Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಭ್ರೂಣಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ

ಭ್ರೂಣಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
******************************

(ಸುದ್ದಿಕಿರಣ ವರದಿ)

ಉಡುಪಿ, ಜು. 8: ಗರ್ಭಧಾರಣೆ ಬಳಿಕ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನಿನಡಿ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಸೂತಿ ತಜ್ಞ ಹಾಗೂ ಜಿಲ್ಲಾ ಪಿಸಿ ಮತ್ತು ಪಿಎನ್.ಡಿಟಿ ಸಲಹಾ ಸಮಿತಿ ಅಧ್ಯಕ್ಷ ಡಾ. ಪ್ರತಾಪ್ ಕುಮಾರ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಸರ್ಕಾರ ಕಾನೂನು ಜಾರಿಗೆ ತಂದಿದೆ. ಭ್ರೂಣ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಅದನ್ನು ಉಲ್ಲಂಘಿಸುವವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಉಡುಪಿ ಜಿಲ್ಲೆಯಲ್ಲಿ ಅಸಮತೋಲನ
ಪ್ರಸ್ತುತ ಜಿಲ್ಲೆಯಲ್ಲಿ 1000 ಮಂದಿ ಪುರುಷರಿಗೆ, 957 ಜನ ಹೆಣ್ಣು ಮಕ್ಕಳಿದ್ದಾರೆ ಎಂದ ಅವರು, ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅಸಮತೋಲನ ಉಂಟಾಗದಂತೆ ನೋಡಿಕೊಳ್ಳುವುದು ಈ ಸಮಿತಿಯ ಜವಾಬ್ದಾರಿ.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳು ಜಿಲ್ಲಾ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಸರ್ಕಾರದ ನಿಯಮಾನುಸಾರ ರಿಜಿಸ್ಟರ್ ಮತ್ತು ಮತ್ತಿತರ ದಾಖಲೆಗಳಲ್ಲಿ ನೋಂದಾಯಿಸಬೇಕು ಎಂದರು.

ಭ್ರೂಣಲಿಂಗ ಪತ್ತೆಯಿಂದ ಸಮಾಜದಲ್ಲಿ ಆಗುವ ತೊಂದರೆಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡುವುದರೊಂದಿಗೆ ಗಂಡು ಮತ್ತು ಹೆಣ್ಣಿನ ಅನುಪಾತ ಸಮಾನವಾಗಿರುವಂತೆ ನೋಡಿಕೊಳ್ಳಬೇಕು ಎಂದರು.

ವೈದ್ಯರ ಶಿಫಾರಸು ಪತ್ರ ಅಗತ್ಯ
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮ ರಾವ್ ಕೆ., 18 ವರ್ಷದೊಳಗಿನ ಮಹಿಳೆಯರು ಸ್ಕ್ಯಾನಿಂಗ್ ಮಾಡಿಸಲು ಸ್ಕ್ಯಾನಿಂಗ್ ಕೇಂದ್ರಗಳಿಗೆ ಬಂದಾಗ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವಂತೆ ತಿಳಿಸಬೇಕು. ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಗಳು ವೈದ್ಯರ ಶಿಫಾರಸು ಪತ್ರದ ಆಧಾರದಲ್ಲಿ ಸ್ಕ್ಯಾನಿಂಗ್ ಕಾರ್ಯ ಕೈಗೊಳ್ಳಬೇಕು. ಸ್ಕ್ಯಾನಿಂಗ್ ಶುಲ್ಕದ ವಿವರವನ್ನು ಸ್ಕ್ಯಾನಿಂಗ್ ಕೇಂದ್ರದ ಮುಂಭಾಗ ಪ್ರದರ್ಶಿಸಬೇಕು ಎಂದರು.

ಸ್ಕ್ಯಾನಿಂಗ್ ಕೇಂದ್ರದ ಮಾಲೀಕರು ನಿಗದಿತ ಕಾಲಾವಧಿಯೊಳಗೆ ನವೀಕರಣ ಮಾಡಿಸಬೇಕು ಎಂದ ಅವರು, ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಬಳಕೆ ಮಾಡದೇ ಇರುವ ಹಳೆಯ ಸ್ಕ್ಯಾನಿಂಗ್ ಯಂತ್ರಗಳು ದುರ್ಬಳಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವುಗಳನ್ನು ಸರ್ಕಾರದ ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ, ಮಕ್ಕಳ ತಜ್ಞ ಕಿರಣ್ ಹೆಬ್ಬಾರ್, ಡಾ. ಆಮ್ನಾ ಹೆಗ್ಡೆ, ಡಾ. ದೀಕ್ಷಿತ್, ಡಾ. ಅನಿತಾ ಪ್ರಭು, ಸಮಾಜ ಸೇವಕರಾದ ಡಾ. ಗಣೇಶ್ ಪೈ ಮತ್ತು ಸರಿತಾ ಸಂತೋಷ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!