Monday, July 4, 2022
Home ಸಮಾಚಾರ ಸಂಘಸಂಗತಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಗುಣಮಟ್ಟ ಕಾರ್ಯಕ್ಷಮತೆ ಶ್ರೇಷ್ಠತೆ ಪ್ರಶಸ್ತಿ

ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಗುಣಮಟ್ಟ ಕಾರ್ಯಕ್ಷಮತೆ ಶ್ರೇಷ್ಠತೆ ಪ್ರಶಸ್ತಿ

ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆ (ಕೆಎಂಸಿ)ಗೆ ಮುಂಬೈನ ಐ.ಎಂ.ಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ ಟ್ರಸ್ಟ್ ನೀಡುವ ಪ್ರಸಕ್ತ ಸಾಲಿನ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಕಾರ್ಯಕ್ಷಮತೆ ಶ್ರೇಷ್ಠತಾ ಪ್ರಶಸ್ತಿ (ಪರ್ಫಾರ್ಮೆನ್ಸ್ ಎಕ್ಸಲೆನ್ಸ್) ಲಭಿಸಿದೆ.

ಆರೋಗ್ಯ ಕ್ಷೇತ್ರದಲ್ಲಿನ ಗಣನೀಯ ಸೇವೆಗೆ ಈ ಪ್ರಶಸ್ತಿ ದೊರೆತಿದ್ದು, ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ (ಎಂಇಎಂಜಿ) ಮುಖ್ಯಸ್ಥ ಡಾ. ರಂಜನ್ ಆರ್. ಪೈ ಟ್ರೋಫಿ, ಪ್ರಶಸ್ತಿ ಮತ್ತು ಪ್ರಮಾಣಪತ್ರವನ್ನು ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಜಿ. ಮುತ್ತಣ್ಣ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ಮಣಿಪಾಲ ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಮಣಿಪಾಲ ಆಸ್ಪತ್ರೆಗಳ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್, ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ಸಹ ಉಪಕುಲಪತಿ (ಆರೋಗ್ಯ ವಿಜ್ಞಾನ ವಿಭಾಗ) ಡಾ. ಪಿ.ಎಲ್.ಎನ್.ಜಿ. ರಾವ್, ಕುಲಸಚಿವ ಡಾ. ನಾರಾಯಣ ಸಭಾಹಿತ್, ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್, ಆಸ್ಪತ್ರೆಯ ಗುಣಮಟ್ಟ ಅನುಷ್ಠಾನ ಸಲಹೆಗಾರ ಡಾ. ಸುನಿಲ್ ಸಿ. ಮುಂಡ್ಕೂರ್ ಇದ್ದರು.

ಮಾಹೆ ಮಣಿಪಾಲದ ಎಲ್ಲಾ ಉನ್ನತ ಅಧಿಕಾರಿಗಳು ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಲು ಕಾರಣರಾದ ಕಸ್ತೂರ್ಬಾ ಆಸ್ಪತ್ರೆ ತಂಡವನ್ನು ಅಭಿನಂದಿಸಿದರು. ಈ ಪ್ರಶಸ್ತಿಯೊಂದಿಗೆ ಆಸ್ಪತ್ರೆಯ ಗುಣಮಟ್ಟ ಮತ್ತು ಮಾನ್ಯತೆಗಳ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ ಎಂದರು.

ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ ದೇಶದ ಅತ್ಯಂತ ಪ್ರತಿಷ್ಠಿತ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಗಳಲ್ಲೊಂದಾಗಿದೆ. ಪ್ರಶಸ್ತಿಯನ್ನು ಐಎಂಸಿಯ ಮಾಜಿ ಅಧ್ಯಕ್ಷ ಮತ್ತು ಪ್ರಮುಖ ಕೈಗಾರಿಕೋದ್ಯಮಿ ದಿ| ರಾಮಕೃಷ್ಣ ಬಜಾಜ್ ಹೆಸರಿನಲ್ಲಿ ನೀಡಲಾಗುತ್ತದೆ. ಪ್ರಶಸ್ತಿ ಪ್ರಕ್ರಿಯೆ ಕಠಿಣ ತರಬೇತಿ ಮತ್ತು ಮೌಲ್ಯಮಾಪನ ಕ್ರಮದ ಮೂಲಕ ನಡೆಸಲಾಗುತ್ತದೆ.

ಪ್ರಶಸ್ತಿಯನ್ನು ಆಸ್ಪತ್ರೆಗೆ ಸಾಮಾಜಿಕ ಜವಾಬ್ದಾರಿ, ನೈತಿಕ ಮತ್ತು ಪಾರದರ್ಶಕ ಆರೋಗ್ಯ ಸೇವೆ, ಕ್ರಿಯಾತ್ಮಕ ನಾಯಕತ್ವ, ರೋಗಿಗಳ ಕೇಂದ್ರಿತ ಸೇವೆ, ಉದ್ಯೋಗಿಗಳ ದೃಷ್ಟಿಕೋನ, ಅತ್ಯುತ್ತಮ ಸಂಶೋಧನೆ ಮತ್ತು ತಾಂತ್ರಿಕ ಪರಿಣತಿಯೊಂದಿಗೆ ಎಲ್ಲಾ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒಂದೇ ಸೂರಿನಡಿ ಒದಗಿಸುತ್ತಿರುವ ಅಂಶಗಳನ್ನು ಗಮನಿಸಿ ನೀಡಲಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!