Thursday, July 7, 2022
Home ಸಮಾಚಾರ ಸಂಘಸಂಗತಿ ಆದಿವಾಸಿ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಆದಿವಾಸಿ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಉಡುಪಿ: ಜಿಲ್ಲೆಯ ಅಳಿವಿನಂಚಿನಲ್ಲಿರುವ ಆದಿವಾಸಿ ಬುಡಕಟ್ಟುಗಳಲ್ಲೊಂದಾದ ಹಸಲ ಸಮುದಾಯದವರು ಪಶ್ಚಿಮ ಘಟ್ಟದ ತಪ್ಪಲಿನ ಕೊಲ್ಲೂರು, ಕೆರಾಡಿಯ ಕಾರೆಬೈಲು, ಹಳ್ಳಿಹೊಳೆಯ ಕಬ್ಬಿನಾಲೆ, ದೇವರಬಾಳು ಮೊದಲಾದ ದಟ್ಟ ಕಾಡುಗಳಲ್ಲಿ ವಾಸಿಸುತ್ತಿದ್ದಾರೆ. ಸರಕಾರದಿಂದ ದೊರೆಯುವ ಉಚಿತ ಪೌಷ್ಟಿಕ ಆಹಾರ ಯೋಜನೆ, ಅರಣ್ಯದ ಹಕ್ಕು, ಬುಡಕಟ್ಟುಗಳಿಗೆ ಇರುವ ವಿಶೇಷ ಉದ್ಯೋಗದ ಮೀಸಲಾತಿ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಆದಿವಾಸಿ ಮಕ್ಕಳಿಗೆ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅವಕಾಶದಿಂದ ವಂಚಿತರಾಗಿದ್ದಾರೆ.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಸಲರು ಸಮುದಾಯಕ್ಕೆ ಉಚಿತ ಪೌಷ್ಟಿಕ ಆಹಾರ ಯೋಜನೆ ಮಳೆಗಾಲದ ಆರು ತಿಂಗಳ ಕಾಲ ನೀಡಲಾಗುತ್ತಿದೆ. ಆದರೆ, ಉಡುಪಿ ಜಿಲ್ಲೆಯಲ್ಲಿ ಇವರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸರಕಾರ ಗುರುತಿಸಿದ ಕಾರಣ ಉಚಿತ ಪೌಷ್ಟಿಕ ಆಹಾರದಿಂದ ವಂಚಿತರಾಗಿದ್ದಾರೆ. ಇದು ಸರಕಾರ ಆದಿವಾಸಿ ಜನಾಂಗಕ್ಕೆ ಮಾಡಿರುವ ಅನ್ಯಾಯ.

ಅವರನ್ನು ಸರಕಾರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇಟ್ಟಿರುವ ಕಾರಣಕ್ಕೆ ಬುಡಕಟ್ಟು ಜನಾಂಗವಲ್ಲ ಎಂದು ತಿಳಿಯಲು ಸಾಧ್ಯವಿಲ್ಲ. ಸಂಘಟನೆ ಮೂಲಕ ಅವರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಹೋರಾಟ ಮುಂದುವರಿದಿದೆ. ಆದರೆ, ಆಡಳಿತದ ಪ್ರತಿಕ್ರಿಯೆ ಬಂದಿಲ್ಲ.

ಇವರ ಸಾಂಪ್ರದಾಯಿಕ ಆಹಾರ ಪದ್ಧತಿ ನಶಿಸಿ ಹೋಗಿದೆ. ಅತ್ಯಂತ ಆರೋಗ್ಯದಾಯಕ ಬದುಕು ನಡೆಸುತ್ತಿರುವ ಇವರಿಗೆ ಸರಕಾರದ ಅರಣ್ಯ ನೀತಿ, ವನ್ಯಜೀವಿ ಕಾಯ್ದೆ, ಜೀವ ವೈವಿಧ್ಯತೆ ಕಾಯ್ದೆ, ಆಹಾರದ ಕಾಯ್ದೆ, ಕುಲಕಸುಬು ಅವನತಿ, ನಿರುದ್ಯೋಗ ಸಮಸ್ಯೆ ಇಂಥ ಹಲವಾರು ಕಾರಣಗಳಿಗೆ ಅಪೌಷ್ಟಿಕತೆಯಿಂದ ಬಳಲುವಂತೆ ಮಾಡಿವೆ. ಇಂಥ ಸಂದರ್ಭದಲ್ಲಿ ಕೋವಿಡ್ ಸಂಕಷ್ಟಗಳೂ ಇವರ ಬದುಕು ಇನ್ನಷ್ಟು ಕುಸಿಯುವಂತೆ ಮಾಡಿದೆ.

ಜಿಲ್ಲಾಡಳಿತ ಹಸಲ ಸೇರಿದಂತೆ ಕೊರಗ, ಮಲೆಕುಡಿಯ, ಮರಾಠಿ, ನಾಯಕ ಸಮುದಾಯಗಳ ನೆರವಿಗೆ ಬಾರದಿರುವುದು ವಿಷಾದನೀಯ.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ ನೇತೃತ್ವದಲ್ಲಿ ಆದಿವಾಸಿ ಸಮುದಾಯಗಳ ನೆರವಿಗೆ ಧಾವಿಸಿದ್ದು, ಜಿಲ್ಲೆಯಲ್ಲಿ ಆದಿವಾಸಿಗಳನ್ನು ಆಡಳಿತ, ಸರಕಾರ ಕಡೆಗಣಿಸಿರುವುದರ ಪ್ರತಿಭಟನಾ ಪ್ರಕ್ರಿಯೆಯಾಗಿ ಆದಿವಾಸಿಗಳ ಗುಂಪುಗಳಲ್ಲಿ ಅವರ ಆಹಾರದ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿ ಅತಿ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ದಾನಿಗಳ ನೆರವಿನಿಂದ ಆಹಾರದ ಕಿಟ್ ವಿತರಿಸಲಾಯಿತು. ಜಿಲ್ಲೆಯ 150 ಆದಿವಾಸಿ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.

ಕಿಟ್ ನೀಡಲು ಶ್ರಮಿಸಿದ ಸಿಪಿಐ(ಎಂ) ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗಾರ್, ನರಸಿಂಹ ಆಚಾರ್ ಕೊಲ್ಲೂರು, ಮಹಾದೇವ ಹಸಲ, ಪ್ರಕಾಶ, ಸುಭಾಶ್, ಸುಧಾಕರ, ಸುರೇಶ್, ಸಂಜು ಕಾರೆಬೈಲು, ಮೂರ್ತಿ ಕಬ್ಬಿನಾಲೆ, ಬೇಬಿ ಕತ್ತಲಕೊಡು, ಶಿವರಾಜ್ ನಾಡ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹಸಂಚಾಲಕ ಶ್ರೀಧರ ನಾಡ ಉಪಸ್ಥಿಯಲ್ಲಿ ಕಿಟ್ ವಿತರಿಸಲಾಯಿತು.

ಪ್ರಮುಖವಾಗಿ ಆಹಾರದ ಕಿಟ್ ದಾನಿಗಳಿಂದ ಸಂಗ್ರಹಿಸಿ ಆದಿವಾಸಿಗಳಿಗೆ ಸಿಐಟಿಯು ದಕ್ಷಿಣ ಜಿಲ್ಲಾ ಸಮಿತಿ ಮತ್ತು ಕೆ. ಪ್ರಕಾಶ್ ನೆರವಾಗಿದ್ದಾರೆ.

ಈ ಸಂದರ್ಭದಲ್ಲಿ ಕೊರೊನಾ ಜಾಗೃತಿ ಮತ್ತು ಎಲ್ಲರೂ ಲಸಿಕೆ ಪಡೆಯುವಂತೆ ತಿಳಿಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!