Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕಬ್ಬಿನಾಲೆಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: 119 ಅರ್ಜಿ ವಿಲೇವಾರಿ

ಕಬ್ಬಿನಾಲೆಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: 119 ಅರ್ಜಿ ವಿಲೇವಾರಿ

ಹೆಬ್ರಿ: ತಾಲೂಕಿನ ಕಬ್ಬಿನಾಲೆಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 119 ಅರ್ಜಿ ಸ್ವೀಕರಿಸಲಾಯಿತು.

ಸ್ಥಳೀಯ ಗೋಪಾಲಕೃಷ್ಣ ದೇವಸ್ಥಾನ ಆವರಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ, ಜಿಲ್ಲೆಯಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿಯ 3ನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಇದಾಗಿದ್ದು, ಜಿಲ್ಲಾ ಕೇಂದ್ರದಿಂದ ಅತ್ಯಂತ ದೂರದಲ್ಲಿದ್ದು, ವಿವಿಧ ಸರ್ಕಾರಿ ಸೌಲಭ್ಯಗಳಿಗಾಗಿ ಜಿಲ್ಲಾ ಮತ್ತು ತಾಲೂಕು ಕಚೇರಿಗಳಿಗೆ ಬರಲು ಕಷ್ಟವಾಗುವ ಗ್ರಾಮಸ್ಥರ ಸಮಸ್ಯೆಗಳನ್ನು ಸ್ಥಳಕ್ಕೇ ತೆರಳಿ ಬಹೆಗರಿಸಲಾಗುತ್ತಿದ್ದು, ಸ್ಥಳೀಯ ಸಮಸ್ಯೆಗಳನ್ನು ಇಲ್ಲಿಯೇ ಬಗೆಹರಿಸಿ, ಸರ್ಕಾರದಿಂದ ಬಗೆಹರಿಸಬಹುದಾದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದರು.

ಕಬ್ಬಿನಾಲೆ, ನಾಡ್ಪಾಲು ಸೇರಿದಂತೆ ಹೆಬ್ರಿ ಮತ್ತು ಕಾರ್ಕಳ ತಾಲೂಕಿನ 11 ಗ್ರಾಮಗಳಲ್ಲಿ ಹುಲಿ ಯೋಜನೆ ಮತ್ತು ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತಂತೆ ಸಾರ್ವಜನಿಕರಿಗೆ ಒಕ್ಕಲೆಬ್ಬಿಸುವ ಭಯ ಇದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ವಸತಿ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಮಸ್ಯೆ ಇದೆ. ಆ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ ಪೂಜಾರಿ ವಿನಂತಿಸಿದರು.

ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದಿಲ್ಲ ಎಂದು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಇಲ್ಲಿನ ವಿವಿಧ ಸಮಸ್ಯೆ ಕುರಿತಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಡೀಮ್ಡ್ ಫಾರೆಸ್ಟ್ ಯೋಜನೆ ಕುರಿತಂತೆ ಕೆಲವು ಸರ್ವೇ ನಂಬರ್ ಗಳನ್ನು ವಿನಾಯತಿ ಮಾಡುವಂತೆ ಈಗಾಗಲೇ ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಅನುಮತಿ ಬಳಿಕ ಆ ಸರ್ವೇ ನಂಬರ್ ಗಳಿಗೆ ಸಂಬಂಧಿಸಿದಂತೆ ಹಕ್ಕುಪತ್ರ ವಿತರಣೆ, ನಿವೇಶನ ನಿರ್ಮಾಣಕ್ಕೆ ಅನುಮತಿ ನೀಡಲು ಸಾಧ್ಯವಾಗಲಿದೆ. ಹುಲಿ ಯೋಜನೆ ಕುರಿತಂತೆ ಜಿಲ್ಲಾಡಳಿತದ ಮೂಲಕ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಕೊಂಕಣಾರಬೆಟ್ಟು ಶಾಲಾ ಆವರಣ ಗೋಡೆ ಕುಸಿತ ಬಗ್ಗೆ ಸಲ್ಲಿಸಿದ ಅರ್ಜಿ ಕುರಿತಂತೆ ಜಿಲ್ಲೆಯ ಎಲ್ಲಾ ಶಾಲೆ, ಅಂಗನವಾಡಿ ದುರಸ್ತಿಗೆ 2 ಲಕ್ಷ ರೂ. ಪ್ರಾಕೃತಿಕ ವಿಕೋಪ ನಿಧಿಯಡಿ ಬಿಡುಗಡೆಗೊಳಿಸಲಾಗುತ್ತಿದ್ದು, ಕಂಪೌಂಡ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಪಿ.ಆರ್.ಇ.ಡಿ. ಇಂಜಿನಿಯರ್ ಗೆ ಸೂಚಿಸಿದರು.

ಕಬ್ಬಿನಾಲೆಯಿಂದ ಮುನಿಯಾಲಿಗೆ ಹೋಗುವ ರಸ್ತೆ ಕಿರಿದಾಗಿದ್ದು, ಬಸ್ ಸಂಚಾರ ಕಷ್ಟವಾಗಿದೆ. ರಸ್ತೆ ಅಗಲಗೊಳಿಸುವಂತೆ, ಮೊಬೈಲ್ ನೆಟ್ ವರ್ಕ್ ಸಮಸ್ಯೆ, ಜಿಯೋ ಸಂಸ್ಥೆ ಕೇಬಲ್ ಅಳವಡಿಸುವಂತೆ, ವಿದ್ಯುತ್ ಕಂಬ ಅಳವಡಿಸಲು ಅರಣ್ಯ ಇಲಾಖೆ ಆಕ್ಷೇಪ ಇತ್ಯಾದಿಗಳ ಬಗ್ಗೆ ಸಾರ್ವಜನಿಕರು ಗಮನ ಸೆಳೆದರು.

ಅದಕ್ಕುತ್ತರಿಸಿದ ಅರಣ್ಯ ಇಲಾಖೆ ಅಧಿಕಾರಿ, ಈ ಎಲ್ಲಾ ಕಾಮಗಾರಿಗಳಿಗೆ ಇಲಾಖೆ ಅಡ್ಡಿಪಡಿಸುತ್ತಿಲ್ಲ. ಆದರೆ, ಕಾಮಗಾರಿ ನಿರ್ವಹಿಸುತ್ತಿರುವ ಇಲಾಖೆಗೆ ಮಾಹಿತಿ ನೀಡಿ, ಅನುಮತಿ ಪತ್ರ ಪಡೆಯುವಂತೆ ತಿಳಿಸಿದರು.

ನೆಟ್ ವರ್ಕ್ ಸಮಸ್ಯೆ ಕುರಿತಂತೆ ಬಿ.ಎಸ್.ಎನ್.ಎಲ್ ಹಾಗೂ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.

ಪಡಿತರ ಅಂಗಡಿಯಲ್ಲಿ ಸ್ಥಳೀಯ ಕುಚ್ಚಿಗೆ ಅಕ್ಕಿ ನೀಡುವ ಕುರಿತ ಸಾರ್ವಜನಿಕರ ಮನವಿಗೆ ಉತ್ತರಿಸಿದ ಜಿಲ್ಲಾಧಿಕಾರಿ, ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾಗುವ ಖರೀದಿ ಕೇಂದ್ರಗಳಿಗೆ ಜಿಲ್ಲೆಯ ರೈತರು ಭತ್ತ ನೀಡಿದಲ್ಲಿ ಸ್ಥಳೀಯ ಕುಚ್ಚಿಗೆ ಅಕ್ಕಿ ನೀಡಲು ಸಾಧ್ಯವಾಗಲಿದೆ. ಆದರೆ, ಜಿಲ್ಲೆಯ ರೈತರು ಇದುವರೆಗೆ 1 ಕ್ವಿಂಟಾಲ್ ಭತ್ತವನ್ನೂ ಖರೀದಿ ಕೇಂದ್ರಗಳಿಗೆ ನೀಡಿಲ್ಲ. ಆದ್ದರಿಂದ ಸ್ಥಳೀಯ ಕುಚ್ಚಿಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.

ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ 29, ಕಂದಾಯ ಇಲಾಖೆಯ 27, ಮೆಸ್ಕಾಂನ 18, ಬಿ.ಎಸ್.ಎನ್.ಎಲ್.ನ 4 ಸೇರಿದಂತೆ ಒಟ್ಟು 119 ಅರ್ಜಿ ಪರಿಶೀಲಿಸಲಾಯಿತು.

ಸ್ಥಳದಲ್ಲೇ ಕೆಲವು ಅರ್ಜಿಗಳು ಸ್ವೀಕೃತಗೊಂಡವು. ಈ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಸವಲತ್ತು ವಿತರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಡಿ.ವೈ.ಎಸ್.ಪಿ. ಜೈಶಂಕರ್, ಜಿ. ಪಂ. ಸದಸ್ಯೆ ಜ್ಯೋತಿ ಹರೀಶ್, ತಾ.ಪಂ. ಅಧ್ಯಕ್ಷ ರಮೇಶ್, ಮುದ್ರಾಡಿ ಗ್ರಾ. ಪಂ. ಅಧ್ಯಕ್ಷ ಮಂಜುನಾಥ ಮೊದಲಾದವರಿದ್ದರು. ಹೆಬ್ರಿ ತಹಸೀಲ್ದಾರ್ ಪುರಂದರ ಸ್ವಾಗತಿಸಿ, ವಂದಿಸಿದರು.

ಸಾರ್ವಜನಿಕರೊಂದಿಗೇ ಜಿಲ್ಲಾಧಿಕಾರಿ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಭೋಜನ ಸವಿದರು. ಕೊಂಕಣಾರಬೆಟ್ಟು ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ನಂತರ ಸೋಮೇಶ್ವರ ಪೇಟೆ ನಾಡ್ಪಾಲು ಸರ್ಜಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಜಗದೀಶ್, ರಾತ್ರಿ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ, ಶಾಲೆಯಲ್ಲಿಯೇ ವಾಸ್ತವ್ಯ ಮಾಡಿದರು.

ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಡಿ.ಎಚ್.ಓ. ಡಾ. ಸುಧೀರಚಂದ್ರ ಸೂಡ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!