Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಫಾ| ಸ್ಟ್ಯಾನ್ ಸ್ವಾಮಿ ಸಾವಿಗೆ ಕೇಂದ್ರ ಸರ್ಕಾರ ಪರೋಕ್ಷ ಕಾರಣ

ಫಾ| ಸ್ಟ್ಯಾನ್ ಸ್ವಾಮಿ ಸಾವಿಗೆ ಕೇಂದ್ರ ಸರ್ಕಾರ ಪರೋಕ್ಷ ಕಾರಣ

ಉಡುಪಿ: ಸಾಮಾಜಿಕ ಹೋರಾಟಗಾರ ಫಾ| ಸ್ಟ್ಯಾನ್ ಸ್ವಾಮಿ ಸಾವಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರೋಕ್ಷ ಕಾರಣ ಎಂದು ಇಲ್ಲಿನ ಸಹಬಾಳ್ವೆ ಸಂಚಾಲಕ ಅಮೃತ್ ಶೆಣೈ ಆರೋಪಿಸಿದರು.

ಸೋಮವಾರ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಸಹಬಾಳ್ವೆ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಸಾಮಾಜಿಕ ಹೋರಾಟಗಾರ ಫಾ| ಸ್ಟ್ಯಾನ್ ಸ್ವಾಮಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಸಂವಿಧಾನ ಶೇಷ್ಠ ಸಂವಿಧಾನ ಎಂದು ಬಣ್ಣಿಸುತ್ತಿದ್ದರೂ ಅದು ಭಾರತೀಯ ಪಾಲಿಗೆ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆ. ಸ್ಟ್ಯಾನ್ ಸ್ವಾಮಿ ಅವರನ್ನು ಜೈಲಿನಲ್ಲಿ ಅಧಿಕಾರಿಗಳು ಹೀನಾಯವಾಗಿ ನಡೆಸಿಕೊಂಡಿದ್ದರಲ್ಲದೆ, 84ರ ಹರೆಯದ ಅವರಿಗೆ ಜೈಲಿನಲ್ಲಿ ಅಪಾರ ಕಿರುಕುಳ ನೀಡಲಾಯಿತು. ಕನಿಷ್ಟ ಆಹಾರ ನೀಡದೆ ಪಾರ್ಕಿನ್ಸನ್ ಕಾಯಿಲೆಯಿಂದ ನರಳುತ್ತಿದ್ದ ಅವರು ತಾವೇ ನೀರೂ ಕುಡಿಯಲಾಗದ ಕಾರಣ ನೀರು ಕುಡಿಯಲು ಸಿಪ್ಪರ್ ಪೈಪ್ ನೀಡಲು ಜೈಲು ಸಿಬ್ಬಂದಿ ನಿರಾಕರಿಸಿತು. ಅನೇಕ ದಿನಗಳ ನಂತರ ಕೋರ್ಟ್ ಆದೇಶದ ಮೇರೆಗೆ ಸಿಪ್ಪರ್ ಪೈಪ್ ಕೊಡಲಾಯಿತು. ಕನಿಷ್ಟ ಔಷಧೋಪಚಾರದಿಂದ ವಂಚಿತರಾದರು, ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಹೀಗೆ ಅವರನ್ನು ಅತ್ಯಂತ ಅಮಾನವೀಯಾವಾಗಿ ನಡೆಸಿಕೊಳ್ಳಲಾಯಿತು ಎಂದರು.

ಸಾಮಾಜಿಕ ಹೋರಾಟಗಾರ ಪ್ರೊ. ಫಣಿರಾಜ್ ಮಾತನಾಡಿ, ಸ್ಟ್ಯಾನ್ ಸ್ವಾಮಿ ಓರ್ವ ಸಂತ. ಅಸಮಾನತೆ ಸಹಿಸದೆ ಪ್ರಭುತ್ವದ ಜೊತೆ ರಾಜಿ ಮಾಡಿಕೊಳ್ಳದೆ, ನಿಷ್ಠುರತೆಯಿಂದ ಆದಿವಾಸಿಗಳ ಸಾಮಾಜಿಕ ನ್ಯಾಯಕ್ಕಾಗಿ ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸಿದವರು. ಅವರ ಮೇಲೆ ಸುಳ್ಳು ಕೇಸು ದಾಖಲಿಸಿ ಭೀಮ್ ಕೊರೆಗಾಂವ್ ಪ್ರಕರಣಕ್ಕೆ ಹೊಂದಿಸಿಕೊಂಡು ಕಾನೂನುಬಾಹಿರವಾಗಿ 2020ರ ಆ. 8ರಂದು ಬಂಧಿಸಿ ಅವರನ್ನು ಮುಂಬೈ ತಳೋಜ ಜೈಲಿಗಟ್ಟಲಾಯಿತು.

ಪೊಲೀಸರು ಮತ್ತು ಎನ್.ಐ.ಎ ಅಧಿಕಾರಿಗಳು ಕರಾಳ ಕಾನೂನು ಯುಎಪಿಎ ಕಾಯ್ದೆಯಡಿ ಸ್ಟ್ಯಾನ್ ಸ್ವಾಮಿಯನ್ನು ಬಂಧಿಸಿದ್ದರು. ಓರ್ವ ಅಮಾಯಕ ಹೋರಾಟಗಾರನನ್ನು ನಮ್ಮ ದೇಶದ ಆಡಳಿತ ಅಮಾನವೀಯವಾಗಿ ನಡೆಸಿಕೊಂಡಿದ್ದಲ್ಲದೆ ಅವರ ಸಾವಿಗೆ ಕಾರಣವಾಗಿದೆ. ಅವರ ಸಾವಿನ ಜವಾಬ್ದಾರಿ ಕೇಂದ್ರ ಸರ್ಕಾರವೇ ಹೊರಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಥೊಲಿಕ್ ಸಭಾ ಅಧ್ಯಕ್ಷೆ ಮೇರಿ ಡಿ’ಸೋಜಾ, ಕಾರ್ಯದರ್ಶಿ ಗ್ರೆಗರಿ ಪಿ. ಕ.ೆ ಡಿ’ಸೋಜಾ, ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳಾದ ವಂ| ಚೇತನ್ ಲೋಬೊ, ವಂ| ರೊಯ್ ಸ್ಟನ್ ಫೆರ್ನಾಂಡಿಸ್ ಮತ್ತು ವಂ| ವಿಲಿಯಂ ಮಾರ್ಟಿಸ್, ಮುಖಂಡರಾದ ಸುಂದರ ಮಾಸ್ತರ್, ವೆರೋನಿಕಾ ಕರ್ನೇಲಿಯೊ, ವಾಲ್ಟರ್ ಸಿರಿಲ್ ಪಿಂಟೊ, ರೋಶನಿ ಒಲಿವರ್, ಶಾಂತಿ ಪಿರೇರ, ರಮೇಶ ಕಾಂಚನ್, ಯತೀಶ್ ಕರ್ಕೇರ, ಯಾಸಿನ್ ಮಲ್ಪೆ, ಹುಸೇನ್ ಕೋಡಿಬೆಂಗ್ರೆ, ಶ್ಯಾಮ್ ರಾಜ್ ಬಿರ್ತಿ, ಪ್ರಶಾಂತ್ ಜತ್ತನ್ನ ಮೊದಲಾದವರು ಭಾಗವಹಿಸಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!