ಉಡುಪಿ: ನಾಡಿನ ಪ್ರಸಿದ್ಧ ಶಕ್ತಿಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದಿರುವ ಅವ್ಯವಹಾರ ಕುರಿತು ತನಿಖೆ ನಡೆಸಲು ಧಾರ್ಮಿಕ ದತ್ತಿ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ಅಗತ್ಯ ಕಾಗದ ಪತ್ರಗಳು ಲಭ್ಯವಿಲ್ಲ ಎಂಬ ಸಬೂಬು ಹೇಳುತ್ತಿದೆ ಎಂದು ರಾಜ್ಯ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಸಮನ್ವಯಕಾರ ಮೋಹನ ಗೌಡ ಆರೋಪಿಸಿದ್ದಾರೆ.
ಕೊಲ್ಲೂರು ದೇವಸ್ಥಾನದಲ್ಲಿ ಸುಮಾರು 21.50 ಕೋ. ರೂ. ಅವ್ಯವಹಾರವಾಗಿದೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಮಾಹಿತಿ ಹಕ್ಕು ಕಾಯ್ದೆಯಡಿ ಬಯಲು ಮಾಡಿತ್ತು. ಆ ಕುರಿತ ತನಿಖೆಗೆ ಕಳೆದ ಮಾ. 18ರಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಆಗ್ರಹಿಸಲಾಗಿತ್ತು.
ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜೂ. 15ರಂದು ಮೇಲ್ಮನವಿ ಸಲ್ಲಿಸಲಾಗಿದ್ದು, ಶುಕ್ರವಾರ (ಇಂದು) ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಅರ್ಜಿದಾರರೊಂದಿಗೆ ಝೂಮ್ ಮೀಟಿಂಗ್ ನಡೆಸಿದರು. ದೇವಸ್ಥಾನ ಅವ್ಯವಹಾರದ ಮನವಿ ಬಗ್ಗೆ ವಿಚಾರಿಸಿದಾಗ ಆ ಕುರಿತು ಸಂಬಂಧಿಸಿದ ಯಾವುದೇ ಕಾಗದಪತ್ರ, ಮನವಿ ಪತ್ರ ಇಲ್ಲದಿರುವುದು ಗಮನಕ್ಕೆ ಬಂತು. ವಿಚಾರಣೆಯನ್ನು ಜು. 16ಕ್ಕೆ ಮುಂದೂಡಿರುವುದಾಗಿ ಮೋಹನ ಗೌಡ ತಿಳಿಸಿದ್ದಾರೆ.
ಇಲಾಖೆಯ ಬೇಜವಾಬ್ದಾರಿ ವರ್ತನೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ