ಉಡುಪಿ: ರಾಜ್ಯದಲ್ಲಿ ಮುಂಗಾರು ಮಳೆಯಿಂದಾಗಿ ಯಾವುದೇ ಮಾನವ ಮತ್ತು ಜಾನುವಾರುಗಳ ಜೀವ ಹಾನಿಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚಿಸಿದರು.
ಮಂಗಳವಾರ ವೀಡಿಯೊ ಸಂವಾದದ ಮೂಲಕ ರಾಜ್ಯದಲ್ಲಿ ಅಧಿಕ ಮಳೆಯಾಗುತ್ತಿರುವ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದರು.
ಮುಂಗಾರು ಮಳೆ ವಿಕೋಪ ಸಂದರ್ಭದಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ. ಯಾವುದೇ ಜೀವ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ.
ರಾಜ್ಯದಲ್ಲಿ 4 ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್ ತಂಡ ವಿಕೋಪ ನಿರ್ವಹಣೆಗೆ ನೆರವು ನೀಡಲು ಸಿದ್ಧವಾಗಿದ್ದು, ಅಗತ್ಯವಿದ್ದಲ್ಲಿ ಕೂಡಲೇ ನೆರವು ಪಡೆಯಿರಿ ಎಂದ ಸಿಎಂ ಯಡಿಯೂರಪ್ಪ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿಕೋಪ ತಡೆಗೆ ಅಗತ್ಯವಿರುವ ಸುರಕ್ಷತಾ ಉಪಕರಣ ಹಾಗೂ ಕಾಳಜಿ ಕೇಂದ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ 24*7 ಕಂಟ್ರೋಲ್ ರೂಂ ತೆರೆದು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣದಲ್ಲಿ ಸ್ಪಂದಿಸಿ, ಜನರ ಸ್ಥಳಾಂತರ ಸಂದರ್ಭದಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿ ಎಂದರು.
ಅತಿವೃಷ್ಠಿಯಿಂದ ಹಾನಿಗೊಳಗಾದವರಿಗೆ ಶೀಘ್ರದಲ್ಲಿ ಪರಿಹಾರ ವಿತರಿಸಿ. ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಇರಲಿ. ವಿಕೋಪ ನಿರ್ವಹಣೆಗೆ ರಾಜ್ಯದಲ್ಲಿ ಯಾವುದೇ ಹಣಕಾಸಿನ ಕೊರತೆ ಇಲ್ಲ. ವಿಕೋಪ ಸಂದರ್ಭದಲ್ಲಿ ಎಲ್ಲಾ ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳ ನೆರವು ಪಡೆಯಿರಿ ಹಾಗೂ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಅಗತ್ಯ ಸಿದ್ಧತೆ
ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ವಿಕೋಪ ನಿರ್ವಹಣೆಗೆ ಈಗಾಗಲೇ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಯಾವುದೇ ಸಂದರ್ಭ ಎದುರಿಸಲು ಸಿದ್ದರಾಗಿದ್ದೇವೆ.
ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳಲ್ಲಿ ವಿಪತ್ತು ನಿರ್ವಹಣೆ ಯೋಜನೆ ಸಿದ್ಧಪಡಿಸಲಾಗಿದೆ. ಮಂಗಳೂರಿನಲ್ಲಿರುವ ಎನ್.ಡಿ.ಆರ್.ಎಫ್. ತಂಡದೊಂದಿಗೆ ಸಂಪರ್ಕದಲ್ಲಿದ್ದೇವೆ. ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಅಗತ್ಯವಿರುವ ಗ್ರಾ. ಪಂ.ಗಳಿಗೆ ಫೈಬರ್ ದೋಣಿ ನೀಡಲಾಗಿದೆ. 24*7 ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಾಗಿದೆ. ಎಲ್ಲಾ ಅಧಿಕಾರಿಗಳಿಗೆ ಪ್ರಾಕೃತಿಕ ವಿಕೋಪ ತಡೆಯಲು ಸನ್ನದ್ಧರಿರುವಂತೆ ಸೂಚನೆ ನೀಡಲಾಗಿದೆ ಎಂದರು.
ಹಣದ ಕೊರತೆ ಇಲ್ಲ
ಜಿಲ್ಲೆಯಲ್ಲಿ ಮಾನ್ಸೂನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಇದುವರೆಗೆ 1 ಜೀವ ಹಾನಿ, 5 ಮನೆಗಳು ಪೂರ್ಣ ನಾಶ, 196 ಮನೆಗಳು ಭಾಗಶಃ ಹಾನಿ, 14 ಕೊಟ್ಟಿಗೆಗಳಿಗೆ ಹಾನಿಯಾಗಿದ್ದು, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 5.90 ಕೋ. ರೂ.ಗಳ ಹಣ ಇದ್ದು, ಹಣದ ಕೊರತೆ ಇಲ್ಲ ಎಂದರು.
ವೀಡಿಯೊ ಸಂವಾದದಲ್ಲಿ ಜಿ. ಪಂ. ಸಿಇಓ ಡಾ. ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್.ಪಿ. ವಿಷ್ಣುವರ್ಧನ್, ನಕ್ಸಲ್ ನಿಗ್ರಹ ಪಡೆ ಎಸ್.ಪಿ. ಅಖಿಲ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.