Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಬಾಣಂತಿಯರಿಗೆ ಚಿಕಿತ್ಸೆ ನಿರಾಕರಣೆ: ಕಾಂಗ್ರೆಸ್ ಪ್ರತಿಭಟನೆ

ಬಾಣಂತಿಯರಿಗೆ ಚಿಕಿತ್ಸೆ ನಿರಾಕರಣೆ: ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ನಗರದ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ಬಿ.ಆರ್.ಎಸ್.)ಯಲ್ಲಿ ಬಾಣಂತಿಯರಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೊ, ಅದೆಷ್ಟೋ ಮಹಿಳೆಯರು ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನೇ ಅವಲಂಬಿಸಿದ್ದು ಕೊರೊನಾ ಸಮಯದಲ್ಲಿ ಅವರಿಗೆ ಚಿಕಿತ್ಸೆ ನಿರಾಕರಿಸಿ ಸಮಸ್ಯೆಯುಂಟುಮಾಡುವುದು ಸರಿಯಲ್ಲ. ನೂತನ ಮುಖ್ಯಮಂತ್ರಿ ಬೊಮ್ಮಾಯಿ ಈ ಆಸ್ಪತ್ರೆಯನ್ನು ಸೂಕ್ತ ರೀತಿಯಲ್ಲಿ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಹಿಂದಿದ್ದ ಸರಕಾರಿ ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಹಿಂದಿನ ಸಿದ್ದರಾಮಯ್ಯ ಸರಕಾರ, ಉತ್ತಮ ಸೇವೆ ಲಭಿಸಬೇಕು ಎಂಬ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಆಸ್ಪತ್ರೆ ನಿರ್ಮಿಸಿದ್ದು ಇದುವರೆಗೆ ಉತ್ತಮ ಸೇವೆ ನೀಡಲಾಗುತ್ತಿತ್ತು. ಈಗಾಗಲೇ ಆಸ್ಪತ್ರೆಯಲ್ಲಿ 10 ಸಾವಿರ ಹೆರಿಗೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು ಎಂದು ಸ್ಮರಿಸಿದರು.

ಉಡುಪಿ ಮಾತ್ರವಲ್ಲದೇ, ಇತರ ಜಿಲ್ಲೆಗಳ ಬಡ ಮಹಿಳೆಯರು ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಈ ಸಂದರ್ಭದಲ್ಲಿ ಸರಕಾರ ಸಹಾಯ ಮಾಡಬೇಕು. ಆಸ್ಪತ್ರೆಯ 300 ಮಂದಿ ಸಿಬಂದಿಗೆ ಸಂಬಳ ಸಿಕ್ಕಿಲ್ಲ. ಲಾಂಡ್ರಿಗೆ ಹಣ ಪಾವತಿಯಾಗಿಲ್ಲ ಎಂಬ ಮಾಹಿತಿ ಇದೆ. ಈ ಎಲ್ಲ ಸಮಸ್ಯೆ ನಿವಾರಿಸಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಸರಕಾರವನ್ನು ಆಗ್ರಹಿಸಿದರು.

ಒಂದು ವೇಳೆ ಸರಕಾರ ಬೇಜವಾಬ್ದಾರಿತನ ಮುಂದುವರಿಸಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಬಿ. ಆರ್. ಶೆಟ್ಟಿ ಆರ್ಥಿಕ ಮುಗ್ಗಟ್ಟು ಕಾರಣ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಸರಕಾರ ಕೋಟ್ಯಾಂತರ ರೂ. ಹಣವನ್ನು ಬೇರೆ ಉದ್ದೇಶಕ್ಕಾಗಿ ಖರ್ಚು ಮಾಡುತ್ತಿದೆ. ಆದರೆ, ಆರೋಗ್ಯ ಕ್ಷೇತ್ರಕ್ಕೆ ಯಾಕೆ ಖರ್ಚು ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಸರಕಾರಿ ಆಸ್ಪತ್ರೆ ಇರುವುದು ಬಡವರಿಗಾಗಿ. ಅದರಲ್ಲಿ ಉತ್ತಮ ಸೇವೆ ಲಭಿಸುವಂತೆ ಮಾಡಬೇಕಾಗಿರುವುದು ಸರಕಾರದ ಕರ್ತವ್ಯ. ಕೂಡಲೇ ಸರಕಾರ ಆಸ್ಪತ್ರೆಯನ್ನು ಸೂಕ್ತ ರೀತಿಯಲ್ಲಿ ನಡೆಸಬೇಕು ಎಂದು ಆಗ್ರಹಿಸಿದರು.

ನಗರಸಭೆ ಪ್ರತಿಪಕ್ಷ ನಾಯಕ ರಮೇಶ್ ಕಾಂಚನ್, ಹಿಂದಿನ ಸರಕಾರ ಬಡ ಜನರಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿದ್ದು ಅದನ್ನು ನಿರ್ವಹಣೆ ಮಾಡುವಲ್ಲಿ ಈಗಿನ ಸರಕಾರ ವಿಫಲವಾಗಿದೆ. ಹೊಸ ಮುಖ್ಯಮಂತ್ರಿ ಆಸ್ಪತ್ರೆ ನಿರ್ವಹಿಸಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಎಸಿ- ಎಸ್.ಟಿ. ಅಧ್ಯಕ್ಷ ಜಯರಾಮ ನಾಯಕ್, ಕಾಂಗ್ರೆಸ್ ಕಾರ್ಮಿಕ ಘಟಕ ಅಧಕ್ಷ ಗಣೇಶ್ ಪೂಜಾರಿ, ನಾಯಕರಾದ ಅಮೃತ್ ಶೆಣೈ, ಯತೀಶ ಕರ್ಕೇರ, ಸಾಯಿರಾಜ್, ಗಣೇಶ ನೇರ್ಗಿ ಮೊದಲಾದವರಿದ್ದರು.

ಈ ಹಿಂದಿನ ಸಿದ್ಧರಾಮಯ್ಯ ಸರಕಾರ ಅವಧಿಯಲ್ಲಿ ಶಾಸಕ ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ ಆಸ್ಪತ್ರೆಯನ್ನು ಅನಿವಾಸಿ ಭಾರತೀಯ ಉದ್ಯಮಿ ಬಿ. ಆರ್. ಶೆಟ್ಟಿ ಅವರಿಗೆ ವಹಿಸಿಕೊಡಲಾಗಿದ್ದು, ಇದೀಗ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಬಿ. ಆರ್. ಶೆಟ್ಟಿ ಆಸ್ಪತ್ರೆ ನಿರ್ವಹಣೆ ಅಸಾಧ್ಯ ಎಂದು ಕೈಎತ್ತಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!