Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರಜಾಪ್ರಭುತ್ವ ಉಳಿಯಲು ದಲಿತರು ಒಂದಾಗಬೇಕು

ಪ್ರಜಾಪ್ರಭುತ್ವ ಉಳಿಯಲು ದಲಿತರು ಒಂದಾಗಬೇಕು

ಉಡುಪಿ: ಅಸ್ಪೃಶ್ಯತೆ ನಿರ್ಮೂಲನೆ ಮತ್ತು ಜಾತಿ ವಿರೋಧಿ ಹಾಗೂ ಆರ್ಥಿಕ ಹೋರಾಟಗಳನ್ನು ಸಾಕಾರಗೊಳಿಸಲು ಅಂಬೇಡ್ಕರ್ ವಾದಿ, ಎಡಪಂಥೀಯರು, ಸಮಾಜವಾದಿಗಳು, ಪ್ರಗತಿಪರರು ಮತ್ತು ದಲಿತರು ತಮ್ಮ ನಡುವಿನ ಒಳಜಗಳ ಬದಿಗಿರಿಸಿ ಒಂದಾಗದಿದ್ದಲ್ಲಿ ಪ್ರಜಾಪ್ರಭುತ್ವವೇ ಬುಡಮೇಲಾಗುವುದರಲ್ಲಿ ಸಂದೇಹವಿಲ್ಲ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಕಳವಳ ವ್ಯಕ್ತಪಡಿಸಿದರು.

ಆದಿವುಡುಪಿ ಮೂಡುಬೆಟ್ಟುವಿನಲ್ಲಿ ಭಾನುವಾರ ಅಂಬೇಡ್ಕರ್ ಯುವಸೇನೆ ನಗರ ಶಾಖೆ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಭಾಷಣ ನೀಡಿದರು.

ನಿರುದ್ಯೋಗ, ಬಡತನ, ದಾರಿದ್ರ್ಯ, ಅಭದ್ರತೆ ಎದುರಿಸುತ್ತಿರುವ ದಲಿತರ ಭವಿಷ್ಯ ಹಾಳಾಗುತ್ತಿದೆ. ದಲಿತರು ಈ ಸಂದರ್ಭದಲ್ಲಿ ಸಮ ಸಮಾಜಕ್ಕಾಗಿ ಹೋರಾಟ ನಡೆಸುವುದು ಅನಿವಾರ್ಯ ಎಂದರು.

ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮೂಡುಬೆಟ್ಟು ನಗರಸಭಾ ಸದಸ್ಯ ಶ್ರೀಶ ಭಟ್ ಘಟಕ ಉದ್ಘಾಟಿಸಿದರು.

ಮುಖ್ಯ ಅತಿಥಿ, ಕೊಡವೂರು ನಗರಸಭಾ ಸದಸ್ಯ ವಿಜಯ್, ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ನಾಯಕರಲ್ಲ. ನಮ್ಮ ರಾಷ್ಟ್ರ ನಾಯಕ ಎಂದರು.

ದಲಿತ ರಾಜಕಾರಣಿ ಗಣೇಶ್ ನೆರ್ಗಿ, ಅಂಬೇಡ್ಕರ್ ಸಾಕಷ್ಟು ಪರಿಶ್ರಮದಿಂದ ಎಳೆದುತಂದ ಹೋರಾಟದ ರಥ, ಕೆಲವರ ಸ್ವಾರ್ಥದಿಂದಾಗಿ ನಿಂತಲ್ಲೇ ನಿಂತಿದೆ. ದಲಿತ ಯುವ ಜನಾಂಗ ಇಂದು ಪ್ರಮಾಣಿಕವಾಗಿ ಅದನ್ನು ಮುಂದಕ್ಕೆ ಎಳೆಯಲು ಕೈಜೋಡಿಸುತ್ತಿರುವುದು ಸಂತಸದಾಯಕ ಎಂದರು.

ಸಮಾಜಸೇವಕ ಮಹಮ್ಮದ್ ಸಾದಿಕ್, ನಗರಸಭೆ ಮಾಜಿ ಸದಸ್ಯ ಗಣಪತಿ ಶೆಟ್ಟಿಗಾರ್, ದಲಿತ ಮುಖಂಡರಾದ ಸುಂದರ ಕಪ್ಪೆಟ್ಟು, ಶೇಖರ್ ಕಂಬಳಕಟ್ಟ, ಶಶಿಕಲಾ ತೊಟ್ಟಂ, ಸುಜಾತ ಸುವರ್ಣ, ರಮೇಶ್ ಪಾಲ್, ಮಂಜುನಾಥ ಕಪ್ಪೆಟ್ಟು ಮೊದಲಾದವರಿದ್ದರು.

ಶಿವ ಚಂಡ್ಕಳ ಪ್ರಸ್ತಾವನೆಗೈದರು. ಸುಮಿತ್ ನೆರ್ಗಿ ಸ್ವಾಗತಿಸಿ, ನಿರೂಪಿಸಿದರು. ವಿಜಯ್ ತೋಕೊಳಿ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!