ಉಡುಪಿ, ಜು. 10, (ಸುದ್ದಿಕಿರಣ ವರದಿ): ಕೇಂದ್ರ ಸರ್ಕಾರ ನೂತನವಾಗಿ ರಚಿಸಿದ ಸಹಕಾರ ಸಚಿವಾಲಯದಿಂದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ. ಸಹಕಾರಿ ರಂಗ ಪಾರದರ್ಶಕವಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ್ ಎಸ್. ಕೆ. ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 8.5 ಲಕ್ಷ ಸಹಕಾರ ಸಂಸ್ಥೆಗಳಿದ್ದು, 30 ಕೋಟಿಗೂ ಅಧಿಕ ಸದಸ್ಯರಿದ್ದಾರೆ. ದೇಶಾದ್ಯಂತ 6.30 ಲಕ್ಷ ಗ್ರಾಮಗಳಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿದೆ. ಈ ಕ್ಷೇತ್ರ ಇಷ್ಟೊಂದು ಬೃಹತ್ತಾಗಿ ಬೆಳೆದಿದ್ದರೂ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಚಿವಾಲಯ ಇರಲಿಲ್ಲ ಎಂದರು.
ಸಹಕಾರ ಭಾರತಿ ಮತ್ತು ರಾಜ್ಯ ಸೌಹಾರ್ದ ಸಹಕಾರಿ ಸಂಸ್ಥೆ ಅನೇಕ ಬಾರಿ ಪ್ರಧಾನಿಗೆ ಮನವಿ ಸಲ್ಲಿಸಿದ್ದು, ಸರ್ಕಾರ ಈ ಬಾರಿ ಮನವಿಗೆ ಸ್ಪಂದಿಸಿದೆ. ಸಹಕಾರಿ ಆಂದೋಲನ ಬಲಪಡಿಸಲು ಪ್ರತ್ಯೇಕ ಆಡಳಿತ ಕಾನೂನು ಮತ್ತು ನೀತಿ ಚೌಕಟ್ಟು ಒದಗಿಸುತ್ತದೆ. ಏಕರೂಪದ ಕಾನೂನು ಜಾರಿಯಾಗಲಿದೆ. ಭಾರತ ಸಹಕಾರಿ ಕ್ಷೇತ್ರದ ತೊಟ್ಟಿಲು ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ ಎಂದರು.
ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ವ್ಯಕ್ತಿಗಳು ಅಧಿಕಾರ ಪಡೆಯುವುದನ್ನು ಆರ್.ಬಿ.ಐ ಇತ್ತೀಚೆಗೆ ನಿಷೇಧಿಸಿದ್ದು 1,550 ಕೋ-ಆಪರೇಟಿವ್ ಬ್ಯಾಂಕ್ ಗಳನ್ನು ತನ್ನ ವ್ಯಾಪ್ತಿಗೊಳಪಡಿಸಿದೆ. ಕ್ರೆಡಿಟ್ ಸೊಸೈಟಿಗಳು ನಬಾರ್ಡ್ ವ್ಯಾಪ್ತಿಗೆ ಬರಲಿವೆ. ಸಚಿವಾಲಯದಿಂದ ಜಿ.ಎಸ್.ಟಿ ಸಮಸ್ಯೆ ಶೀಘ್ರ ನಿವಾರಣೆಯಾಗುವ ವಿಶ್ವಾಸವಿದೆ ಎಂದರು.
ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ, ಪ್ರತೀ ಗ್ರಾಮಗಳಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾಗಬೇಕು ಎಂದರು.
ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಜಿಲ್ಲಾಧ್ಯಕ್ಷ ಭಾಸ್ಕರ ಕಾಮತ್, ಅಭಿವೃದ್ಧಿ ಅಧಿಕಾರಿ ವಿಜಯ ಡಿ. ಎಸ್., ಸಹಕಾರ ಭಾರತಿ ಕಾರ್ಯದರ್ಶಿ ಪ್ರಶಾಂತ್ ಇದ್ದರು