Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿ: ಕರಂಬಳ್ಳಿಯಲ್ಲಿ ಸಿಎಂ ಗೋಪೂಜೆ

ಗೋಹತ್ಯೆ ನಿಷೇಧ ಕಾಯ್ದೆ ಜಾರಿ: ಕರಂಬಳ್ಳಿಯಲ್ಲಿ ಸಿಎಂ ಗೋಪೂಜೆ

ಉಡುಪಿ: ರಾಜ್ಯಪಾಲರ ಅಂಗೀಕಾರದೊಂದಿಗೆ ರಾಜ್ಯದಲ್ಲಿ ಸೋಮವಾರದಿಂದ ಜಾರಿಗೆ ಬಂದಿರುವ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಲ್ಲಿನ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗೋಪೂಜೆ ನಡೆಸಿದರು.

ದೇವಸ್ಥಾನದ ಧ್ವಜಸ್ಥಂಭದ ಎದುರು ಶ್ರೀದೇವಳದ ಆಡಳಿತ ಮೊಕ್ತೇಸರರೂ ಆಗಿರುವ ಶಾಸಕ ರಘುಪತಿ ಭಟ್ ಅವರ ಮನೆಯ ದೇಸಿ ಗೋತಳಿ ಲಕ್ಷ್ಮೀ ಮತ್ತು ಸುರಭಿ ಎಂಬ ದನ- ಕರುವಿಗೆ ಹಣ್ಣು, ಹಿಂಡಿ, ಹುಲ್ಲು ನೀಡಿದರು. ಗೋಗ್ರಾಸದ ಬಳಿಕ ಆರತಿ ಬೆಳಗಿ ಗೋಪೂಜೆ ನಡೆಸಿದರು.

ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶಾಸಕ ಕೆ. ರಘುಪತಿ ಭಟ್, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಉಡುಪಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ ಮೊದಲಾದವರಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯುಡಿಯೂರಪ್ಪ, ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದ ತಕ್ಷಣ ಕೃಷ್ಣನೂರಿಗೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ. ಗೋಹತ್ಯೆ ನಿಷೇಧ ಜಾರಿ ಮೂಲಕ ಮಹಾತ್ಮ ಗಾಂಧೀಜಿಯವರ ಕನಸು ನನಸಾಗುತ್ತಿದೆ. ಸ್ವಾತಂತ್ರ್ಯ ಲಭಿಸಿದ ಕೂಡಲೇ ಗೋಹತ್ಯೆ ನಿಷೇಧವಾಗಬೇಕೆಂದು ಗಾಂಧೀಜಿ ಬಯಸಿದ್ದರು. ಕರ್ನಾಟಕದಲ್ಲಿ ಇಂದಿನಿಂದ ಗೋಹತ್ಯೆ ನಿಷೇಧ ಜಾರಿಯಾಗುತ್ತಿದ್ದು, ಇದೊಂದು ಐತಿಹಾಸಿಕ ನಿರ್ಣಯವಾಗಿದೆ. ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗೋಹತ್ಯೆಗೆ ಅವಕಾಶ ಇಲ್ಲ.

ರಾಜ್ಯದ ಜನರ ಅಪೇಕ್ಷೆಯಂತೆ ಗೋಹತ್ಯೆ ನಿಷೇಧ ಜಾರಿ ಮಾಡಿದ್ದೇವೆ. ಈ ಕಾನೂನಿಗೆ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಬೆಳಂದೂರು ಡಿನೋಟಿಫೈ ಪ್ರಕರಣದಲ್ಲಿ ಬಿಗ್ ರಿಲೀಫ್ ವಿಚಾರ ಯಾವುದೇ ಪ್ರತಿಕ್ರಿಯೆ ನೀಡದೆ ನಸುನಕ್ಕು ತೆರಳಿದರು.

ಸಂತೃಪ್ತಿಯ ದಿನ
ಸಾನ್ನಿಧ್ಯ ವಹಿಸಿದ್ದ ಗೋಪ್ರೇಮಿ- ರಕ್ಷಕ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡ ಈ ದಿನ ಅತ್ಯಂತ ಸುದಿನ. ತಮ್ಮ ಪಾಲಿಗಂತೂ ಅತ್ಯಂತ ಸಂತೃಪ್ತಿಯ ದಿನ ಎಂದು ಬಣ್ಣಿಸಿದರು.
ಗೋಪಾಲಕ ಶ್ರೀಕೃಷ್ಣನ ಸನ್ನಿಧಿಯಿಂದಲೇ ರಾಜ್ಯಕ್ಕೆ ಈ ಕುರಿತು ಸ್ಪಷ್ಟ ಸಂದೇಶ ಹೋಗುತ್ತಿರುವುದು ಖುಷಿಯ ಸಂಗತಿ ಎಂದರು.

ಜಿ. ವಾಸುದೇವ ಭಟ್ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!