Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಬ್ಯಾರಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ: ಸಿಎಂ ಬಳಿ ನಿಯೋಗ

ಬ್ಯಾರಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ: ಸಿಎಂ ಬಳಿ ನಿಯೋಗ

ಉಡುಪಿ: ಬ್ಯಾರಿ ಸಮುದಾಯದ ಏಳಿಗೆ ಉದ್ದೇಶದಿಂದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕಾಗಿದೆ. ಸಮುದಾಯದ ಮುಖಂಡರ ನಿಯೋಗವೊಂದು ಶೀಘ್ರ ಮುಖ್ಯಮಂತ್ರಿ ಬಳಿ ತೆರಳಿ ಈ ಬೇಡಿಕೆ ಸಲ್ಲಿಸಿ, ಪ್ರಾಧಿಕಾರ ಘೋಷಿಸುವಂತೆ ಆಗ್ರಹಿಸಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದರು.

ಬುಧವಾರ ಉಡುಪಿ ಜಿಲ್ಲಾ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ಉದ್ಘಾಟಿಸಿ ಮಾತನಾಡಿದರು.
ಹೋರಾಟದ ಫಲವಾಗಿ ಬ್ಯಾರಿ ಸಾಹಿತ್ಯ ಅಕಾಡೆಮಿ ದೊರೆತಿದೆ. ಬ್ಯಾರಿ ಭಾಷೆಯ ಸಂಘಟನೆ ಹೆಸರಿನಲ್ಲಿ ಬ್ಯಾರಿಗಳೆಲ್ಲ ಒಂದಾಗಬೇಕು. ಬ್ಯಾರಿ ಸಂಘಟನೆಗಳು ಧರ್ಮದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಲು ಮೌಲ್ವಿಗಳು ಹಾಗೂ ಧರ್ಮಗುರುಗಳ ಮಾರ್ಗದರ್ಶನ ಅಗತ್ಯ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪರಿಷತ್ ಅಧ್ಯಕ್ಷ ಎಸ್. ಪಿ. ಉಮರ್ ಫಾರೂಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಬ್ಯಾರಿ ಸಾಹಿತ್ಯ ಮತ್ತು ಸಂಸ್ಕೃತಿ ಸಂಘ ಅಧ್ಯಕ್ಷ ಬಶೀರ್ ಬೈಕಂಪಾಡಿ, ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯ ನಝೀರ್ ಪೊಲ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ, ಸಾಹಿತಿ ಟಿ. ಎಸ್. ಹುಸೈನ್ ಕಾಪು, ಕರ್ನಾಟಕ ಹಜ್ ಸಮಿತಿ ಮಾಜಿ ಸದಸ್ಯ ಸಲೀಂ ಅಂಬಾಗಿಲು, ಕರ್ನಾಟಕ ಮುಸ್ಲಿಮ್ ಜಮಾಅತ್ ಜಿಲ್ಲಾಧ್ಯಕ್ಷ ರಫೀಕ್ ಬಿ.ಎಸ್.ಎಫ್, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುಹಮ್ಮದ್ ಶರೀಫ್, ಬೈಂದೂರು ತಾಲೂಕು ಜಮಾಲತೆ ಇಯ್ಯತುಲ್ ಫಲಾಹ್ ಅಧ್ಯಕ್ಷ ಮನ್ಸೂರ್ ಮರವಂತೆ ಆಗಮಿಸಿದ್ದರು.

ಮುಹಮ್ಮದ್ ಶರೀಫ್ ನೀರ್ಮುಂಜೆ ಧ್ಯೇಯಗೀತೆ ಹಾಡಿದರು. ಪರಿಷತ್ ಉಪಾಧ್ಯಕ್ಷ ಅಬ್ದುಲ್ ರೆಹ್ಮಾನ್ ಮಣಿಪಾಲ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಬ್ಯಾರಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಆತ್ರಾಡಿ ವಂದಿಸಿದರು. ಕೋಶಾಧಿಕಾರಿ ಖಾಸಿಂ ಬಾರಕೂರು ಇದ್ದರು. ಹುಸೇನ್ ಕಾಟಿಪಳ್ಳ ನಿರೂಪಿಸಿದರು.

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ದಫ್ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!