Monday, July 4, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ದಲಿತರ ಕೇರಿಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರ ಪಾದಯಾತ್ರೆ

ದಲಿತರ ಕೇರಿಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರ ಪಾದಯಾತ್ರೆ

ಉಡುಪಿ: ದಲಿತ ಕೇರಿಗೆ ಭೇಟಿ ನೀಡುವ ಮೂಲಕ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ಗುರುಗಳ ಮಾರ್ಗ ಅನುಸರಿಸಿದರು. ಇಲ್ಲಿಗೆ ಸಮೀಪದ ಕೊಡವೂರು ಗ್ರಾಮದ ಪಾಳೆಕಟ್ಟೆ ಎಂಬಲ್ಲಿ ಪರಿಶಿಷ್ಟ ಪಂಗಡದವರ ಬಡಾವಣೆಗೆ ಭಾನುವಾರ ಪ್ರಥಮ ಭೇಟಿ ನೀಡಿದರು.

ಹಿಂದೂ ಸಮಾಜದಲ್ಲಿದ್ದ ಅಸೃಶ್ಯತೆ ನಿವಾರಿಸಿ ಹಿಂದೂ ಧರ್ಮವನ್ನು ಸಶಕ್ತಗೊಳಿಸುವ ನಿಮಿತ್ತ ದೇಶದ ಹಲವೆಡೆ ದಲಿತರ ಕಾಲನಿಗಳಿಗೆ ತಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಭೇಟಿ ನೀಡಿ ಕ್ರಾಂತಿ ಮೂಡಿಸಿದ್ದನ್ನು ಸ್ಮರಿಸಿದರು.

ಅಯೋಧ್ಯೆ ರಾಮ ಮಂದಿರ ನಿರ್ಮಾಣವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಭಾರತದಲ್ಲಿ ಹಿಂದೂ ಸಮಾಜವನ್ನು ಸಂಘಟನಾತ್ಮಕವಾಗಿ ಸಶಕ್ತ ಮತ್ತು ಸುದೃಢಗೊಳಿಸಬೇಕಾಗಿದೆ. ಈ ಆಶಯದೊಂದಿಗೆ ಸುಮಾರು 120 ಮನೆ ಹೊಂದಿರುವ ಈ ಬಡಾವಣೆಗೆ ಭೇಟಿ ನೀಡಿ 400ರಷ್ಟು ದಲಿತ ಬಂಧುಗಳಲ್ಲಿ ಸೋದರತೆಯ ವಿಶ್ವಾಸ ತುಂಬಿದರು.

ತಾರಕ ಮಂತ್ರ ದೀಕ್ಷೆ
ಶ್ರೀಗಳು ಆಗಮಿಸುವ ಬಗ್ಗೆ ಸ್ಥಳೀಯ ನಗರಸಭಾ ಸದಸ್ಯ ಮತ್ತು ಸಂಘ ಪರಿವಾರದ ಸ್ವಯಂಸೇವಕ ವಿಜಯ ಪೂಜಾರಿ ಮತ್ತು ಶ್ರೀಗಳ ಆಪ್ತ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಎರಡು ದಿನಗಳ ಮೊದಲೇ ಕಾಲನಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದರು. ಅದರಂತೆ ಉತ್ಸಾಹ ಮತ್ತು ಸಂತೋಷದಿಂದ ನಿವಾಸಿಗಳು ಕಾಲನಿಯ ರಸ್ತೆಗಳನ್ನು ತಳಿರು ತೋರಣದಿಂದ ಸಿಂಗರಿಸಿ ರಂಗೋಲಿ ಹಾಕಿ ಶೃಂಗರಿಸಿದ್ದರು. ಸಾಮೂಹಿಕ ಭಜನೆಯೊಂದಿಗೆ ಶ್ರೀಗಳನ್ನು ಬರಮಾಡಿಕೊಂಡರು.

ಅಲ್ಲಿನ ಮೂರು ಮನೆಗಳಿಗೆ ಭೇಟಿ ನೀಡಿ ರಾಮದೀಪ ಬೆಳಗಿ, ಮನೆ ಮಂದಿಯೊಂದಿಗೆ ಕುಶಲೋಪರಿ ನಡೆಸಿದ ಶ್ರೀಗಳು ಶ್ರೀರಾಮ ಜಯರಾಮ ಜಯ ಜಯರಾಮ ತ್ರಯೋದಶಿ ಅಕ್ಷರೀ ರಾಮ ಮಂತ್ರ ದೀಕ್ಷೆ ನೀಡಿ, ನಿತ್ಯ ಶುದ್ಧ ಮನಸ್ಸಿನಿಂದ ಈ ಮಂತ್ರ ಜಪಿಸುವಂತೆ ತಿಳಿಸಿದರು.
ಮೂರೂ ಮನೆಯವರು ಶ್ರೀಗಳಿಗೆ ಫಲಪುಷ್ಟ ಸಹಿತ ಗೌರವ ಅರ್ಪಿಸಿದರು.

ಬೆಳಗಿದ ರಾಮದೀಪ
ಶ್ರೀಮಠದ ವತಿಯಿಂದ ಎಲ್ಲ ಮನೆಗಳಿಗೆ ದೀಪ ಒದಗಿಸಿ ರಾಮದೀಪ ಬೆಳಗಿಸಲಾಯಿತು. ಬಡಾವಣೆಯ ಶ್ರೀ ಮೂಕಾಂಬಿಕಾ ಭಜನಾ ಮಂದಿರಕ್ಕೆ ಬಂದು ಶ್ರೀದೇವಿಯ ಮುಂಭಾಗದಲ್ಲಿ ದೀಪ ಹಚ್ಚಿ ಮಂಗಳಾರತಿ ಬೆಳಗಿದರು. ಮುಂಭಾಗದ ಅಂಗಣದಲ್ಲಿ ಸಮಸ್ತ ನಿವಾಸಿಗಳಿಗೆ ಸಂದೇಶ ನೀಡಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸಮಸ್ತ ಹಿಂದೂ ಸಮಾಜದ ಸಹಕಾರ, ಸಹಭಾಗಿತ್ವ ಪಡೆಯಲು ಎಲ್ಲ ಸ್ತರಗಳ ಹಿಂದೂ ಬಂಧುಗಳನ್ನು ಭೇಟಿಯಾಗುತ್ತಿದ್ದು, ಅದರಂತೆ ಇಲ್ಲಿಗೆ ಆಗಮಿಸಿರುವುದಾಗಿ ತಿಳಿಸಿದರು. ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆದು ಇಡೀ ದೇಶಕ್ಕೆ ಶ್ರೀರಾಮನ ಕೃಪೆಯಾಗಿ ಶಾಂತಿ, ಸುಭಿಕ್ಷೆ ಸಮೃದ್ಧಿ ನೆಲೆಸಲು ನಾವೆಲ್ಲ ಪ್ರತಿ ನಿತ್ಯ ಮನೆ ಮನೆಗಳಲ್ಲಿ ರಾಮನಿಗಾಗಿ ದೀಪ ಬೆಳಗಿ ರಾಮಂತ್ರ ಜಪ, ರಾಮ ಭಜನೆ ನಡೆಸಬೇಕು. ಪ್ರತಿಯೊಬ್ಬರಲ್ಲಿ ರಾಮನ ಜೀವನಾದರ್ಶ ನೆಲೆಗೊಳ್ಳಬೇಕು. ನಾವೆಲ್ಲ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದರು.

ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಶ್ರೀಮಠದ ಅಧೀನದ ಮುಚ್ಚಿಲಗೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಲಡ್ಡುಪ್ರಸಾದ ನೀಡಿ ಆಶೀರ್ವದಿಸಿದರು.

ಸರ್ವತ್ರ ಪ್ರಶಂಸೆ
ಶ್ರೀವಿಶ್ವೇಶತೀರ್ಥ ಶ್ರೀಪಾದರು ವಿಧಿವಶರಾಗಿ ಒಂದು ವರ್ಷದೊಳಗೆ ಶ್ರೀಮಠದ ಎಲ್ಲ ಜವಾಬ್ದಾರಿಗಳಿಗೆ ಹೆಗಲುಕೊಟ್ಟ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಗುರುಗಳು ನಿರ್ವಹಿಸಿದ್ದ ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸುವ ಸಂಕಲ್ಪ ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದು ವಿಜಯ ಪೂಜಾರಿ ಪ್ರಶಂಸೆ ವ್ಯಕ್ತಪಡಿಸಿದರು.
ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!