ಸುದ್ದಿಕಿರಣ ವರದಿ
ಭಾನುವಾರ, ಜೂನ್ 12
ಕ್ರೈಸ್ತರಿಗೆ ರಾಜಕೀಯ ನಾಯಕತ್ವ ಬೇಕು
ಉಡುಪಿ: ಕ್ರೈಸ್ತ ಸಮುದಾಯ ಸಂಕುಚಿತ ಮನೋಭಾವದಿಂದ ಹೊರಬಂದು ತಮ್ಮ ಹಕ್ಕುಗಳಿಗಾಗಿ ಸಂಘಟಿತವಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಸೂಕ್ತ ರಾಜಕೀಯ ನಾಯಕತ್ವದ ಅಗತ್ಯವೂ ಇದೆ ಎಂದು ದಾಯ್ಜಿ ವಲ್ಡ್ ಮೀಡಿಯಾ ನೆಟ್ ವರ್ಕ್ ಪ್ರಧಾನ ಸಂಪಾದಕ ವಾಲ್ಟರ್ ನಂದಳಿಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಇಲ್ಲಿನ ಶೋಕ ಮಾತಾ ಇಗರ್ಜಿ ಸಭಾಂಗಣದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ದಶಮಾನೋತ್ಸವ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಕಥೊಲಿಕ್ ಸಭಾ ಸಂಘಟನೆ ಸಮುದಾಯದ ಅಭಿವೃದ್ಧಿಗೆ ವಿಶೇಷ ಸೇವೆ ನೀಡಿದ್ದು ಸಮುದಾಯ, ರಾಜಕೀಯವಾಗಿ ಇನ್ನಷ್ಟು ಬಲಿಷ್ಠಗೊಳ್ಳಬೇಕಾಗಿದೆ. ಸಮುದಾಯದ ಯುವಜನತೆ ಹೆಚ್ಚು ಹೆಚ್ಚು ಸರಕಾರಿ ಸ್ವಾಮ್ಯದ ಉದ್ಯೋಗದತ್ತ ಒಲವು ತೋರಿಸಬೇಕು ಎಂದರು.
ಅದಕ್ಕೂ ಮುನ್ನ ಕೆಥೊಲಿಕ್ ಸಭಾ ಕೇಂದ್ರಿಯ ಸಮಿತಿಯ 2021- 22ನೇ ಸಾಲಿನ ವಾರ್ಷಿಕ ಸಭೆ ಅಧ್ಯಕ್ಷೆ ಮೇರಿ ಡಿ’ಸೋಜಾ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಗ್ರೆಗರಿ ಪಿಕೆ ಡಿ’ಸೋಜಾ ವಾರ್ಷಿಕ ವರದಿ, ಸಹಕಾರ್ಯದರ್ಶಿ ಒಲಿವಿಯಾ ಡಿಮೆಲ್ಲೊ 2020- 21ರ ವಾರ್ಷಿಕ ಮಹಾಸಭೆ ವರದಿ ಹಾಗೂ ಕೋಶಾಧಿಕಾರಿ ಜೆರಾಲ್ಡ್ ರಾಡ್ರಿಗಸ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಮಾನಸ ಸಂಸ್ಥೆ ವರದಿಯನ್ನು ಅಧ್ಯಕ್ಷ ಹೆನ್ರಿ ಮಿನೇಜಸ್, ಸಶಕ್ತ ಸಮುದಾಯ ಸೇವಾ ಟ್ರಸ್ಟ್ ವರದಿಯನ್ನು ಕಾರ್ಯದರ್ಶಿ ಆಲಿಸ್ ರಾಡ್ರಿಗಸ್ ಮಂಡಿಸಿದರು.
ಈ ಸಂದರ್ಭದಲ್ಲಿ ದಶಮಾನೋತ್ಸವ ವರ್ಷದ ಕಾರ್ಯಚಟುವಟಿಕೆಗಳ ಮುನ್ನೋಟವನ್ನು ಸಂಚಾಲಕ ಆಲ್ವಿನ್ ಕ್ವಾಡ್ರಸ್ ಮತ್ತು ಮಾನಸ ವಿಶೇಷ ಮಕ್ಕಳ ಶಾಲೆಯ ರಜತ ಮಹೋತ್ಸವ ವರ್ಷದ ಕಾರ್ಯಕ್ರಮ ವಿವರವನ್ನು ಸಂಚಾಲಕ ಎಲ್ ರಾಯ್ ಕಿರಣ್ ಕ್ರಾಸ್ತಾ ನೀಡಿದರು.
ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಮಾಜಿ ಅಧ್ಯಕ್ಷ ಡಾ| ಜೆರಾಲ್ಡ್ ಪಿಂಟೊ ವಿರಚಿತ ಭಾರತದ ಸ್ವಾತಂತ್ರ್ಯದ ಚಳವಳಿಯಲ್ಲಿ ಕ್ರೈಸ್ತರ ಕೊಡುಗೆ ಪುಸ್ತಕ ಅನಾವರಣಗೊಳಿಸಲಾಯಿತು.
ಲಕ್ಕಿಡಿಪ್ ಯೋಜನೆಯಲ್ಲಿ ಅತೀ ಹೆಚ್ಚು ಪುಸ್ತಕ ವಿಕ್ರಯಿಸಿದ ಘಟಕ, ವಲಯ ಹಾಗೂ ವೈಯುಕ್ತಿಕ ವ್ಯಕ್ತಿಗಳಿಗೆ ಹಾಗೂ ಆಮ್ಚೊ ಸಂದೇಶ ಪತ್ರಿಕೆಗೆ ಅತೀ ಹೆಚ್ಚು ಜಾಹೀರಾತು ಮತ್ತು ಚಂದಾದಾರನ್ನು ಮಾಡಿದವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ರಾಬರ್ಟ್ ಮಿನೇಜಸ್, ಉಪಾಧ್ಯಕ್ಷ ರೊನಾಲ್ಡ್ ಡಿ’ಆಲ್ಮೆಡಾ, ಸಶಕ್ತ ಸಮುದಾಯ ಸೇವಾ ಟ್ರಸ್ಟ್ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಐದು ವಲಯಗಳ ಅಧ್ಯಕ್ಷರು ಹಾಗೂ 2022- 23ನೇ ಸಾಲಿನ ನೂತನ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರಾದ ಆಲ್ಫೋನ್ಸ್ ಡಿ’ಕೋಸ್ತಾ ಮತ್ತು ವಲೇರಿಯನ್ ಫೆರ್ನಾಂಡಿಸ್ ಇದ್ದರು.
ನಿಯೋಜಿತ ಅಧ್ಯಕ್ಷ ಸಂತೋಷ್ ಕರ್ನೇಲಿಯೋ ಸ್ವಾಗತಿಸಿ, ಕಾರ್ಯದರ್ಶಿ ಗ್ರೆಗರಿ ಪಿಕೆ ಡಿ’ಸೋಜಾ ವಂದಿಸಿದರು. ಕ್ಯಾರಲ್ ಆಳ್ವಾ ನಿರೂಪಿಸಿದರು