Thursday, July 7, 2022
Home ಸಮಾಚಾರ ಸಂಘಸಂಗತಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊರೊನಾ ಕವಚ್ ಪಾಲಿಸಿ ಹಸ್ತಾಂತರ

ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊರೊನಾ ಕವಚ್ ಪಾಲಿಸಿ ಹಸ್ತಾಂತರ

ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಸಂಘ ಪರಿವಾರ ಸಂಘಟನೆ ಕಾರ್ಯಕರ್ತರು ತಮ್ಮ ಪ್ರಾಣದ ಪರಿವೆಯೇ ಇಲ್ಲದೆ ಕೊರೊನಾ ಸೊಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದಲ್ಲಿ ಸಕ್ರಿಯವಾಗಿ ಸೇವಾನಿರತರಾಗಿದ್ದಾರೆ.

ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯ ಸಮಾಜಮುಖಿ ಸೇವಾಸಂಸ್ಥೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಜರಂಗದಳದ 25 ಮಂದಿ ಕಾರ್ಯಕರ್ತರಿಗೆ ತಲಾ 5 ಲಕ್ಷ ರೂ. ಮೊತ್ತದ ಕೊರೊನಾ ಕವಚ್ ಜೀವವಿಮೆ ಪಾಲಿಸಿ ಮಾಡಲಾಗಿದೆ. ಅದರೊಂದಿಗೆ ಟ್ರಸ್ಟ್ ವತಿಯಿಂದ ಪಿಪಿಇ ಕಿಟ್, ಕೈಕವಚ, ಸ್ಯಾನಿಟೈಸರ್ ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡಲಾಯಿತು.

ಬಜರಂಗದಳ ಕಾರ್ಯಕರ್ತರು ಕೊರೊನಾದಿಂದ ಮೃತಪಟ್ಟವರ ಮೃತದೇಹಗಳನ್ನು ಆಸ್ಪತ್ರೆಯಿಂದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ವಿಧಿವತ್ತಾಗಿ ಅಂತ್ಯಸಂಸ್ಕಾರ ನಡೆಸಿ ಮೃತರ ಅಂತಿಮ ಪ್ರಯಾಣ ಗೌರವಯುತವಾಗಿ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಜೀವವಿಮೆ ಮಾಡುವುದು ಅತ್ಯಗತ್ಯ ಎಂದು ಮನಗಂಡ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್, ಜೊತೆಗೆ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಸೌಕರ್ಯ ನೀಡಿ ಅವರ ಈ ಸೇವಾಕಾರ್ಯದಲ್ಲಿ ಕೈಜೋಡಿಸಿದೆ.

ಈಗಾಗಲೇ ಸ್ಮಶಾನದಲ್ಲಿ ಹೆಣ ಸುಡುವವರಿಗೆ ಮತ್ತು ಅವರ ಕುಟುಂಬದವರಿಗೆ ಟ್ರಸ್ಟ್ ವತಿಯಿಂದ ಪ್ರತ್ಯೇಕ ಜೀವವಿಮೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಜೀವವಿಮಾ ಪಾಲಿಸಿಯ ದಾಖಲೆಗಳನ್ನು ಟ್ರಸ್ಟ್ ವತಿಯಿಂದ ಸಂಘಟನೆ ಪ್ರಮುಖರಾದ ಶರಣ್ ಪಂಪವೆಲ್ ಮತ್ತು ಪುನೀತ್ ಪಂಪವೆಲ್ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಪ್ರಮುಖರಾದ ಹನುಮಂತ ಕಾಮತ್, ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್ ಹಾಗೂ ಬಜರಂಗದಳ ಕಾರ್ಯಕರ್ತರು ಇದ್ದರು.

ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಮಾದರಿ, ನಿಸ್ವಾರ್ಥ ಕಾರ್ಯವನ್ನು ಪ್ರಜ್ಞಾವಂತ ಸಮಾಜ ಶ್ಲಾಘಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!