ಶಿಕ್ಷಕರು ಜೀವನದ ಭದ್ರ ಬುನಾದಿ ಹಾಕಿಕೊಡುವವರು
(ಸುದ್ದಿಕಿರಣ ವರದಿ)
ಮೂಲ್ಕಿ: ಶಿಕ್ಷಕರು ಯಾವತ್ತೂ ನಮಗೆ ಮಾರ್ಗದರ್ಶನ ಮಾಡುವವರು. ನಮಗೆ ಸ್ಫೂರ್ತಿ ತುಂಬಿ, ನಮ್ಮನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವವರು. ಶಿಕ್ಷಕರು ನಮ್ಮ ಜೀವನದ ಭದ್ರ ಬುನಾದಿ ಹಾಕಿಕೊಡುವವರು ಎಂದು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ವಿಶ್ವೇಶ ಭಟ್ ಹೇಳಿದರು.
ಪುನರೂರು ಪ್ರತಿಷ್ಠಾನ ಆಶ್ರಯದಲ್ಲಿ ಜನವಿಕಾಸ ಸಮಿತಿ ಮೂಲ್ಕಿ ಸಹಕಾರದಲ್ಲಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಭಾನುವಾರ ನಡೆದ ಶಿಕ್ಷಕ ಸಪರ್ಯಾ ಕಾರ್ಯಕ್ರಮದಲ್ಲಿ ಸಂಸ್ಕೃತ ಉಪನ್ಯಾಸಕರನ್ನು ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮೂಲ್ಕಿ ಹೋಬಳಿಯ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕರಾದ ಡಾ| ನಾಗರಾಜ್ ಬಿ. (ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು, ಕಟೀಲು), ಶ್ರೀವತ್ಸ ಎಸ್. ಆರ್. (ಶ್ರೀ ದುರ್ಗಾಪರಮೇಶ್ವರೀ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಕಟೀಲು), ಜಯಲಕ್ಷ್ಮೀ (ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ, ಮೂಲ್ಕಿ), ವಿದ್ಯಾಲಕ್ಷ್ಮೀ (ವಿಜಯ ಪದವಿ ಪೂರ್ವ ಕಾಲೇಜು, ಮೂಲ್ಕಿ) ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಪುನರೂರು ಪ್ರತಿಷ್ಠಾನ ಗೌರವ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ ಜಿ. ಅಮೀನ್ ಅಭ್ಯಾಗತರಾಗಿದ್ದರು.
ಪುನರೂರು ಪ್ರತಿಷ್ಠಾನ ಗೌರವಾಧ್ಯಕ್ಷೆ ಎಚ್. ಕೆ. ಉಷಾರಾಣಿ, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನವಿಕಾಸ ಸಮಿತಿ ಮೂಲ್ಕಿ ಅಧ್ಯಕ್ಷರಾದ ಪ್ರಾಣೇಶ್ ಭಟ್ ದೇಂದಡ್ಕ ಹಾಗೂ ಸಮಿತಿ ಸದಸ್ಯರು ಇದ್ದರು.
ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಸ್ತಾವನೆಗೈದು, ಸ್ವಾಗತಿಸಿದರು. ದಾಮೋದರ್ ಶೆಟ್ಟಿ ಕೊಡೆತ್ತೂರು ವಂದಿಸಿದರು. ಜಿತೇಂದ್ರ ವಿ. ರಾವ್ ಹೆಜಮಾಡಿ ನಿರೂಪಿಸಿದರು.