೀಶ್ ಕುಮಾರ್ ಶಿವಮೊಗ್ಗ ನಿರೂಪಿಸಿದರು.

ರಾಜ್ಯದ 77 ಮಂದಿ ಪದಾಧಿಕಾರಿಗಳು ಭಾಗವಹಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!