ಉಡುಪಿ: ಜಿಲ್ಲೆಯ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿದ್ದ ಸುಮಾರು 2 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ರಮ್ಝಾನ್ ಸಂದರ್ಭದಲ್ಲಿ ಆಹಾರ ಕಿಟ್ ವಿತರಿಸಲಾಯಿತು.
ಕುಂದಾಪುರ, ಬ್ರಹ್ಮಾವರ, ಕಾಪು, ಕಾರ್ಕಳ ಮತ್ತು ಉಡುಪಿ ತಾಲೂಕಿನ ಬಡ ಕುಟುಂಬಗಳಿಗೆ ಕಿಟ್ ತಲುಪಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜೆ.ಐ.ಎಚ್ ಹೂಡೆ ಅಧ್ಯಕ್ಷ ಅಬ್ದುಲ್ ಖಾದಿರ್ ಮೊಯ್ದಿನ್, ಕಷ್ಟದ ಸಂದರ್ಭದಲ್ಲಿ ಜನರ ನೋವಿಗೆ ಸ್ಪಂದಿಸುವುದು ಇಸ್ಲಾಮ್ ಕಲಿಸಿಕೊಟ್ಟ ಪಾಠ. ಆ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಬಹಳಷ್ಟು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸೂರಿಲ್ಲದವರಿಗೆ ಸೂರು ಒದಗಿಸುವ ಕಾರ್ಯ, ಸ್ವಯಂ ಉದ್ಯೋಗಕ್ಕೆ ನೆರವು ಹೀಗೆ ನಿರಂತರವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡುತ್ತಲೇ ಬಂದಿದೆ. ಅದರ ಅಂಗಸಂಸ್ಥೆ ಎಚ್.ಆರ್.ಎಸ್. ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಸಂಕಷ್ಟಕ್ಕೀಡಾಗಿರುವ 2,500ಕ್ಕಿಂತ ಅಧಿಕ ಕುಟುಂಬಗಳಿಗೆ ಜಾತಿ, ಮತ, ಧರ್ಮದ ಬೇಧ ಮಾಡದೆ ಎಲ್ಲರಿಗೂ ಆಹಾರ ಕಿಟ್ ವಿತರಿಸಿದ್ದೇವೆ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ನ ಎಚ್.ಆರ್.ಎಸ್ ಘಟಕ ಕೋವಿಡ್ ರಿಲೀಫ್ ಕಾರ್ಯಲ್ಲಿ ಜಿಲ್ಲೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು ರೋಗಿಗಳಿಗೆ ಬೇಕಾದ ಎಲ್ಲ ಸಹಾಯ ಹಸ್ತ ಚಾಚಲು ತನ್ನಿಂದಾದ ಪ್ರಯತ್ನ ಮಾಡುತ್ತಿದೆ. ಆಯುಷ್ಮಾನ್ ಮಾರ್ಗದರ್ಶಿ, ಅಂಬ್ಯುಲೆನ್ಸ್ ಸೇವೆ, ವೈದ್ಯರ ಸೇವೆ, ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿದೆ. ಈಗಾಗಲೇ ಅದರ ವಿದ್ಯಾರ್ಥಿ ಘಟಕ ಎಸ್.ಐ.ಓ ಕೋವಿಡ್ ಸಂಬಂಧಿತ ಸಂಪೂರ್ಣ, ಸುಸಜ್ಜಿತ ಸಹಾಯ ಕೇಂದ್ರ ಸ್ಥಾಪಿಸಿ ದೇಶದಾದ್ಯಂತ ಸುದ್ದಿಯಾಗಿತ್ತು.
ಎಚ್.ಆರ್.ಎಸ್ ಕಾರ್ಯಕರ್ತರು ಜಾತಿ, ಮತದ ಬೇಧವಿಲ್ಲದೆ ಸೋಂಕಿತ ವ್ಯಕ್ತಿ ಮೃತಪಟ್ಟಾಗ ಅವರ ಅಂತ್ಯಕ್ರಿಯೆ ಕಾರ್ಯದಲ್ಲೂ ತೊಡಗಿಕೊಂಡಿದ್ದಾರೆ.
ಎಚ್.ಆರ್.ಎಸ್ ಸಂಚಾಲಕ ಹಸನ್, ಕಳೆದ ಬಾರಿಯ ಲಾಕ್ ಡೌನ್ ನಂತೆ ಈ ಬಾರಿಯೂ ನಮ್ಮ ಕಾರ್ಯಕರ್ತರು ಜನರಿಗೆ ಸಹಾಯ ನೀಡಲು ರಾತ್ರಿ ಹಗಲೆನ್ನದೆ ಸೇವೆಯಲ್ಲಿ ನಿರತರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಹೆಲ್ಪ್ ಲೈನ್ ಸ್ಥಾಪಿಸಲಾಗಿದೆ. ಈಗಾಗಲೇ ಅನೇಕ ಮಂದಿ ಕರೆ ಮಾಡಿ ಸಹಾಯ ಕೋರಿದ್ದಾರೆ. ನಮ್ಮ ತಂಡ ಅವರ ನೋವಿಗೆ ಸ್ಪಂದಿಸುವ ಕೆಲಸ ಮಾಡಿದೆ. ಬೆಡ್, ಆಕ್ಸಿಜನ್, ವೆಂಟಿಲೇಟರ್ ಅಗತ್ಯವಿದ್ದಾಗ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅದನ್ನು ಒದಗಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.