Monday, July 4, 2022
Home ಸಮಾಚಾರ ಸಂಘಸಂಗತಿ ಕೊರಗರ ಮನೆಯ ಬೆಳಕಿಲ್ಲದ ಕೊರಗು ನಿವಾರಣೆ

ಕೊರಗರ ಮನೆಯ ಬೆಳಕಿಲ್ಲದ ಕೊರಗು ನಿವಾರಣೆ

ಉಡುಪಿ: ನಗರದ ಬಡವರು, ದೀನದಲಿತರಿಗೆ ಅದರಲ್ಲೂ ವಿಶೇಷವಾಗಿ ಕೊರಗ ಸಮುದಾಯದ ವಿದ್ಯುತ್ ಇಲ್ಲದ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವ ಮೂಲಕ ಕೊರಗರ ಮನೆಯ ಬೆಳಕಿಲ್ಲದ ಕೊರಗು ನಿವಾರಿಸಿದ ಕೀರ್ತಿ ಆಸರೆ ಚಾರಿಟೇಬಲ್ ಟ್ರಸ್ಟ್ ಗೆ ಸಲ್ಲುತ್ತದೆ ಎಂದು ಉಡುಪಿ ನಗರಸಭೆ ಪೌರಾಯುಕ್ತ ಡಾ| ಉದಯ ಶೆಟ್ಟಿ ಹೇಳಿದರು.

ಈಚೆಗೆ ಇಲ್ಲಿನ ಪುತ್ತೂರು ಸುಬ್ರಹ್ಮಣ್ಯನಗರ ವಾರ್ಡಿನ ಕುದ್ಮಲ್ ರಂಗರಾವ್ ನಗರ ನಿವಾಸಿ, ಕೊರಗ ಸಮುದಾಯದ ಕುಡ್ಪ ಕೊರಗ ಮನೆಗೆ ಕಡಿಯಾಳಿ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾದ ಉಚಿತ ವಿದ್ಯುತ್ ಸಂಪರ್ಕ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿದರು.

ಇಂಥ ಮನೆಗಳಿಗೆ ನಗರಸಭೆಯಿಂದ ವಿದ್ಯುತ್ ಸಂಪರ್ಕಕ್ಕಾಗಿ ನಿರಾಕ್ಷೇಪಣಾ ಪತ್ರ ಕೊಡಲು ಮತ್ತು ದಾಖಲಾತಿ ಸರಿಪಡಿಸಲು ಸಹಕರಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ವಠಾರ ಹಲವಾರು ಮಂದಿಗೆ ನೀರುಣಿಸುವ ಪಾಳುಬಾವಿಯನ್ನು ನಗರಸಭೆ ವತಿಯಿಂದ ದುರಸ್ತಿಗೊಳಿಸುವುದಾಗಿ ಭರವಸೆ ನೀಡಿದರು.

ಉಡುಪಿ ಮೂಲದ ಪ್ರಸ್ತುತ ಅಮೆರಿಕ ನಿವಾಸಿ ಕಡಿಯಾಳಿ ಲಕ್ಷ್ಮೀನಾರಾಯಣ ಉಪಾಧ್ಯಾಯ ಮತ್ತು ಸ್ಮೃತಿ ದಂಪತಿ ಪುತ್ರಿ, ತನ್ನ 9ನೇ ಹುಟ್ಟುಹಬ್ಬ ಆಚರಿಸುತ್ತಿರುವ ಅಂಜನಾ ಉಪಾಧ್ಯಾಯ ಮತ್ತು ರಾಮದಾಸ್ ಮತ್ತು ಜ್ಯೋತಿ ಐತಾಳ್ ಆತ್ರಾಡಿ ಪುತ್ರಿ ತನ್ನ 16ನೇ ಹುಟ್ಟುಹಬ್ಬ ಆಚರಿಸುತ್ತಿರುವ ರಶ್ಮಿ ಐತಾಳ್ ಈ ಮನೆಯ ವಿದ್ಯುತ್ ವೆಚ್ಚವನ್ನು ಜಂಟಿಯಾಗಿ ನೀಡಿ, ನೆರೆದವರಿಗೆ ಸಿಹಿತಿಂಡಿ ವಿತರಿಸಿದರು.

ಸುಬ್ರಮಣ್ಯನಗರ ವಾರ್ಡ್ ನಗರಸಭಾ ಸದಸ್ಯೆ ಜಯಂತಿ ಪೂಜಾರಿ, ನಾಮನಿರ್ದೇಶಿತ ನಗರಸಭಾ ಸದಸ್ಯೆ ಸುಬೇದ ಇದ್ದರು.

ಅಸರೆ ಚಾರಿಟೇಬಲ್ ಟ್ರಸ್ಟ್ನ ಮಲ್ಪೆ ವಲ್ಲಭ ಭಟ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯರಾದ ಸತೀಶ್ ಪೂಜಾರಿ, ಜಯಂತ ಪೂಜಾರಿ, ಯತೀಶ್ ಶೆಣೈ, ಅನಂತಮೂರ್ತಿ ಭಟ್, ಲಕ್ಷ್ಮಿ ಮೊದಲಾದವರಿದ್ದರು.

ಆಸರೆ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ನಿರೂಪಿಸಿದರು. ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ರಾಕೇಶ್ ಜೋಗಿ ವಂದಿಸಿದರು.

ಮನೆಯ ವಿದ್ಯುಚ್ಛಕ್ತಿ ನಿರ್ವಹಣೆಯನ್ನು ಕಡಿಯಾಳಿ ಮಹಿಷಮರ್ದಿನಿ ಎಲೆಕ್ಟ್ರಿಕಲ್ಸ್ನ ಅಶ್ವತ್ಥ ದೇವಾಡಿಗ ನಿರ್ವಹಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!