Monday, July 4, 2022
Home ಸಮಾಚಾರ ಸಂಘಸಂಗತಿ ಯೋಜನಾಬದ್ಧ ಕಾರ್ಯ ಸಮಾಜಕ್ಕೆ ಮಾದರಿ

ಯೋಜನಾಬದ್ಧ ಕಾರ್ಯ ಸಮಾಜಕ್ಕೆ ಮಾದರಿ

ಮೂಲ್ಕಿ: ಸೂಕ್ತ ಯೋಚನೆ ಯೋಜನಾಬದ್ಧ ಚಟುವಟಿಕೆ, ಕುಂದದ ಉತ್ಸಾಹ, ಸೇವಾ ಮನೋಭಾವ, ಸಮರ್ಥ ನಾಯಕತ್ವ ಇತ್ಯಾದಿ ಅನೇಕ ಅಂಶಗಳ ಪ್ರತಿರೂಪವೇ ಪುನರೂರು ಪ್ರತಿಷ್ಠಾನ ಎಂಬ ಸಂಸ್ಥೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಕಳೆದ ನಾಲ್ಕು ವರ್ಷದಿಂದ ಹಲವಾರು ಸಾಮಾಜಿಕ ಚಟುವಟಿಕೆ ನಡೆಸುತ್ತ ಬಂದಿರುವ ಈ ಸಂಸ್ಥೆಯ ಕಾರ್ಯ ಪ್ರಶಂಶನೀಯ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ವೇ. ಮೂ ರಾಜೇಶ ಆಸ್ರಣ್ಣ ಹೇಳಿದರು.

ಪುನರೂರು ಪ್ರತಿಷ್ಠಾನ ಆಶ್ರಯದಲ್ಲಿ ಭಾನುವಾರ ನಡೆದ ಪುನರೂರು ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಭ್ಯಾಗತರಾಗಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆನುವಂಶಿಕ ಅರ್ಚಕ ವೇ. ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ, ಪುನರೂರು ಪ್ರತಿಷ್ಠಾನ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಜೊತೆಗೆ ಸಮಾಜದ ಎಲ್ಲಾ ವರ್ಗದ ಜನರಿಗೆ ಬೇಕಾದ ಹಲವಾರು ಕಾರ್ಯಕ್ರಮ ರೂಪಿಸುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹಾಗೂ ಪುನರೂರು ಪ್ರತಿಷ್ಠಾನ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಶುಭ ಹಾರೈಸಿದರು.

ಬಜ್ಪೆ ಥಂಡರ್ ಗೈಸ್ ಫೌಂಡೇಶನ್ ಅಧ್ಯಕ್ಷ ಸೂರಜ್ ಶೆಟ್ಟಿ ಬಜ್ಪೆ, ಕಿನ್ನಿಗೋಳಿ ಯಕ್ಷ ಲಹರಿ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ, ದ. ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೊಡೆತ್ತೂರು ಭುವನಾಭಿರಾಮ ಉಡುಪ, ಪುನರೂರು ಶ್ರೀ ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಪುನರೂರು ಪ್ರತಿಷ್ಠಾನ ಗೌರವಾಧ್ಯಕ್ಷೆ ಎಚ್. ಕೆ. ಉಷಾರಾಣಿ, ಮೂಲ್ಕಿ ಜನವಿಕಾಸ ಸಮಿತಿ ಅಧ್ಯಕ್ಷ ಜೀವನ್ ಶೆಟ್ಟಿ, ಪುನರೂರು ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಮೂಲ್ಕಿ ಹೋಬಳಿಯ 25 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರತಿಭಾ ಸೌರಭದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜನವಿಕಾಸ ಸಮಿತಿ ಪ್ರಧಾನ ಕಾರ್ಯದರ್ಶಿ ಶೋಭಾ ರಾವ್ ವಂದಿಸಿದರು. ಜಿತೇಂದ್ರ ವಿ. ರಾವ್ ಹೆಜಮಾಡಿ ನಿರೂಪಿಸಿದರು.

ಬಳಿಕ ಬಜ್ಪೆ ಥಂಡರ್ ಗೈಸ್ ಫೌಂಡೇಶನ್ ಕಲಾವಿದರಿಂದ ಕ್ಷೇತ್ರ ಪುರಾಣ ಮಂಜರಿ ನೃತ್ಯ ರೂಪಕ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!