ಸೂಪರ್ ಶ್ರೇಣಿ ಸದಸ್ಯರಿಗೆ 3 ಲಕ್ಷ ವರೆಗೆ ಸಾಲ ಸೌಲಭ್ಯ
ಉಡುಪಿ: ಕಳೆದ 5 ವರ್ಷದಿಂದ ಅತ್ಯುತ್ತಮವಾಗಿ ಆರ್ಥಿಕ ನಿರ್ವಹಣೆ ಮಾಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸಂಘದ ಸೂಪರ್ ಶ್ರೇಣಿ (ಎಸ್ ಶ್ರೇಣಿ) ಸದಸ್ಯರಿಗೆ ಆಧುನಿಕ ತಂತ್ರಜ್ಞಾನ ಬಳಕೆ (ಎಪಿಪಿ) ಮೂಲಕ 3 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್. ಎಚ್. ಮಂಜುನಾಥ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಉಡುಪಿ ತಾಲೂಕು ಮತ್ತು ಪ್ರಗತಿ ಬಂಧು ಒಕ್ಕೂಟ ಅಂಬಾಗಿಲು ವಲಯ ನೇತೃತ್ವದಲ್ಲಿ ಈಚೆಗೆ ಇಲ್ಲಿನ ಪುತ್ತೂರು ಭಗವತಿ ದುರ್ಗಾಪರಮೇಶ್ವರಿ ದೇವಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಸ್ವಯಂ ಉದ್ಯೋಗ ಪೂರಕವಾಗಿ ದ್ವಿಚಕ್ರ ವಾಹನ ವಿತರಿಸಿ ಮಾತನಾಡಿದರು.
ವ್ಯಾಪಾರ ಅಭಿವೃದ್ಧಿಗಾಗಿ 50 ಸಾವಿರ ರೂ.ನಿಂದ 5 ಲಕ್ಷ ರೂ. ವರೆಗೆ ಕಡಿಮೆ ದರದಲ್ಲಿ ಸಿಡ್ಬಿ ಸಾಲ ನೀಡಲಾಗುತ್ತಿದೆ. ಸಂಘದ ಸದಸ್ಯರಿಗೆ ವೈಯಕ್ತಿಕ ಖಾತೆ ತೆರೆದು ಸಂಘದ ಖಾತೆಗೆ ಜೋಡಣೆ ಮಾಡುವ ಬಗ್ಗೆ ಕಿನ್ನಿಗೋಳಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮ ಹಾಕಿಕೊಂಡಿದೆ ಎಂದರು.
ಸ್ವಾವಲಂಬನೆಯಿಂದ ಸಬಲೀಕರಣ ಸಾಧ್ಯ ಎಂದ ಡಾ| ಮಂಜುನಾಥ್, ಪಾಲುದಾರರು ತಂತ್ರಜ್ಞಾನ ಬಳಕೆಯೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಹೆಜ್ಜೆ ಇರಿಸಿದ್ದಾರೆ ಎಂದರು.
ರಸ್ತೆ ನಿಯಮ ಪಾಲಿಸಿ
ದ್ವಿಚಕ್ರ ವಾಹನ ಪಡೆದವರೆಲ್ಲರೂ ರಸ್ತೆ ನಿಯಮ ಪಾಲಿಸಬೇಕು. ವಾಹನ ಆರ್.ಸಿ., ಇನ್ಸೂರೆನ್ಸ್, ಚಾಲನೆ ಪರವಾನಿಗೆ ಇತ್ಯಾದಿ ಅಗತ್ಯ ದಾಖಲಾತಿಗಳನ್ನು ತಮ್ಮಲ್ಲಿಟ್ಟುಕೊಳ್ಳಬೇಕು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸೂಚಿಸಿದರು.
ಬ್ಯಾಂಕ್ ಆಫ್ ಬರೋಡ ವಿಭಾಗೀಯ ಪ್ರಬಂಧಕ ರವಿ ಎಚ್. ಜಿ. ಶುಭ ಹಾರೈಸಿದರು. ಶ್ರೀ ಭಗವತಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ ಭಟ್, ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಎಂ., ರಾಜ್ಯ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ದೇವದಾಸ ಹೆಬ್ಬಾರ್, ಧರ್ಮಶ್ರೀ ಒಕ್ಕೂಟ ಅಧ್ಯಕ್ಷೆ ಶಾಂತಿ ರವಿ, ನಗರಸಭಾ ಸದಸ್ಯೆ ಜಯಂತಿ ಇದ್ದರು.
ಉಡುಪಿ ತಾಲೂಕು ಯೋಜನಾಧಿಕಾರಿ ರೋಹಿತ್ ಎಚ್. ಸ್ವಾಗತಿಸಿದರು. ಅಂಬಾಗಿಲು ವಲಯ ಮೇಲ್ವಿಚಾರಕ ಜಯಕರ ನಿರೂಪಿಸಿದರು. ಕೃಷಿ ಮೇಲ್ವಿಚಾರಕ ರಾಘವೇಂದ್ರ ಎಂ. ವಂದಿಸಿದರು.