ಸುದ್ದಿಕಿರಣ ವರದಿ
ಶನಿವಾರ, ಜೂನ್ 11
ಆಯುರ್ವೇದ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರೆಡ್ ಕ್ರಾಸ್ ಘಟಕ ಮತ್ತು ರಾಷ್ಟ್ರೀಯ ಯೋಜನಾ ಘಟಕಗಳ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ. ವೀಣಾ ಕುಮಾರಿ ರಕ್ತವು ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲಾಸ್ಮಾ ಮತ್ತು ಇತರ ಖನಿಜಗಳಿಂದ ಮಾಡಲ್ಪಟ್ಟಿದೆ. ಭಾರತದಲ್ಲಿ 5 ಕೋಟಿ ಯೂನಿಟ್ ನಷ್ಟು ರಕ್ತದ ಆವಶ್ಯಕತೆ ಇದೆ. ಆದರೆ, ಪ್ರಸ್ತುತ ಕೇವಲ 2.5 ಕೋಟಿ ಯೂನಿಟ್ ನಷ್ಟು ರಕ್ತ ಪೂರೈಕೆಯಾಗುತ್ತಿದೆ.
ರಕ್ತದ ಕೊರತೆಯನ್ನು ಕೇವಲ ರಕ್ತದಾನದಿಂದ ಮಾತ್ರ ಪೂರೈಸಲು ಸಾಧ್ಯ. ರಕ್ತಕ್ಕೆ ಪರ್ಯಾಯ ವಸ್ತು ಇಲ್ಲ ಎಂದರು.
ಪ್ರತೀ ಎರಡು ಸೆಕೆಂಡಿಗೆ ರಸ್ತೆ ಅಪಘಾತ ಅಥವಾ ಪ್ರಸವಾವಸ್ಥೆಯಲ್ಲಿರುವ ಮಹಿಳೆಯರಿಗೆ ರಕ್ತದ ಆವಶ್ಯಕತೆ ಇರುತ್ತದೆ ಎಂದು ರಕ್ತದ ಮಹತ್ವದ ಬಗ್ಗೆ ಅರಿವು ಮೂಡಿಸಿ, ರಕ್ತದಾನ ಮಾಡಲು ಪ್ರೇರೇಪಿಸಿದರು.
ಶಲ್ಯ ತಂತ್ರ ವಿಭಾಗ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ರಜನೀಶ್ ವಿ. ಗಿರಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಕಮ್ಯುನಿಟಿ ಸರ್ವಿಸ್ ಯೋಜನಾಧಿಕಾರಿ ಡಾ. ಎಸ್. ಆರ್. ಮೊಹರೆ ಸ್ವಾಗತಿಸಿದರು. ರೆಡ್ ಕ್ರಾಸ್ ಘಟಕ ಅಧ್ಯಕ್ಷ ಡಾ. ಮೊಹಮ್ಮದ್ ಫೈಸಲ್ ವಂದಿಸಿದರು. ಚೇತನ ನಿರೂಪಿಸಿದರು. ಸುದೇಶ ಪ್ರಾರ್ಥಿಸಿದರು.
ವಿದ್ಯಾರ್ಥಿಗಳು ಮತ್ತು ಸಿಬಂದಿ ಸೇರಿದಂತೆ 150ಕ್ಕೂ ಅಧಿಕ ಮಂದಿ ರಕ್ತದಾನದಲ್ಲಿ ಭಾಗವಹಿಸಿದರು.
ಸುಮಾರು 110 ಯುನಿಟ್ ರಕ್ತ ಸಂಗ್ರಹಿಸಲಾಯಿತು