ಸುದ್ದಿಕಿರಣ ವರದಿ
ಗುರುವಾರ, ಜುಲೈ 28
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರಧನ ಹಸ್ತಾಂತರ
ಸುಳ್ಯ: ಹಂತಕರಿಂದ ಕೊಲೆಗೀಡಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ. ಪರಿಹಾರದ ಚೆಕ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಖುದ್ದು ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದರು.
ಕೊಲೆ ಪ್ರಕರಣ ಬೇಧಿಸುವ ವರೆಗೆ ಅಕ್ಷರಶಃ ದಣಿವಿಲ್ಲದೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
50 ಲಕ್ಷ ಪರಿಹಾರ
ಗುರುವಾರ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರವೀಣ್ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದು, ಚಿಕ್ಕ ಅಂಗಡಿಯೇ ಆದಾಯದ ಮೂಲವಾಗಿತ್ತು.
ಸರ್ಕಾರದ ವತಿಯಿಂದ ಪರಿಹಾರ ನಿಧಿಯಿಂದ 25 ಲಕ್ಷ ಪರಿಹಾರ ಹಾಗೂ ಭಾರತೀಯ ಜನತಾ ಪಕ್ಷದ ವತಿಯಿಂದ 25 ಲಕ್ಷ ರೂ. ಪರಿಹಾರವಾಗಿ ನೀಡಲಾಗಿದೆ. ಪ್ರವೀಣ್ ಕುಟುಂಬದವರಿಗೆ ಪಕ್ಷ ಮತ್ತು ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಅವರ ಜೀವನದ ಮುಂದಿನ ಭವಿಷ್ಯಕ್ಕೆ ಸಹಕಾರ ನೀಡಲಾಗುವುದು.
ಕೊಲೆಗಾರರಿಗೆ ಶಿಕ್ಷೆಯಾದಾಗ ಮಾತ್ರ ಪ್ರವೀಣ್ ಆತ್ಮಕ್ಕೆ ಶಾಂತಿ ಸಿಗಲಿದೆ. ಪ್ರವೀಣ್ ಕುಟುಂಬದವರೂ ಇದೇ ಮಾತು ಹೇಳಿದ್ದಾರೆ. ಇನ್ನೆಂದೂ ಈ ರೀತಿ ಯಾರಿಗೂ ಆಗಬಾರದು. ಅದರ ಹಿಂದಿರುವ ಸಂಘಟನೆಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಕಟುಕರಿಗೆ ಶಿಕ್ಷೆ ಆಗುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಲಾಗುವುದು ಎಂದರು.
ಯೋಜನಾಬದ್ಧ ಭಯೋತ್ಪಾದಕ ಕೃತ್ಯ
ಇದೊಂದು ಪೂರ್ವಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಮೊನ್ನೆ ನಡೆದ ಪ್ರವೀಣ್ ಹತ್ಯೆ ಪ್ರಕರಣ ಖಂಡನೀಯ. ಕಳೆದ ಹತ್ತು ವರ್ಷದಲ್ಲಿ ಈ ಭಾಗದಲ್ಲಿ ಇಂಥ ಚಟುವಟಿಕೆಗಳು ನಡೆಯುತ್ತಿದೆ.
ಸಮಾಜಘಾತುಕ ಶಕ್ತಿಗಳು ಬೆಂಬಲ ನೀಡುತ್ತಿರುವುದರಿಂದ ನಿರ್ಭೀತಿಯಿಂದ ಈ ಕೃತ್ಯ ನಡೆಸಲಾಗಿದೆ. ಅದನ್ನು ನಾವು ಕೊಲೆ ಪ್ರಕರಣವಾಗಿ ನೋಡುತ್ತಿಲ್ಲ. ದೇಶವನ್ನು ಛಿದ್ರ ಮಾಡುವ ಯೋಜನಾಬದ್ಧ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿದೆ. ತನಿಖೆ ಪ್ರಾರಂಭವಾಗಿದೆ. ಆರೋಪಿಗಳು ರಾಜ್ಯದ ಗಡಿ ದಾಟಿರಬಹುದು. ಎಲ್ಲ ಆಯಾಮದಲ್ಲಿ ತನಿಖೆ ಮಾಡಲಾಗುತ್ತಿದೆ. ಕೆಲವರನ್ನು ವಶಕ್ಕೆ ತೆಗೆದುಕೊಂಡು, ಅವರಿಂದ ಪಡೆದ ಮಾಹಿತಿಯಿಂದ ತನಿಖೆ ಮುಂದುವರಿಯಲಿದೆ. ಅತ್ಯಂತ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂಬ ವಿಶ್ವಾಸವಿದೆ.
ಎಡಿಜಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಳೆದ ಹಲವಾರು ವರ್ಷದಿಂದ ದುಷ್ಕೃತ್ಯಗಳಲ್ಲಿ ತೊಡಗಿಕೊಂಡಿರುವ ಸಮಾಜಘಾತುಕ ಶಕ್ತಿಗಳ ಜಾಡು ಹಿಡಿದು, ಆ ದಿಸೆಯಲ್ಲಿಯೂ ತನಿಖೆ ಕೈಗೊಂಡು ಹಿಂದಿರುವ ಸಂಘಟನೆಗಳನ್ನು ಗಮನಿಸುತ್ತಿದ್ದೇವೆ ಎಂದರು.
ಕರ್ನಾಟಕಕ್ಕೆ ಎನ್.ಐ.ಎ ಅಗತ್ಯವಿದೆ
ಕರ್ನಾಟಕ ರಾಜ್ಯಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.)ವನ್ನು ಒದಗಿಸಲು ಕೋರಲಾಗಿದೆ. ವಿಶೇಷವಾಗಿ ಮಂಗಳೂರು ಭಾಗಕ್ಕೆ ಎನ್.ಐ.ಎ ಆವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿದೆ.
ಪ್ರಾಥಮಿಕ ತನಿಖಾ ವರದಿ ಆಧಾರದಲ್ಲಿ ಹೆಚ್ಚುವರಿ ತನಿಖೆಯ ಅಗತ್ಯವಿದ್ದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗುವುದು. ಈ ಘಟನೆಗೆ ಬೆಂಬಲ ನೀಡಿರುವ ಬಗ್ಗೆಯೂ ತನಿಖೆ ನಡೆಸಿ, ಆ ಕುಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಜಾಲ ಭೇದಿಸಲಾಗುವುದು. ಪಿಎಫ್.ಐ ಬ್ಯಾನ್ ಮಾಡಲು ಕ್ರಮಗಳು ಪ್ರಾರಂಭವಾಗಿದೆ.
ಈ ರೀತಿಯ ದುಷ್ಕೃತ್ಯಗಳು ಭಾರತದ ವಿವಿಧ ರಾಜ್ಯಗಳಲ್ಲಿ ನಡೆದಿದ್ದು, ದೇಶದ ಮಟ್ಟದಲ್ಲಿ ಸರಿಯಾದ ಕ್ರಮವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಮಸೂದ್ ಹತ್ಯೆ ಹಾಗೂ ಪ್ರವೀಣ್ ಹತ್ಯೆಗೆ ಸಂಬಂಧವಿದೆಯೇ ಎಂಬುದು ತನಿಖೆಯಿಂದ ತಿಳಿಯಲಿದೆ. ಪೊಲೀಸ್ ಅಧಿಕಾರಿಗಳ ಕರ್ತವ್ಯ ವೈಫಲ್ಯವಾಗಿದ್ದರೆ ಅದನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದು ಸಿಎಂ ಹೇಳಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್, ನಾಯಕರಾದ ಸಿ. ಟಿ ರವಿ, ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಜನಪ್ರತಿನಿಧಿಗಳು ಮತ್ತು ಇತರ ಅಧಿಕಾರಿಗಳು ಇದ್ದರು.