Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಆಧುನಿಕ ಶೈಲಿಯಲ್ಲಿ ಸರ್ಕಾರಿ ಗೋಶಾಲೆ ನಿರ್ಮಿಸಿ

ಆಧುನಿಕ ಶೈಲಿಯಲ್ಲಿ ಸರ್ಕಾರಿ ಗೋಶಾಲೆ ನಿರ್ಮಿಸಿ

ಸುದ್ದಿಕಿರಣ ವರದಿ
ಶನಿವಾರ, ಜೂನ್ 18

ಆಧುನಿಕ ಶೈಲಿಯಲ್ಲಿ ಸರ್ಕಾರಿ ಗೋಶಾಲೆ ನಿರ್ಮಿಸಿ
ಉಡುಪಿ: ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆಯನ್ನು ಇತರರ ಸಹಭಾಗಿತ್ವದಲ್ಲಿ ರಾಜ್ಯಕ್ಕೇ ಮಾದರಿಯಾಗುವ ರೀತಿಯಲ್ಲಿ ಗೋವುಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯ ಒದಗಿಸುವುದರೊಂದಿಗೆ ಆಧುನಿಕ ಶೈಲಿಯಲ್ಲಿ ಶೀಘ್ರದಲ್ಲಿ ನಿರ್ಮಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸಕ್ತ ಆಯ ವ್ಯಯದಲ್ಲಿ ಗೋಶಾಲೆ ಪ್ರಾರಂಭಿಸಲು ಘೋಷಿಸಿ, ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಅದಕ್ಕೆ ಪೂರಕವಾಗಿ ಜಿಲ್ಲಾಡಳಿತ ಅಗತ್ಯವಿರುವ ಭೂಮಿಯನ್ನೂ ಒದಗಿಸಿದೆ.

ಗೋಶಾಲೆ ಆಧುನಿಕ ಶೈಲಿಯಲ್ಲಿ, ವೈಜ್ಞಾನಿಕವಾಗಿ ಅಗತ್ಯ ಮೂಲಭೂತ ಸೌಕರ್ಯ ಲಭ್ಯವಿರುವಂತೆ ನೀಲಿನಕ್ಷೆ ತಯಾರಿಸಿ, ಗೋಶಾಲೆ ನಿರ್ಮಿಸಿ, ಶೀಘ್ರದಲ್ಲಿಯೇ ಪ್ರಾರಂಭಿಸಬೇಕೆಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅರಿವು ಮೂಡಿಸಿ
ಹೆಬ್ರಿ ತಾಲೂಕಿನ ಕೆರೆಬೆಟ್ಟು ಗ್ರಾಮದ ಸರ್ವೇ ನಂ.79/2ರಲ್ಲಿ 13.24 ಎಕ್ರೆ ಜಮೀನು ಹಾಗೂ ಕುಂದಾಪುರದ ಗೋಳಿಹೊಳೆ ಗ್ರಾಮದ ಸರ್ವೇ ನಂ. 279ರಲ್ಲಿ 9.85 ಎಕ್ರೆ ಜಮೀನನ್ನು ಸರ್ಕಾರಿ ಗೋಶಾಲೆ ನಿರ್ಮಿಸಲು ಕಾಯ್ದಿರಿಸಲಾಗಿದೆ. ಗೋಶಾಲೆಗೆ ತಡೆ ಬೇಲಿ, ಕೆರೆ ನಿರ್ಮಾಣ ಕಾಮಗಾರಿಯನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲು ತಿಳಿಸಿದರು.

ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರೊಂದಿಗೆ ಅದರ ಸಮರ್ಪಕ ಅನುಷ್ಠಾನಗೊಳಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಈಗಾಗಲೇ 12 ಗೋಶಾಲೆಯನ್ನು ಖಾಸಗಿ ಸಂಸ್ಥೆ ನಡೆಸುತ್ತಿದ್ದು, ಅಲ್ಲಿ 2,660ಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ ಎಂದರು.

ಪ್ರಾಣಿ ರಕ್ಷಣಾ ಶೆಲ್ಟರ್
ಜಾನುವಾರುಗಳನ್ನು ರಕ್ಷಣೆ ಮಾಡುವ ರೀತಿಯಲ್ಲಿಯೇ ಇತರ ಪ್ರಾಣಿಗಳನ್ನು ರಕ್ಷಿಸಲು ಗೋಶಾಲೆ ಮಾದರಿಯಲ್ಲಿಯೇ ಪ್ರಾಣಿ ರಕ್ಷಣಾ ಶೆಲ್ಟರ್ ಗಳನ್ನು ಪ್ರಾರಂಭಿಸಲು ಪ್ರಾಣಿಪ್ರಿಯರು ಹಾಗೂ ಅಧಿಕಾರಿಗಳು ಚಿಂತಿಸಬೇಕು ಎಂದರು.

ಸರ್ಕಾರದಿಂದ ಜಿಲ್ಲಾ ಪ್ರಾಣಿದಯಾ ಸಂಘಕ್ಕೆ ಪ್ರಾಣಿಗಳ ಕಲ್ಯಾಣಕ್ಕೆ ಬಿಡುಗಡೆಯಾಗಿರುವ ಅನುದಾನ ಬಳಕೆ ಮಾಡಿಕೊಳ್ಳುವುದರೊಂದಿಗೆ ಅವುಗಳ ರಕ್ಷಣೆಗಾಗಿ ಜಾರಿಗೆ ತಂದಿರುವ ಕಾಯ್ದೆ ಮತ್ತು ನಿಯಮಗಳ ಬಗ್ಗೆ ಜಾಗೃತಿ ಅಭಿಯಾನವನ್ನು ಜಿಲ್ಲೆಯಾದ್ಯಂತ ಪರಿಣಾಕಾರಿಯಾಗಿ ಅನುಷ್ಠಾನಗೊಳಿಸುವಂತೆ ತಿಳಿಸಿದರು.

ನೀರಿನ ಸೌಲಭ್ಯ
ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಎಚ್. ಮಾತನಾಡಿ, ಹೆಬ್ರಿಯ ಕೆರೆಬೆಟ್ಟು ಗೋಶಾಲೆಗೆ ನೀರಿನ ಸೌಲಭ್ಯ ಕಲ್ಪಿಸಲು ಕೊಳವೆ ಬಾವಿ ಕೊರೆಸಲಾಗಿದ್ದರೂ ನೀರು ದೊರೆತಿಲ್ಲ. ಅಲ್ಲಿಗೆ ಅಗತ್ಯವಿರುವ ನೀರನ್ನು ಜಲ ಜೀವನ್ ಮಿಷನ್ ಯೋಜನೆಯಡಿ ಕಲ್ಪಿಸಲಾಗುವುದು ಎಂದರು.

ಗೋಶಾಲೆಗಳ ನಿರ್ವಹಣೆಗೆ ಸರ್ಕಾರವನ್ನು ಎದುರುನೋಡದೇ ಅಲ್ಲಿಯೇ ಬರುವ ಉತ್ಪನ್ನಗಳಿಂದ ನಿರ್ವಹಣೆ ಮಾಡುವ ಬಗ್ಗೆ ಯೋಜನೆ ರೂಪಿಸಿ, ಗೋಶಾಲೆಗಳು ಸ್ವಾವಲಂಬನೆಗೊಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ. ಶಂಕರ್ ಶೆಟ್ಟಿ, ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯಸ್ಥರು ಜಿಲ್ಲೆಯ ಪ್ರಾಣಿದಯಾ ಸಂಘದ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!