Thursday, July 7, 2022
Home ಸಮಾಚಾರ ಸಂಘಸಂಗತಿ ಪತ್ರಕರ್ತರಿಗಿರಬೇಕು ಕಾನೂನು ಅರಿವು

ಪತ್ರಕರ್ತರಿಗಿರಬೇಕು ಕಾನೂನು ಅರಿವು

ಉಡುಪಿ: ಪತ್ರಕರ್ತರಿಗೆ ಕಾನೂನಿನ ಅರಿವು ಇರಬೇಕು. ಬದಲಾದ ಕಾನೂನುಗಳನ್ನು ಅವರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

ಇದು ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಹಾಗೂ ವಕೀಲ ವಿವೇಕಾನಂದ ಪನಿಯಾಲ ನೀಡಿದ ಸಲಹೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ಮಾಧ್ಯಮ ಮತ್ತು ಕಾನೂನು ವಿಚಾರವಾಗಿ ಮಾತನಾಡಿದರು.

ಕಾನೂನು ಸಂಘರ್ಷದಲ್ಲಿ ಪತ್ರಕರ್ತ ಎಂದಿಗೂ ಏಕಾಂಗಿ. ವರದಿಗಾರಿಕೆ ಸಂದರ್ಭ ಪದ ಬಳಕೆಯಲ್ಲಿ ಕೊಂಚ ಎಡವಿದರೂ ಆತ ಕಾನೂನಿನ ಸಂಘರ್ಷಕ್ಕೊಳಗಾಗುವ ಸಾಧ್ಯತೆ ಇದೆ. ಕಾನೂನು ಹೋರಾಟದಲ್ಲಿ ಪತ್ರಕರ್ತ ಕೆಲಸ ನಿರ್ವಹಿಸುವ ಸಂಸ್ಥೆಯೂ ಆತನ ಪರ ನಿಲ್ಲುವುದಿಲ್ಲ ಎಂದವರು ಎಚ್ಚರಿಕೆ ನೀಡಿದರು.

ಪ್ರಕರಣದ ತನಿಖೆ ಅವಧಿಯಲ್ಲಿ ಪೊಲೀಸರು ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಬಾರದು ಎಂದು ರಾಜ್ಯ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ. ಕೆಲವೊಂದು ವ್ಯಕ್ತಿಗಳು ಮಾಧ್ಯಮಗಳ ಏಕಪಕ್ಷೀಯ ದುರ್ಬಳಕೆ ಮಾಡುವ ಅಪಾಯವನ್ನು ಪತ್ರಕರ್ತರು ಅರಿತುಕೊಳ್ಳಬೇಕಾಗಿದೆ. ಪತ್ರಕರ್ತರು ಅಪರಾಧ ಸುದ್ದಿ ವರದಿಗಾರಿಕೆ ಸಂದರ್ಭದಲ್ಲಿ ಪೊಲೀಸರ ಹೇಳಿಕೆ ಜೊತೆಗೆ ಸಂತ್ರಸ್ತರ ಹೇಳಿಕೆಯನ್ನೂ ದಾಖಲಿಸಬೇಕು. ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ಆ ಪ್ರಕರಣಗಳ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ವರದಿ ಮಾಡಬಾರದು ಎಂದು ಸಲಹೆ ನೀಡಿದರು.

ವಕೀಲರು ಹಾಗೂ ಪತ್ರಕರ್ತರ ಆಸಕ್ತಿಯ ಕ್ಷೇತ್ರ ಒಂದೇ. ಸಂವಿಧಾನ, ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಇಬ್ಬರ ಪಾತ್ರವೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಒಟ್ಟೂ ಸಮಾಜದ ಜನರ ಹಿತಕ್ಕಾಗಿ ಕೆಲಸ ಮಾಡುವ ಬಹು ಮುಖ್ಯವಾದ ಎರಡು ವೃತ್ತಿಗಳಿವು. ಈ ಎರಡೂ ಕ್ಷೇತ್ರಗಳಲ್ಲಿ ಗಾಂಧಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.

ಜಿಲ್ಲಾ ವಾರ್ತಾಧಿಕಾರಿ ಎಸ್. ಮಂಜುನಾಥ ಅಭ್ಯಾಗತರಾಗಿದ್ದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಸೇವೆ ಅಭಿನಂದನೀಯ ಎಂದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಸುಬ್ರಹ್ಮಣ್ಯ ಜಿ. ಕುರ್ಯ ಮತ್ತು ಶಶಿಧರ ಮಾಸ್ತಿಬೈಲು ಅವರಿಗೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಪ್ರಾಯೋಜಕತ್ವದಲ್ಲಿ ಪತ್ರಿಕಾ ದಿನದ ಗೌರವ ನೀಡಲಾಯಿತು. ಮಲಬಾರ್ ಸಂಸ್ಥೆಯ ಹಫೀಝ್ ರೆಹಮಾನ್, ತಂಝೀಮ್ ಶಿರ್ವ ಮತ್ತು ರಾಘವೇಂದ್ರ ನಾಯಕ್ ಇದ್ದರು.

ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಪತ್ರಕರ್ತರ ಗುರುತಿನಚೀಟಿ ವಿತರಿಸಲಾಯಿತು.

ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಅವರನ್ನು ಅಭಿನಂದಿಸಲಾಯಿತು.

ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ದೀಪಕ್ ಜೈನ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!