Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ಲಭಿಸಿತು ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ಲಭಿಸಿತು ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ

ಉಡುಪಿ: ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ಮತ್ತು ಕಂದಾಯ ಇಲಾಖೆ ಸೇರಿದಂತೆ ಇತರ ಇಲಾಖಾಧಿಕಾರಿಗಳ ಗ್ರಾಮ ವಾಸ್ತವ್ಯದ ಪೈಲಟ್ ಕಾರ್ಯಕ್ರಮ ಶನಿವಾರ ಬ್ರಹ್ಮಾವರ ತಾಲೂಕಿನ ನಾಲ್ಕೂರಿನಲ್ಲಿ ನಡೆಯಿತು.

ಜಿಲ್ಲಾಧಿಕಾರಿ ಜಿ. ಜಗದೀಶ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ನಾಲ್ಕೂರು ಗ್ರಾಮಕ್ಕೆ ಭೇಟಿ ನೀಡಿ, ಸಾರ್ವಜನಿಕರ ವಿವಿಧ ಸಮಸ್ಯೆ ಕುರಿತ 147 ಅರ್ಜಿ ಸ್ವೀಕರಿಸಿದರು. ಬಹುತೇಕ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ರಾಜ್ಯದಲ್ಲಿ ಫೆಬ್ರವರಿಯಿಂದ ಪ್ರತೀ ತಿಂಗಳ 3ನೇ ಶನಿವಾರ ರಾಜ್ಯಾದ್ಯಂತ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ಪೈಲಟ್ ಕಾರ್ಯಕ್ರಮವಾಗಿ ರಾಜ್ಯದಲ್ಲಿಯೇ ಮೊದಲ ಪ್ರಪ್ರಥಮವಾಗಿ ಉಡುಪಿ ಜಿಲ್ಲೆಯ ನಾಲ್ಕೂರು ಗ್ರಾಮ ಪಂಚಾಯತ್ ನಲ್ಲಿ ಆಯೋಜಿಸಲಾಗಿತ್ತು.

ಗ್ರಾಮಸ್ಥರಿಂದ ಸಂಭ್ರಮದ ಸ್ವಾಗತ
ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಗ್ರಾಮಕ್ಕೆ ಅಗಮಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಮತ್ತವರ ತಂಡಕ್ಕೆ ಅದ್ದೂರಿಯ ಸ್ವಾಗತವನ್ನು ಗ್ರಾಮಸ್ಥರು ಕೋರಿದು. ಪೂರ್ಣಕುಂಭ ಸಹಿತ ಚೆಂಡೆ ವಾದ್ಯಗಳ ಗೌರವ ಲಭಿಸಿತು.
ಮೊದಲಿಗೆ ನಾಲ್ಕೂರು ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳ ಸೌಲಭ್ಯ ಪರಿಶೀಲಿಸಿದರು.

ಶಾಲಾವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪರೀಕ್ಷೆ ಎದುರಿಸುವ ಕುರಿತು ಆತ್ಮವಿಶ್ವಾಸ ಮೂಡಿಸಿದರು.

ಅರ್ಜಿ ಸ್ವೀಕಾರ
ಬಳಿಕ ನಾಲ್ಕೂರು ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಅದಾಗಲೇ 53 ಸಾರ್ವಜನಿಕ ಅರ್ಜಿ ಸಲ್ಲಿಕೆಯಾಗಿತ್ತು. ಸ್ಥಳದಲ್ಲೇ 94 ಅರ್ಜಿ ಸ್ವೀಕರಿಸಿದರು. ಡೀಮ್ಡ್ ಫಾರೆಸ್ಟ್, ರಿಸರ್ವ್ ಫಾರೆಸ್ಟ್, ಜಾಗ ಮಂಜೂರಾತಿ ಮುಂತಾದ ಅರ್ಜಿಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ದಿನದಲ್ಲಿ ಸ್ಥಳದಲ್ಲೇ ಆಧಾರ್ ಕಾರ್ಡ್ ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೌತಿ ಖಾತೆ ಬದಲಾವಣೆ ಕುರಿತ ಅರ್ಜಿಗೆ, ವಂಶವೃಕ್ಷ ನೀಡುವ ಮೂಲಕ ಖಾತೆ ಬದಲಾವಣೆಗೆ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ತಹಶೀಲ್ದಾರ್ ಗೆ ಸೂಚಿಸಿದರು. 94ಸಿ ಮತ್ತು ನಮೂನೆ 57ರ ಅರ್ಜಿ ಬಾಕಿ ಉಳಿದಿದ್ದು, ಹೊಸದಾಗಿ ಕಡತ ತಯಾರಿಸಿ ಕಮಿಟಿ ಮುಂದೆ ಮಂಡಿಸಲು ಕ್ರಮ ವಹಿಸಲಾಗುವುದು. ಪಡಿತರಚೀಟಿಗೆ ಸಂಬಂಧಿಸಿದಂತೆ ಅರ್ಜಿ ಸ್ವೀಕೃತಗೊಂಡಿದ್ದು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜನಸಾಮಾನ್ಯರೊಂದಿಗೆ ಬೆರೆತ ಜಿಲ್ಲಾಧಿಕಾರಿ
ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಸಾರ್ವಜನಿಕರಿಗೆ ದೊರೆಯುವ ಸೌಲಭ್ಯ ಕುರಿತು ಮಾಹಿತಿ ಪಡೆದರು. ಆಸ್ಪತ್ರೆ ಪರಿಶೀಲನೆ ಮತ್ತು ಅಗತ್ಯ ಕಡತ ಪರಿಶೀಲಿಸಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕರೊಂದಿಗೆ ಆಡಂಬರಕ್ಕೆ ಅವಕಾಶವಿಲ್ಲದಂತೆ ಸಾಮಾನ್ಯ ಭೋಜನ ಸ್ವೀಕರಿಸಿದ ಜಿಲ್ಲ್ಲಾಧಿಕಾರಿ ಜಿ. ಜಗದೀಶ್, ಬಳಿಕ ಕರ್ಜೆಯಲ್ಲಿನ ಕುಡುಬಿ ಜನಾಂಗದ ಸಿದ್ದ ನಾಯ್ಕ ಮನೆಗೆ ಭೇಟಿ ನೀಡಿ, ಅಲ್ಲಿ ನೆರೆದಿದ್ದ ಕುಡುಬಿ ಜನಾಂಗದವರ ವಿವಿಧ ಸಮಸ್ಯೆ ಆಲಿಸಿದರು. ಅವರ ಯೋಗಕ್ಷೇಮ ಮತ್ತು ಮಕ್ಕಳ ವಿದ್ಯಾಭ್ಯಾಸ, ನಿವೇಶನದ ಅಗತ್ಯತೆ ಕುರಿತು ಮಾಹಿತಿ ಪಡೆದರು. ಕುಡುಬಿ ಜನಾಂಗದ ಸಾಂಪ್ರದಾಯಿಕ ಕಲೆಯಾದ ಗುಮ್ಟೆಯನ್ನು ವೀಕ್ಷಿಸಿದರು. ಸ್ಥಳೀಯರು ತಾವು ಬೆಳೆದ ತರಕಾರಿಗಳನ್ನು ಪ್ರೀತಿಯಿಂದ ಜಿಲ್ಲಾಧಿಕಾರಿಗೆ ನೀಡಿದರು.

ಮಾರಾಳಿ ದಲಿತ ಕಾಲೋನಿಗೆ ಭೇಟಿ ನೀಡಿ, ಅವರ ಸಮಸ್ಯೆ ಕುರಿತು ಅಹವಾಲು ಆಲಿಸಿದರು. ನಂಚಾರು ಸ್ಮಶಾನ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಲಭ್ಯ ಕುರಿತು ಪರಿಶೀಲಿಸಿದರು.

ಕಾರ್ಯಕ್ರಮದಲ್ಲಿ ಜಿ. ಪಂ. ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕ ರವೀಂದ್ರ, ಬ್ರಹ್ಮಾವರ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂ, ತಹಸೀಲ್ದಾರ್ ಕಿರಣ ಗೌರಯ್ಯ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!