Sunday, July 3, 2022
Home ಸಮಾಚಾರ ಸಂಘಸಂಗತಿ ಮುನ್ನೆಚ್ಚರಿಕೆ ವಹಿಸಿದಲ್ಲಿ ಮಾತ್ರ ಕೊರೊನಾ ನಿಯಂತ್ರಣ: ತಜ್ಞ ವೈದ್ಯರ ಸಲಹೆ

ಮುನ್ನೆಚ್ಚರಿಕೆ ವಹಿಸಿದಲ್ಲಿ ಮಾತ್ರ ಕೊರೊನಾ ನಿಯಂತ್ರಣ: ತಜ್ಞ ವೈದ್ಯರ ಸಲಹೆ

ಉಡುಪಿ: ಕೊರೊನಾವನ್ನು ಲಘುವಾಗಿ ಪರಿಗಣಿಸದೇ, ಅದರ ಬಗ್ಗೆ ನಿರ್ಲಕ್ಷ್ಯ ವಹಿಸದೇ ಮುನ್ನೆಚ್ಚರಿಕೆ ವಹಿಸಿದಲ್ಲಿ ಮಾತ್ರ ಸೋಂಕು ನಿಯಂತ್ರಣ ಸಾಧ್ಯ, ಇಲ್ಲವಾದಲ್ಲಿ ಪರಿಸ್ಥಿತಿ ಗಂಭೀರವಾದೀತು ಎಂಬ ಎಚ್ಚರಿಕೆಯನ್ನು ಉಡುಪಿಯ ತಜ್ಞ ವೈದ್ಯರು ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆಯುವ ತಿಂಗಳ ಮಾಧ್ಯಮ ಸಂವಾದ ಕಾರ್ಯಕ್ರಮದಡಿ ಗುರುವಾರ ಭಾರತೀಯ ವೈದ್ಯರ ಸಂಘ (ಐಎಂಎ) ಸಹಯೋಗದೊಂದಿಗೆ ಇಲ್ಲಿನ ಐಎಂಎ ಭವನದಲ್ಲಿ ನಡೆದ ತಜ್ಞ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ. ಉಮೇಶ್ ಪ್ರಭು, ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಸರ್ಕಾರ ಸೂಚಿಸಿರುವ ನಿಯಂತ್ರಣ ಉಪಕ್ರಮಗಳನ್ನು ಅನುಸರಿಸಬೇಕು. ಜೊತೆಗೆ ಅರ್ಹರೆಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು ಎಂದರು. ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಾದಂತೆ ವೈದ್ಯಕೀಯ ಸಿಬಂದಿ ಕೊರತೆ ಕಂಡುಬರುತ್ತದೆ. ಎಲ್ಲ ವೈದ್ಯರೂ ಚಿಕಿತ್ಸೆಯಲ್ಲಿ ಮಗ್ನರಾಗಿರುವುದರಿಂದ ಲಭ್ಯ ಅವಧಿಯಲ್ಲಿ ಕೋವಿಡ್ ಪೀಡಿತರ ಚಿಕಿತ್ಸೆಯಲ್ಲಿ ತೊಡಗಿಕೊಳ್ಳಬಹುದು ಎಂದರು.

ಐಎಂಎ ಸಂಘಟನಾ ಕಾರ್ಯದರ್ಶಿ ಹಾಗೂ ಸರ್ಜನ್ ಡಾ. ವೈ. ಸುದರ್ಶನ ರಾವ್, ಸಾಂಕ್ರಾಮಿಕ ರೋಗ ಕೊರೊನಾ ಲಕ್ಷಣ ಕಂಡುಬಂದ ತಕ್ಷಣ ವಿಳಂಬವಿಲ್ಲದೆ ಪರೀಕ್ಷೆಗೊಳಗಾಗಬೇಕು. ಆರಂಭಿಕ ಹಂತದಲ್ಲಿ ಆಸ್ಪತ್ರೆ ಚಿಕಿತ್ಸೆ ಅಗತ್ಯವಿಲ್ಲ. ಮನೆ ಆರೈಕೆಯಲ್ಲಿ ತೊಡಗಿಕೊಂಡು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪೀಡಿತರಿಂದ ಮನೆಯ ಇತರ ಸದಸ್ಯರಿಗೆ ರೋಗ ಪಸರಿಸದಂತೆ ಎಚ್ಚರಿಕೆ ವಹಿಸುವುದು ಮುಖ್ಯ ಎಂದರು. ವೈದ್ಯರ ಸಲಹೆ ಪಡೆಯಬೇಕು. ಕೊರೊನಾ ಬಾಧಿಸಿರುವ ಮಾಹಿತಿಯನ್ನು ವೈದ್ಯರಿಗೆ ಮುಂಚಿತವಾಗಿ ನೀಡಿದಲ್ಲಿ ಚಿಕಿತ್ಸೆಗೆ ಸಹಕಾರಿಯಾಗಲಿದೆ. ರೋಗ ಪೀಡಿತರಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಮಾಜಸೇವಕರು ಅಗತ್ಯ ಸಹಕಾರ ನೀಡಬೇಕು ಎಂದರು.

ಡಾ. ಟಿಎಂಎ ಪೈ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಶಶಿಕಿರಣ್ ಉಮಾಕಾಂತ್, ಜನತೆಯ ನಿರ್ಲಕ್ಷ್ಯದಿಂದಲೇ ಕೋವಿಡ್ ಎರಡನೇ ಅಲೆ ತೀವ್ರವಾಗಿ ಹರಡಿತು. ಕಳೆದ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಕೊರೊನಾ ನಿಯಂತ್ರಣದಲ್ಲಿ ಭಾರತ, ವಿಶ್ವದಲ್ಲೇ ಮುಂಚೂಣಿಯಲ್ಲಿತ್ತು. ಈ ಬಾರಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಪರಿಣಾಮ ಮತ್ತೆ ಕೊರೊನಾ ಬಾಧೆ ಶುರುವಾಯಿತು. ಇನ್ನಾದರೂ ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಪರಿಸ್ಥಿತಿ ಕೈಮೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊರೊನಾ ಲಕ್ಷಣ ಕಂಡುಬಂದು ಮನೆ ಆರೈಕೆಯಲ್ಲಿರುವವರು ದೈಹಿಕ ಹಾಗೂ ಮಾನಸಿಕ ವಿಶ್ರಾಂತಿ ಪಡೆಯಬೇಕು. ಕನಿಷ್ಟ ಎರಡೂವರೆ ಲೀ.ನಷ್ಟು ನೀರು ಕುಡಿಯಬೇಕು. ಹಸಿವಿಲ್ಲದ್ದರೂ ಆಹಾರ ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು. ಜ್ವರ ಇತ್ಯಾದಿ ಕಂಡುಬಂದಲ್ಲಿ ದಿನಕ್ಕೆ ಗರಿಷ್ಟ 5 ಪ್ಯಾರಸಿಟಮಾಲ್ ನಂಥ ಮಾತ್ರೆ ಸೇವಿಸಬಹುದು. ಆದರೆ, ಆ್ಯಂಟಿಬಯೊಟಿಕ್ ಹಾಗೂ ಸ್ಟಿರಾಯ್ಡ್ ಸೇವನೆ ಬಗ್ಗೆ ತಜ್ಞ ವೈದ್ಯರ ಸಲಹೆ ಬೇಕೇಬೇಕು ಎಂದರು.

ಕೊರೊನಾ ಬಾಧೆಗೊಳಗಾದ 5 ದಿನದ ಬಳಿಕವೂ ತಹಬದಿಗೆ ಬಾರದಿದಲ್ಲಿ ಆಸ್ಪತ್ರೆ ಅಥವಾ ವೈದ್ಯರನ್ನು ಭೇಟಿ ಮಾಡಬೇಕು. ಅಗತ್ಯವಿದಲ್ಲಿ ಮಾತ್ರ ಸಿಟಿ ಸ್ಕ್ಯಾನ್ ಮಾಡಲಾಗುವುದು. ಆಮ್ಲಜನಕದ ಪ್ರಮಾಣ ಇತ್ಯಾದಿ ಅವಲೋಕಿಸಿ ಅಗತ್ಯ ಚಿಕಿತ್ಸೆ ನೀಡಲಾಗುವುದು. ಸೋಂಕು ಈ ಮಟ್ಟಕ್ಕೆ ತಲುಪಲು ಅವಕಾಶ ನೀಡದೇ ಸೂಕ್ತ ಎಚ್ಚರಿಕೆ ವಹಿಸಿದಲ್ಲಿ ಕೋವಿಡ್ ನಿಯಂತ್ರಣ ಸಾಧ್ಯ. ಕೋವಿಡ್ ಮಾರಣಾಂತಿಕ ಕಾಯಿಲೆ ಅಲ್ಲ. ರೋಗಪೀಡಿತರ ಪೈಕಿ ಶೇ. 95ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ. ಶೇ. 5ರಿಂದ 8ರಷ್ಟು ಮಂದಿಗೆ ಮಾತ್ರ ಆಸ್ಪತ್ರೆಗೆ ದಾಖಲಾಗುವ ಆವಶ್ಯಕತೆ ಬರಬಹುದು ಎಂದರು.

ನಗರದ ಆದರ್ಶ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಜಿ. ಎಸ್. ಚಂದ್ರಶೇಖರ್, ಅರ್ಹರೆಲ್ಲರೂ ಕೋವಿಡ್ ಲಸಿಕೆ ಪಡೆಯಬೇಕು. ಮೊದಲ ಡೋಸ್ ಪಡೆದಲ್ಲಿ ಸ್ವಲ್ಪ ಮಟ್ಟಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಎರಡನೇ ಡೋಸ್ ಪಡೆದ ಬಳಿಕ ಪೂರ್ಣ ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಲಸಿಕೆ ಪಡೆದವರಿಗೆ ಸೋಂಕು ತಗುಲಬಾರದು ಎಂದೇನಿಲ್ಲ. ಆದರೆ, ರೋಗ ಉಲ್ಬಣತೆ ಪ್ರಮಾಣ ಕಡಿಮೆ ಎಂದರು.

ಕೊರೊನಾ ಸಂಪೂರ್ಣ ತೊಲಗುವುದಿಲ್ಲ. ಅದರೊಂದಿಗೆ ಜೀವನ ಅಗತ್ಯವಾದ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷ ಕಾಲ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನತೆ ಸಹಕರಿಸಬೇಕು. ಜೊತೆಗೆ ರಾಜಕೀಯ ಇಚ್ಛಾಶಕ್ತಿ ಬೇಕು ಎಂದವರು ಪ್ರತಿಪಾದಿಸಿದರು.

ದೊಡ್ಡಣಗುಡ್ಡೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಮನೋಚಿಕಿತ್ಸಕ ಡಾ. ವಿರೂಪಾಕ್ಷ ದೇವರಮನೆ, ಸೋಂಕು ಪೀಡಿತರು ತನ್ನಿಂದ ಇನ್ನೊಬ್ಬರಿಗೆ ಸೋಂಕು ಹರಡಬಾರದು ಎಂಬ ಸ್ವಯಂ ಎಚ್ಚರಿಕೆ ವಹಿಸಬೇಕು. ಸೋಂಕಿನ ಕುರಿತು ಸುಳ್ಳು ಸುದ್ದಿ ಅಥವಾ ಅತಿರಂಜಿತ ಸುದ್ದಿ ಬಿತ್ತರಗೊಳ್ಳದಂತೆ ಮಾಧ್ಯಮದವರು ಜವಾಬ್ದಾರಿಯಿಂದ ವರ್ತಿಸಬೇಕು. ಕೊರೊನಾ ಬಗ್ಗೆ ಭಯ ಬೇಡ ಆದರೆ, ಜಾಗ್ರತೆ ಅಗತ್ಯ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಐಎಂಎ ಕಾರ್ಯದರ್ಶಿ ಡಾ. ಪ್ರಕಾಶ್ ಭಟ್ ನಿರೂಪಿಸಿದರು.

* ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದು ಕೊವಾಕ್ಸಿನ್ ಗರಿಷ್ಟ 6 ವಾರ ಹಾಗೂ ಕೊವಿಶೀಲ್ಡ್ನ್ನು 8 ವಾರಗಳ ಬಳಿಕವೂ ಎರಡನೇ ಡೋಸ್ ಪಡೆಯಬಹುದು.

* ಮೃತದೇಹದಲ್ಲಿ ಕೊರೊನಾ ವೈರಸ್ ಸುಮಾರು 3- 4 ಗಂಟೆಗಳ ವರಗೂ ಇರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಈಚಿನ ದಿನಗಳಲ್ಲಿ ಮೃತದೇಹವನ್ನು ವಾರೀಸುದಾರರಿಗೇ ನೀಡಲಾಗುತ್ತಿದೆ. ಆದರೆ, ಮೃತದೇಹ ಸ್ಪರ್ಶಿಸಲು ಅವಕಾಶವಿಲ್ಲ. ನೇರವಾಗಿ ಚಿತೆ ಯಾ ದಫನ ಸ್ಥಳಕ್ಕೆ ಕೊಂಡೊಯ್ಯಬೇಕು

* ಕೊರೊನಾ ರೋಗ ಪ್ರಮಾಣ ಬಗ್ಗೆ ಸಿಟಿ ಸ್ಕ್ಯಾನ್ ಮಾಡಲಾಗುತ್ತಿದೆ. ನಿಯಮ ಪ್ರಕಾರ ಸುಖಾಸುಮ್ಮನೆ ಅದನ್ನು ಮಾಡುವಂತಿಲ್ಲ. ತೀರಾ ಅನಿವಾರ್ಯವಾದಲ್ಲಿ ಮಾತ್ರ ಮಾಡಲಾಗುತ್ತದೆ.

* ಮಳೆಗಾಲದಲ್ಲಿ ಸೋಂಕು ಹೆಚ್ಚಾಗುವ ಭೀತಿ ಇದೆ. ಕಳೆದ ಬಾರಿಯೂ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜೂನ್- ಜುಲೈನಲ್ಲಿ ಸೋಂಕು ಹೆಚ್ಚಿತ್ತು.

* ಕೋವಿಡ್ ಪೀಡಿತರಿಗೆ ಇತರ ರೋಗಿಗಳಿಗಿಂತ ಭಿನ್ನವಾಗಿ, ಅಗತ್ಯ ವೈದ್ಯಕೀಯ ಸುರಕ್ಷತಾ ಉಪಕರಣಗಳೊಂದಿಗೆ ಚಿಕಿತ್ಸೆ ನೀಡಬೇಕಾದ ಹಿನ್ನೆಲೆಯಲ್ಲಿ ಆಸ್ಪತ್ರೆ ಬಿಲ್ ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರ ದರ ನಿಗದಿ ಮಾಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಅಲಭ್ಯವಾದಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಸೌಲಭ್ಯ ಲಭಿಸಲಿದೆ.

* ಲಸಿಕೆ ಪರಿಣಾಮಕಾರಿ ಎಂಬುದಕ್ಕೆ ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ವೈದ್ಯರೂ ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಸೋಂಕು ತಗುಲಿದ್ದು ಕಡಿಮೆ

* ಸೋಂಕು ತಹಬದಿಗೆ ಬರಲು ಲಾಕ್ ಡೌನ್ ಪರಿಣಾಮಕಾರಿ ಪರಿಹಾರವಾಗಬಲ್ಲುದು. ಆದರೆ, ಲಾಕ್ ಡೌನ್ನಿಂದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ವ್ಯತ್ಯಾಸವಾಗುವುದನ್ನೂ ತಳ್ಳಿಹಾಕಲಾಗದು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!