Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ರಾಜ್ಯದಲ್ಲಿ 250 ಕೋಟಿ ವೆಚ್ಚದಲ್ಲಿ ದೀನದಯಾಳ್ ಉಪಾಧ್ಯಾಯ ಹಾಸ್ಟೆಲ್ ನಿರ್ಮಾಣ

ರಾಜ್ಯದಲ್ಲಿ 250 ಕೋಟಿ ವೆಚ್ಚದಲ್ಲಿ ದೀನದಯಾಳ್ ಉಪಾಧ್ಯಾಯ ಹಾಸ್ಟೆಲ್ ನಿರ್ಮಾಣ

ಸುದ್ದಿಕಿರಣ ವರದಿ
ಶನಿವಾರ, ಮೇ 14

ರಾಜ್ಯದಲ್ಲಿ 250 ಕೋಟಿ ವೆಚ್ಚದಲ್ಲಿ ದೀನದಯಾಳ್ ಉಪಾಧ್ಯಾಯ ಹಾಸ್ಟೆಲ್ ನಿರ್ಮಾಣ
ಮಣಿಪಾಲ: ರಾಜ್ಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯದ ಕೊರತೆ ಉಂಟಾಗದಂತೆ ರಾಜ್ಯದ ವಿವಿಧ ಭಾಗದಲ್ಲಿ 1,000 ವಿದ್ಯಾರ್ಥಿಗಳ ಸಾಮರ್ಥ್ಯದ ತಲಾ 50 ಕೋಟಿ ರೂ. ವೆಚ್ಚದಲ್ಲಿ 5 ದೀನದಯಾಳ್ ಉಪಾಧ್ಯಾಯ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶನಿವಾರ ಮಣಿಪಾಲದಲ್ಲಿ 4.24 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಇಂದಿರಾ ಗಾಂಧಿ ಮೆಟ್ರಿಕ್ ನಂತರದ ನರ್ಸಿಂಗ್ ವಿದ್ಯಾರ್ಥಿನಿ ನಿಲಯ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ.ಜಾತಿ ಮತ್ತು ಪ.ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ವಿದ್ಯಾರ್ಥಿ ನಿಲಯದಲ್ಲಿ ವಸತಿ ಸೌಲಭ್ಯ ಒದಗಿಸಲು ದೀನದಯಾಳ್ ಉಪಾಧ್ಯಾಯ ಹಾಸ್ಟೆಲ್ ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ರಾಜ್ಯದ 5 ಕಡೆಗಳಲ್ಲಿ ಈ ಹಾಸ್ಟೆಲ್ ನಿರ್ಮಾಣಕ್ಕೆ 250 ಕೋಟಿ ರೂ ವೆಚ್ಚವಾಗಲಿದೆ ಎಂದರು.

ವಸತಿ ಶಾಲೆ ನಿರ್ಮಾಣ
ವಿದ್ಯಾರ್ಥಿ ನಿಲಯಗಳಿಗೆ ಪ್ರತಿ ವರ್ಷ ಬೇಡಿಕೆ ಹೆಚ್ಚುತ್ತಿದ್ದು, ಈ ಬಾರಿ 3.5 ಕೋ. ರೂ. ವೆಚ್ಚದಲ್ಲಿ ರಾಜ್ಯದಲ್ಲಿ 50 ಕನಕದಾಸ ಹಾಸ್ಟೆಲ್ ಗಳ ನಿರ್ಮಾಣ ಮಾಡಲಾಗುತ್ತಿದ್ದು, ಪ.ಜಾತಿ ಮತ್ತು ಪಂಗಡದವರಿಗಾಗಿ ಡಾ| ಬಿ. ಆರ್. ಅಂಬೇಡ್ಕರ್ ಹೆಸರಿನಲ್ಲಿ 100 ವಸತಿ ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು.

ನಾರಾಯಣ ಗುರು ಹೆಸರಿನಲ್ಲಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 29 ಕೋ. ರೂ. ವೆಚ್ಚದಲ್ಲಿ ವಸತಿಶಾಲೆ ನಿರ್ಮಾಣ ಮಾಡಲಾಗುವುದು ಎಂದರು.

ವೆಚ್ಚ ಹೆಚ್ಚಳ
ರಾಜ್ಯದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ 5 ಕೋ. ರೂ. ವೆಚ್ಚದಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸನ್ನು ಈ ವರ್ಷದಿಂದ ಆರಂಭಿಸಲಾಗುತ್ತಿದ್ದು, 6ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣೆ ಕಲೆ ಕರಾಟೆ ಕಲಿಸಲಾಗುವುದು ಹಾಗೂ ಹಾಸ್ಟೆಲ್ ನ ಬಾಲಕರಿಗೂ ಕರಾಟೆ ಕಲಿಸುವ ಚಿಂತನೆ ಇದ್ದು, ಹಾಸ್ಟೆಲ್ ಗಳಿಗೆ ನೀಡಲಾಗುವ ಊಟೋಪಚಾರದ ವೆಚ್ಚವನ್ನು ಹೆಚ್ಚಿಸಲಾಗುವುದು ಎಂದರು.

ಉಡುಪಿ ನಗರದಲ್ಲಿ 250 ಮಂದಿ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ 6.5 ಕೋ. ರೂ. ವೆಚ್ಚದ ಹಾಸ್ಟೆಲ್ ನಿರ್ಮಾಣಕ್ಕೆ ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಅದಕ್ಕೆ ಈಗಾಗಲೇ ಅಗತ್ಯ ಮಂಜೂರಾತಿ ಹಾಗೂ ಹಣಕಾಸು ಸೌಲಭ್ಯ ಲಭ್ಯವಿದೆ ಎಂದರು.

ಶಿಸ್ತು ರೂಢಿಸಿಕೊಳ್ಳಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್, ಜಿಲ್ಲೆಯಲ್ಲಿ ಪ್ರತಿ ವರ್ಷ ಹಾಸ್ಟೆಲ್ ಗಳ ಬೇಡಿಕೆ ಅಧಿಕವಾಗುತ್ತಿದ್ದು, ಇನ್ನು 2 ವರ್ಷದಲ್ಲಿ ಜಿಲ್ಲೆಯಲ್ಲಿ ಅಗತ್ಯವಿರುವ ಸಂಖ್ಯೆಯ ಹಾಸ್ಟೆಲ್ ಗಳ ನಿರ್ಮಾಣ ಮಾಡಲಾಗುವುದು.

ವಿದ್ಯಾರ್ಥಿಗಳು ಹಾಸ್ಟೆಲ್ ಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಶಿಸ್ತು ರೂಢಿಸಿಕೊಂಡು, ಉತ್ತಮ ಶಿಕ್ಷಣ ಪಡೆಯಬೇಕು ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಎಚ್., ಕರ್ನಾಟಕ ಗೃಹ ಮಂಡಳಿ ಸಹಾಯಕ ಇಂಜಿನಿಯರ್ ಸಹನಾ ಇದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ದೇವೀಂದ್ರ ಎಸ್ ಬಿರಾದಾರ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ, ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!