Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರವೀಣ್ ನೆಟ್ಟಾರ್ ಗೆ ಬಿಜೆಪಿ ಅಶ್ರುತರ್ಪಣ

ಪ್ರವೀಣ್ ನೆಟ್ಟಾರ್ ಗೆ ಬಿಜೆಪಿ ಅಶ್ರುತರ್ಪಣ

ಸುದ್ದಿಕಿರಣ ವರದಿ
ಶನಿವಾರ, ಜುಲೈ 30

ಪ್ರವೀಣ್ ನೆಟ್ಟಾರ್ ಗೆ ಬಿಜೆಪಿ ಅಶ್ರುತರ್ಪಣ
ಉಡುಪಿ: ಈಚೆಗೆ ದಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರಿಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಜಿಹಾದಿಗಳಿಂದ ಹಿಂದೂ ಸಂಘಟನೆಗಳ ಶಕ್ತಿ ಕುಗ್ಗಿಸುವುದು ಅಸಾಧ್ಯ. ಜಿಹಾದಿಗಳಿಂದ ಬಿಜೆಪಿಗೆ ನೀಡುವ ಬೆದರಿಕೆ ಹೊಸತಲ್ಲ. ಅದರ ಶಕ್ತಿ ಕುಂದಿಸಬೇಕೆಂದು ಜಿಹಾದಿಗಳು ಬಯಸಿದ್ದರೆ ಅದು ಕನಸು ಎಂದರು.

ಸುಳ್ಯದ ಬೆಳ್ಳಾರೆಯಲ್ಲಿ ಜಿಹಾದಿಗಳಿಂದ ಪ್ರವೀಣ್ ನೆಟ್ಟಾರು ಕಗ್ಗೊಲೆಯಾಗಿದೆ. ಕೋಳಿ ಮಾರಾಟ ಅಂಗಡಿ ಇಟ್ಟುಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದ ಪ್ರವೀಣನ ಕೊಲೆ ಖಂಡನೀಯ ಎಂದರು.

ಸರಕಾರ ಹರ್ಷ, ಪ್ರವೀಣ್ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಎನ್.ಐ.ಎ.ಗೆ ವಹಿಸಿದೆ. ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡುವುದು ನೆಪ ಮಾತ್ರ. ಆದರೆ, ಅದರ ಹಿಂದಿರುವ ಮತಾಂಧರ ಹುನ್ನಾರ ತಿಳಿಯಬೇಕಿದೆ ಎಂದರು.

ಬಿಜೆಪಿಗೆ ಇದು ಪರೀಕ್ಷೆಯ ಕಾಲಘಟ್ಟ. ಕಾರ್ಯಕರ್ತರು ಮನನೊಂದು ರಾಜೀನಾಮೆ ಕೊಡುವುದು ಸೂಕ್ತವಲ್ಲ. ನಾವೆಲ್ಲಾ ಒಟ್ಟಾಗಿ ಇಂಥ ಸಂದರ್ಭ ಎದುರಿಸಬೇಕು ಎಂದು ಸುರೇಶ ನಾಯಕ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಪ್ರವೀಣ್ ನೆಟ್ಟಾರು ಮನೆಗೆ ಶೀಘ್ರ ಉಡುಪಿ ಜಿಲ್ಲಾ ಬಿಜೆಪಿ ತಂಡ ಭೇಟಿ ನೀಡಿ, ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.

ಶಾಸಕ ರಘುಪತಿ ಭಟ್ ಮಾತನಾಡಿ ಎಸ್.ಡಿ.ಪಿ.ಐ, ಪಿಎಫ್.ಐ ಸಂಘಟನೆಗಳನ್ನು ಮುಸ್ಲಿಂ ಸಮಾಜ ದೂರವಿಟ್ಟಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಹಿಜಾಬ್ ವಿವಾದದಲ್ಲಿ ಕೈಜೋಡಿಸಿದ ಭಯೋತ್ಪಾದಕ ಜಿಹಾದಿ ಸಂಘಟನೆಗಳು, ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಕೈಜೋಡಿಸಿವೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಮೂಸೂರು ಎಲೆಕ್ಟ್ರಿಕಲ್ ಕಂಪೆನಿ ಅಧ್ಯಕ್ಷ ಹಾಗೂ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯೆ ಗೀತಾಂಜಲಿ ಸುವರ್ಣ, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಹೆರ್ಗ ದಿನಕರ ಶೆಟ್ಟಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ವಕ್ತಾರ ಶಿವಕುಮಾರ್ ಅಂಬಲಪಾಡಿ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!