Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಬ್ಯಾರಿ ಭಾಷೆ ಉಳಿವಿಗೆ ಲಿಪಿ ಅಗತ್ಯ

ಬ್ಯಾರಿ ಭಾಷೆ ಉಳಿವಿಗೆ ಲಿಪಿ ಅಗತ್ಯ

ಉಡುಪಿ: ಸುಮಾರು 1,400 ವರ್ಷಗಳಷ್ಟು ದೀರ್ಘ ಇತಿಹಾಸ ಹೊಂದಿರುವ ಬ್ಯಾರಿ ಭಾಷೆಗೆ ಇದುವರೆಗೂ ಸ್ವಂತ ಲಿಪಿ ಇದ್ದಿರಲಿಲ್ಲ. ಬರವಣಿಗೆಗಾಗಿ ಕನ್ನಡವನ್ನೇ ಅವಲಂಬಿಸಿಕೊಂಡು ಬರಲಾಗುತ್ತಿದೆ. ಭಾಷೆಯ ಶ್ರೀಮಂತಿಕೆ ಉಳಿಸಲು ಹಾಗೂ ಮುಂದಿನ ಜನಾಂಗ ಬ್ಯಾರಿ ಭಾಷೆಯನ್ನು ಕಲಿಯಲು ಅನುಕೂಲವಾಗುವಂತೆ ಲಿಪಿಯನ್ನು ಹುಟ್ಟುಹಾಕಲಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಬುಧವಾರ ಇಲ್ಲಿನ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆದ ಪೆರ್ನಾಲ್ ಸಂದೋಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಫ್ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ಮಾಪಕ ಯಾಕುಬ್ ಖಾದರ್ ಗುಲ್ವಾಡಿ, ಎಲ್ಲ ಭಾಷೆ ಮತ್ತು ಸಮುದಾಯಗಳಿಗಿರುವಂತೆ ಬ್ಯಾರಿ ಭಾಷೆಗೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ನಿಟ್ಟಿನಲ್ಲಿ ಸಮುದಾಯದ ಪ್ರಮುಖರು ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾಗಿದೆ. ಬ್ಯಾರಿ ಭಾಷೆಯಲ್ಲಿ ತಯಾರಿಸಿದ ಬ್ಯಾರಿ ಸಿನೆಮಾವನ್ನು ಬ್ಯಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಮಂಗಳೂರು, ಉಡುಪಿ, ಚಿಕ್ಕಮಗಳೂರು ಮತ್ತು ಮೈಸೂರಿನಲ್ಲಿ ಪ್ರದರ್ಶಿಸಲು ಅಕಾಡೆಮಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬರಹಗಾರ ಹಾಗೂ ಉಪನ್ಯಾಸಕ ಅಬೂಬಕ್ಕರ್ ಉಚ್ಚಿಲ ಪೆರ್ನಾಲ್ ಸೌಹಾರ್ದ ಸಂದೇಶ ನೀಡಿ, ಬ್ಯಾರಿಗಳ ಮೂಲ ವೃತ್ತಿ ವ್ಯಾಪಾರ. ವ್ಯಾಪಾರ ವ್ಯವಹಾರ ನಡೆಸಲು ಸಮಾಜದಲ್ಲಿ ಸೌಹಾರ್ದತೆ ಅಗತ್ಯ ಎಂದರು.
ಮುಖ್ಯ ಅತಿಥಿಗಳಾಗಿ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪಿ. ಉಮರ್ ಫಾರೂಕ್, ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಬ್ಯಾರಿ, ಕರ್ನಾಟಕ ಹಜ್ ಸಮಿತಿ ಮಾಜಿ ಸದಸ್ಯ ಸಲೀಂ ಅಂಬಾಗಿಲು, ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ಆಗಮಿಸಿದ್ದರು.

ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮ ಸ್ವಾಗತಿಸಿದರು. ಸದಸ್ಯ ಸಂಚಾಲಕ ನಝೀರ್ ಪೊಲ್ಯ ವಂದಿಸಿದರು. ಹುಸೇನ್ ಕಾಟಿಪಳ್ಳ ನಿರೂಪಿಸಿದರು.

ಬಳಿಕ ಹುಸೇನ್ ಕಾಟಿಪಳ್ಳ ತಂಡದಿಂದ ಬ್ಯಾರಿ ಕವ್ವಾಲಿ ಮತ್ತು ಸಂಗೀತ ಹಾಗೂ ಕಾಪು ಪೊಲಿಪು ಖುವ್ವತುಲ್ ಇಸ್ಲಾಮ್ ದಫ್ ಸಮಿತಿಯಿಂದ ದಫ್ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!